Advertisement

ಬಿಎಸ್‌-6 ವಾಹನ ಏನಿದು ಕಂಪನ?

11:27 AM Oct 05, 2019 | sudhir |

ದೇಶದ ಕೋಟ್ಯಂತರ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಸುವ ಹಾಗೂ ಆರ್ಥಿಕತೆಗೆ ಭದ್ರ ಬುನಾದಿಯಾಗಿರುವ ಆಟೋಮೊಬೈಲ್‌ ಉದ್ಯಮ ಸದ್ಯ ಕುಸಿದಿದೆ. ಹಲವು ಕಂಪನಿಗಳು ತಮ್ಮ ಉತ್ಪಾದನೆ ಸ್ಥಗಿತಗೊಳಿಸಿ, ಮೂರೂವರೆ ಲಕ್ಷ ನೌಕರರನ್ನು ಮನೆಗೆ ಕಳುಹಿಸಿವೆ. ದೇಶದ ವಾಹನ ಮಾರಾಟದ ಸಂಖ್ಯೆ ಕಳೆದ 20 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಉದ್ದಿಮೆಗಳು ತಿಳಿಸಿವೆ. ಆಟೋಮೊಬೈಲ್‌ ಉದ್ದಿಮೆ ಕುಸಿತಕ್ಕೆ ಭಾರತ್‌ ಸ್ಟೇಜ್‌-6 ವಾಹನ (ಬಿಎಸ್‌-6) ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ವಿತ್ತ ಸಚಿವರು ಕೂಡ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಆಟೋಮೊಬೈಲ್‌ ಉದ್ದಿಮೆ ಮೇಲೆ ಬಿಎಸ್‌-6 ಪರಿಣಾಮ ಬೀರಿರುವುದಂತೂ ಖಚಿತವಾಗಿದೆ. ಹಾಗಾದರೆ ಏನಿದು ಬಿಎಸ್‌-6?, ಇದರಿಂದ ಈಗಿರುವ ವಾಹನಗಳ (ಬಿಎಸ್‌-4) ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಎಂಬುದರ ಕುರಿತು ಮಾಹಿತಿ ಇಲ್ಲಿದೆ.

Advertisement

ಏನಿದು ಬಿಎಸ್‌-6?
ಭಾರತ್‌ ಸ್ಟೇಜ್‌-6 ವಾಯು ಮಾಲಿನ್ಯ ಪರಿಮಾಣವನ್ನು ಸಂಕ್ಷಿಪ್ತವಾಗಿ ಬಿಎಸ್‌-6 ಎನ್ನಲಾಗುತ್ತದೆ. ಇದನ್ನು ಯುರೋಪ್‌ ಸೇರಿದಂತೆ ಮತ್ತಿತರ ದೇಶಗಳಲ್ಲಿ ಯುರೋ-6 ಎಂದು ಕರೆಯಲಾಗುತ್ತಿದೆ. ಭಾರತದಲ್ಲಿ ವಾಹನಗಳಿಂದ ಹೊರ ಸೂಸುವ ವಿಷಕಾರಿ ಅನಿಲ ಪ್ರಮಾಣವನ್ನು ಅಳೆಯಲು ಹಾಗೂ ವಾಹನಗಳ ಮಾಲಿನ್ಯ ಮಿತಿಗೆ ಮಾನದಂಡವನ್ನು ನಿಗದಿ
ಪಡಿಸಲು 2000ರಲ್ಲಿ ಭಾರತ್‌ ಸ್ಟೇಜ್‌ (ಬಿಎಸ್‌) ಆರಂಭಿಸಲಾಯಿತು.ಇದಕ್ಕೆ ಅನುಗುಣವಾಗಿ ಕ್ರಮೇಣ ಬಿಎಸ್‌-1, ಬಿಎಸ್‌-2, ಬಿಎಸ್‌-3, ಬಿಎಸ್‌-4 ಮಾನದಂಡ ನಿಗದಿಸಲಾಯಿತು. ಇದೀಗ ಬಿಎಸ್‌-4 ವಾಹನಗಳು ಚಾಲ್ತಿಯಲ್ಲಿವೆ. ತ್ವರಿತಗತಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ತಗ್ಗಿಸಲು ಬಿಎಸ್‌-5 ಅನ್ನು ಕೈಬಿಟ್ಟು ಬಿಎಸ್‌-6 ಆರಂಭಿಸಲಾಗುತ್ತಿದೆ. 2020ರ ಎಪ್ರಿಲ್‌ 1ರಿಂದ ಕಡ್ಡಾಯವಾಗಿ ಬಿಎಸ್‌-6 ಜಾರಿಗೆ ತರಲು ಸುಪ್ರೀಂ ಕೋರ್ಟ್‌ ಗಡುವು ನೀಡಿದೆ.

