ಜಗಳೂರು: ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 140 ರಿಂದ 150 ಸ್ಥಾನ ಪಡೆದು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಕೂಡ ಅಷ್ಟೇ ಸತ್ಯ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದರು.
ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ನಡೆದ ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರುತ್ತೇವೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಹಣ, ಹೆಂಡ, ತೋಳ್ಬಲದಿಂದ ಜಾತಿ-ಜಾತಿಗಳಲ್ಲಿ ವಿಷಬೀಜ ಬಿತ್ತಿ ಜಯ ಗಳಿಸುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಅವರ ಕನಸು ಎಂದಿಗೂ ನನಸಾಗಲ್ಲ.
ರಾಜ್ಯಾದ್ಯಂತ ಕೈಗೊಂಡಿರುವ ಜನಸಂಕಲ್ಪ ಯಾತ್ರೆಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಜನ ಬಿಜೆಪಿ ಅಪ್ಪಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ರಾಜ್ಯ ಪ್ರವಾಸ ಮಾಡಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅ ಧಿಕಾರಕ್ಕೆ ತರುತ್ತೇವೆ. ರಾಜ್ಯದ 224 ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚು ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ ಕೀರ್ತಿ ಶಾಸಕ ಎಸ್.ವಿ. ರಾಮಚಂದ್ರ ಅವರಿಗೆ ಸಲ್ಲುತ್ತದೆ. ನಾನು ಕೂಡ ನನ್ನ ಕ್ಷೇತ್ರಕ್ಕೆ ಇಷ್ಟೊಂದು ಅನುದಾನ ತಂದಿಲ್ಲ ಎಂದು ಶಾಸಕ ರಾಮಚಂದ್ರಗೆ ಶಹಬ್ಟಾಸ್‌ಗಿರಿ ನೀಡಿದರು.