ಬೆಂಗಳೂರು: ಚಾಮರಾಜನಗರ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುನಿಸಿಕೊಂಡಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರು ದಿಢೀರ್ ಭೇಟಿ ನೀಡಿ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಬುಧವಾರ ಸಂಜೆ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಇಬ್ಬರೂ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಲ್ಲದೆ, ಕೊಪ್ಪಳದಲ್ಲಿ ಗುರುವಾರ ನಡೆಯಲಿರುವ ಪಕ್ಷದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.
ರವಿಕುಮಾರ್ ಹಾಗೂ ರಾಜೇಶ್ ಅವರ ಭೇಟಿ ಹಾಗೂ ಮಾತುಕತೆ ನಂತರ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಸಹ ದೂರವಾಣಿ ಮೂಲಕ ಮಾತನಾಡಿ ಆಹ್ವಾನ ನೀಡಿದರು. ಕೊನೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಡಿಯೂರಪ್ಪ ಒಪ್ಪಿದ್ದಾರೆ ಎಂದು ಹೇಳಲಾಗಿದೆ.
ಜೆ.ಪಿ.ನಡ್ಡಾ ಅವರ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿರಲಿಲ್ಲ. ಚಾಮರಾಜನಗರದಲ್ಲಿ ಜನಸಂಕಲ್ಪ ಯಾತ್ರೆ ಎಂದು ನಿಗದಿ ಮಾಡಿ ನಂತರ ಅದನ್ನು ಸರ್ಕಾರಿ ಕಾರ್ಯಕ್ರಮವಾಗಿ ಪರಿವರ್ತನೆ ಮಾಡಿದ್ದರಿಂದ ಯಡಿಯೂರಪ್ಪ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಈ ವಿಚಾರದಲ್ಲಿ ಯಡಿಯೂರಪ್ಪ ಮುನಿಸಿಕೊಂಡಿದ್ದರು ಎನ್ನಲಾಗಿದೆ.
ಬಿ.ಎಸ್. ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿರುವ ಸ್ಥಾನಮಾನದ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ ಹಾಗೂ ಅನುಮಾನ ಪಡುವಂತಿಲ್ಲ. ಅವರು ನಮ್ಮ ಸರ್ವಶ್ರೇಷ್ಠ ನಾಯಕರು.
– ಗೋವಿಂದ ಕಾರಜೋಳ, ಜಲ ಸಂಪನ್ಮೂಲ ಸಚಿವ