ಬಿಎಸ್‌-4 ಹಾಗೂ ಬಿಎಸ್‌-6 ನಡುವಿನ ವ್ಯತ್ಯಾಸ?
ವಾಯು ಮಾಲಿನ್ಯ ಪ್ರಮಾಣದ ಮಿತಿಯನ್ನು ಬಿಎಸ್‌ ನಿರ್ಧರಿಸುತ್ತದೆ. ಗುಣಮಟ್ಟದ ಇಂಧನ ಬಳಸುವುದು ಬಿಎಸ್‌-4 ವಾಹನ ಹಾಗೂ ಬಿಎಸ್‌-6 ವಾಹನ ನಡುವಿನ ಪ್ರಮುಖ ವ್ಯತ್ಯಾಸವಾಗಿದೆ. ಬಿಎಸ್‌-6 ಬಳಕೆಯಿಂದ
ಭಾರೀ ಪ್ರಮಾಣದಲ್ಲಿ ವಾಯು ಮಾಲಿನ್ಯ ಪ್ರಮಾಣ ಇಳಿಕೆಯಾಗಲಿದೆ.

ಬಿಎಸ್‌-4ನಲ್ಲಿ ಗಂಧಕ (ಸಲ#ರ್‌)
ಪ್ರಮಾಣ 50ರಷ್ಟಿದ್ದರೆ, ಬಿಎಸ್‌-6ನಲ್ಲಿ 10ರಷ್ಟು ಇರಲಿದೆ. ಡಿಸೇಲ್‌ ಬಳಕೆ ಕಾರುಗಳಲ್ಲಿ ಶೇ.70 ರಷ್ಟು ನೈಟ್ರೋಜನ್‌ ಆಕ್ಸೆ„ಡ್‌ ಪ್ರಮಾಣ ಕಡಿಮೆಯಾದರೆ, ಪೆಟ್ರೋಲ್‌ ಬಳಕೆ ಕಾರುಗಳಲ್ಲಿ ಶೇ.25ರಷ್ಟು ಇಳಿಕೆಯಾಗಲಿದೆ.

ಆಟೋಮೊಬೈಲ್‌ ಕಂಪನಿಗಳಿಗೆ ಹೊರೆ
ತಂತ್ರಜ್ಞಾನ ಸುಧಾರಿತ ಬಿಎಸ್‌-6 ವಾಹನಗಳ ಉತ್ಪಾದನೆಗೆ ಆಟೋಮೊಬೈಲ್‌ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ಮುಂದಿನ ಏ.1ರ ಬಳಿಕ ಬಿಎಸ್‌-4 ವಾಹನಗಳ ಮಾರಾಟ ನಿಷೇಧಿಸಿರುವುದರಿಂದ ಬಿಎಸ್‌-6 ವಾಹನಗಳನ್ನು ನಿಗದಿತ ಅವಧಿಯಲ್ಲಿ ಉತ್ಪಾದಿಸಬೇಕಾಗುತ್ತದೆ.

Advertisement

ವಾಹನಗಳ ಬೆಲೆ ಏರಿಕೆಯಾಗುತ್ತಾ?
ಬಿಎಸ್‌-6 ವಾಹನಗಳ ಉತ್ಪಾದನೆ ವೆಚ್ಚ ಏರಿಕೆಯಾಗುವುದರಿಂದ ಇದರ ಹೊರೆಯನ್ನು ಕಂಪನಿಗಳು ಗ್ರಾಹಕರಿಗೆ ಹೊರಿಸುತ್ತ¤ವೆ. ಹೀಗಾಗಿ
ವಾಹನಗಳ ಬೆಲೆಗಳ ದುಬಾರಿಯಾಗಲಿದೆೆ. ಬಿಎಸ್‌-4 ಹಾಗೂ ಬಿಎಸ್‌-6 ಪೆಟ್ರೋಲ್‌ ಕಾರುಗಳ ತಂತ್ರಜ್ಞಾನದಲ್ಲಿ ಅಷ್ಟಾಗಿ ವ್ಯತ್ಯಾಸ ಇರುವುದಿಲ್ಲ. ಹೀಗಾಗಿ ಬಿಎಸ್‌-6 ಪೆಟ್ರೋಲ್‌ ಎಂಜಿನ್‌ಗಳ ಕಾರುಗಳ ಬೆಲೆ ಏರಿಕೆಯಲ್ಲಿ ಅಷ್ಟಾಗಿ ಏರಿಕೆಯಾಗುವುದಿಲ್ಲ. ಆದರೆ, ಡೀಸೆಲ್‌ ಕಾರುಗಳು ಬೆಲೆ 2 ಲಕ್ಷ ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ, ಈ ಡೀಸೆಲ್‌ ಕಾರುಗಳ ಉತ್ಪಾದನೆಯನ್ನು ನಿಲ್ಲಿಸುವ ಸಂಭವ ಇದೆ. ಈಗಾಗಲೇ ಮಾರುತಿ ಸುಜುಕಿ ಕಂಪನಿಯು, ಏಪ್ರಿಲ್‌ ಬಳಿಕ ಡೀಸೆಲ್‌ ಎಂಜಿನ್‌ ವಾಹನಗಳ ತಯಾರಿಕೆಯನ್ನು ನಿಲ್ಲಿಸುವುದಾಗಿ ಘೋಷಿಸಿದೆ.

