“ಛಲದಂಕಮಲ್ಲ’ ಎಂದು ಕರ್ನಾಟಕ ರಾಜಕೀಯದಲ್ಲಿ ಖ್ಯಾತರಾದ ಯಡಿಯೂರಪ್ಪ ಆ ಅಲಿಖೀತ ಬಿರುದಿಗೆ ತಕ್ಕಂತೆ ನಡೆದುಕೊಂಡ ವರು. ಯಾರು ಆಗುವುದಿಲ್ಲ ಎಂದುಕೊಂಡಿದ್ದರೋ, ಅದನ್ನು ಸಾಧಿಸಿ ತೋರಿಸಿದವರು. ಬಿಜೆಪಿಯನ್ನು ರಾಜ್ಯದ ಮಣ್ಣಲ್ಲಿ ಉತ್ತು ಬಿತ್ತು ಬೆಳೆತೆಗೆದವರು ಯಡಿಯೂರಪ್ಪ. ಆರ್‌ಎಸ್‌ಎಸ್‌ನಲ್ಲಿ ಪಳಗಿದರೂ, ಅವರು ರೈತ ನಾಯಕ ಎಂದೇ ಹೆಸರು ಪಡೆದವರು. ತಾವೇ ಮುಂದೆ ನಿಂತು ಪಕ್ಷವನ್ನು ಒಂದೊಂದು ಮೆಟ್ಟಿಲು ಏರಿಸುತ್ತಾ ಅಧಿಕಾರದ ಅಟ್ಟಣಿಗೆಗೆ ಏರಿಸಿದವರು.
4 ಬಾರಿ ಮುಖ್ಯಮಂತ್ರಿಯಾಗಿ ರಾಜ್ಯ ರಾಜಕೀಯದಲ್ಲಿ ಮೇರುವ್ಯಕ್ತಿತ್ವ ಹೊಂದಿದ ಯಡಿಯೂರಪ್ಪ, “ಅನಿವಾರ್ಯ’ವಾಗಿ ತಮ್ಮ 79ನೇ ವಯಸ್ಸಿನಲ್ಲಿ ರಾಜೀನಾಮೆ ನೀಡಬೇಕಾದ ಸಂದರ್ಭ ಬಂದಿದೆ. ಅವರೇ ಹೇಳುವಂತೆ ಆಗಾಗ “ಅಗ್ನಿ ಪರೀಕ್ಷೆ’ಗಳನ್ನು ಎದುರಿಸಿಕೊಂಡೇ ಬಂದವರು ಅವರು. ಅದು ಅವರದೇ ಪಕ್ಷ ದೊಳಗಿನ ರಾಜಕೀಯದಿಂದ ಇರಬಹುದು, ಪ್ರಾಕೃತಿಕ ಕಾರಣ ಗಳಿಂದ ಇರಬಹುದು. ಅಥವಾ ಅನಿವಾರ್ಯ ರಾಜಕೀಯ ಸಂದರ್ಭಗಳಲ್ಲಿ ಇರಬಹುದು.
ಪಕ್ಷದ ಆಂತರಿಕ ಬೇಗುದಿ ಅನುಭವಿಸಿದ ಅವರು ಲೋಕಾ ಯುಕ್ತ ತನಿಖೆ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡ ಬೇಕಾಯಿತು. ತಮ್ಮನ್ನು ಮತ್ತೆ ಸಿಎಂ ಮಾಡದ ಪಕ್ಷದ ನಾಯಕರ ಮೇಲಿನ ಸಿಟ್ಟಿನಿಂದ ಕೆಜೆಪಿ ಕಟ್ಟಿ ಬಿಜೆಪಿ ಮುಂದೆ ಅಧಿಕಾರ ದಿಂದ ದೂರಸರಿಯುವಂತಾಯಿತು. ಕೊನೆಗೆ ಮತ್ತೆ ಯಡಿಯೂ ರಪ್ಪ ಅವರನ್ನೇ ನೆಚ್ಚಿಕೊಂಡ ಬಿಜೆಪಿ ಮತ್ತೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವಂತೆ ಮಾಡಿದರು. ಜೆಡಿಎಸ್-ಕಾಂಗ್ರೆಸ್ ದೋಸ್ತಿಯಾದಾಗ ಆ ಸರ್ಕಾರದ ಶಾಸಕರ “ರಾಜೀ ನಾಮೆ’ ಸಹಾಯದಿಂದ ಮತ್ತೆ ಪಕ್ಷವನ್ನು ಅಧಿಕಾರಕ್ಕೇರಿಸಿದರು.
ಬಿಜೆಪಿಯಲ್ಲಿ 75 ವರ್ಷ ವಯಸ್ಸಾದವರು ಅಧಿಕಾರದಿಂದ ದೂರ ಇರಬೇಕೆಂಬ ನಿಯಮ ಮೀರಿ ಯಡಿಯೂರಪ್ಪ ಅವರ ಪಕ್ಷಪ್ರೇಮ ಪರಿಗಣಿಸಿ ಮುಖ್ಯಮಂತ್ರಿ ಅವಕಾಶ ನೀಡಲಾಯಿತು. ಈಗ ಅನಿವಾರ್ಯವಾಗಿ ರಾಜೀನಾಮೆ ನೀಡಿ ಪಕ್ಷದ ನಾಯಕತ್ವ ವನ್ನು ಮುಂದಿನ ನಾಯಕನ ಹೆಗಲುಹೊರಿಸಲು ಸಿದ್ಧರಾಗಿದ್ದಾರೆ.
ಗೌರವಯುತವಾಗಿ ಅಧಿಕಾರ ಬಿಟ್ಟುಕೊಟ್ಟಿರುವ ಯಡಿ ಯೂರಪ್ಪ ಬಿಜೆಪಿ ರಾಷ್ಟ್ರೀಯ ನಾಯಕರ ನಿಲುವಿಗೆ ಗೌರವಕೊಟ್ಟು ಪಕ್ಷದ ಶಿಸ್ತನ್ನು ಪಾಲಿಸಿದ್ದಾರೆ. ಅವರ ಅಪೂರ್ವ ನಾಯಕತ್ವ ಗುಣ, ದೂರದರ್ಶಿತ್ವದ ಆಡಳಿತ ಎಲ್ಲ ರಾಜಕಾರಣಿಗಳಿಗೆ ಮಾದರಿ. ಅವರ ಅನುಭವವನ್ನು ಪಕ್ಷ ಬಳಸಿಕೊಳ್ಳಬೇಕು.
ಹೌದು, ಕಾಂಗ್ರೆಸ್ಸೇತರ ರಾಜಕೀಯದಲ್ಲಿ ಅತ್ಯಂತ ಪರಿಶ್ರಮದಿಂದ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಿ ತಾವೂ ಅಧಿಕಾರ ನಡೆಸಿ ರಾಜ್ಯಕ್ಕೆ ತನ್ನದೇ ಆದ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಮುಂದಿನ ಅಧಿಕಾರಾರೂಢರೂ ಅವರ ಅನುಭವದ ಪಾಠವನ್ನೂ ಕಲಿತು ಕಲ್ಯಾಣ ರಾಜ್ಯ ಕರ್ನಾಟಕವಾಗಲಿ. ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು; ಹಳೆ ತತ್ವ, ಹೊಸ ಯುಕ್ತಿ ಒಡಗೂಡೆ ಧರ್ಮ ಎಂಬ ಕವಿ ವಾಣಿ ನಿಜವಾಗಲು ಶ್ರಮಿಸಲಿ.