ಅರ್ಥ್ ಮೂವರ್‌ಗಳ ಬೆಲೆ ಏರಿಕೆ: ಅರ್ಥ್ಮೂವರ್‌ಗಳಾದ ಟ್ರ್ಯಾಕ್ಟರ್‌, ಜೆಸಿಬಿ, ಹಿಟಾಚಿ, ರೋಲರ್‌ ಮತ್ತಿತರ ಯಂತ್ರೋಪಕರಣಗಳು ಸದ್ಯ ಡೀಸೆಲ್‌ ಎಂಜಿನ್‌ ಹೊಂದಿವೆ. ಬಿಎಸ್‌-6 ಅರ್ಥ್ಮೂವರ್‌ಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಬಿಎಸ್‌-6 ಜಾರಿಯಾದರೆ ಬಿಎಸ್‌-4 ವಾಹನಗಳ ಕತೆ ಏನು?
ಸದ್ಯ ಚಾಲ್ತಿಯಲ್ಲಿರುವ ವಾಹನಗಳಿಗೆ ಯಾವುದೇ ತೊಂದರೆ ಇಲ್ಲ. 2020 ಎ.1ರ ಬಳಿಕ ಕಂಪನಿಗಳು ಬಿಎಸ್‌-4 ವಾಹನ ಮಾರಾಟ ಮಾಡುವಂತಿಲ್ಲ. ಇದಕ್ಕಿಂತ ಮೊದಲ ನೋಂದಣಿಯಾದ ವಾಹನಗಳನ್ನು ಅವುಗಳ ನೋಂದಣಿ ಅವಧಿ(15 ವರ್ಷ) ಪೂರ್ಣಗೊಳ್ಳುವವರೆಗೂ ಬಳಸಬಹುದು. ನೋಂದಣಿ ಅವಧಿ ಪೂರ್ಣಗೊಂಡ ಬಳಿಕ ಕೇಂದ್ರ ಸರ್ಕಾರವು ಹೊಸ ಕಾಯ್ದೆಯನ್ನು ಜಾರಿಗೆ ತಂದು ಇವುಗಳನ್ನು ನಿಷೇಧಿಸುವ ಸಾಧ್ಯತೆ ಇದೆ.

ಬಿಎಸ್‌-4, ಬಿಎಸ್‌-6 ಇಂಧನ ಬಳಕೆ ವ್ಯತ್ಯಾಸ
ಬಿಎಸ್‌-4 ವಾಹನಗಳಿಗೆ ಬಿಎಸ್‌-6 ಇಂಜಿನ್‌ ಇಂಧನ ಬಳಸಲು ಯಾವುದೇ ಅಡ್ಡಿ ಇಲ್ಲ ಎಂದು ಕಂಪನಿಗಳು ತಿಳಿಸಿವೆ. ಆದರೆ, ಬಿಎಸ್‌-6 ವಾಹನಗಳಿಗೆ ಬಿಎಸ್‌-4 ಇಂಧನ ಬಳಸುವಂತಿಲ್ಲ. ಕೆಲ ಕಂಪನಿಗಳು ಬಳಸಬಹುದು ಎಂದು ಹೇಳಿವೆಯಾದರೂ ಎಂಜಿನ್‌ಗಳ ಕಾರ್ಯಕ್ಷಮತೆ ಹಾಗೂ ದಕ್ಷತೆ ಮೇಲೆ ಪರಿಣಾಮ ಬೀರಲಿದೆ ಎಂದು ಕಂಪನಿಗಳು ತಿಳಿಸಿವೆ. ಬಿಎಸ್‌-6 ವಾಹನಗಳು ರಸ್ತೆಗಳಿದ ಬಳಿಕವೇ ಗೊಂದಲಗಳು ನಿವಾರಣೆಯಾಗಲಿವೆ.

ಬಿಎಸ್‌-6 ಇಂಧನ ಬೆಲೆ ಏರಿಕೆಯಾಗುತ್ತಾ?
ಬಿಎಸ್‌-6 ಇಂಧನಕ್ಕೆ 2020ರ ಏಪ್ರಿಲ್‌ 1ರ ಬಳಿಕ ಬೇಡಿಕೆ ಹೆಚ್ಚಾಗಲಿದೆ. ಇದಕ್ಕಾಗಿ ತೈಲ ಕಂಪನಿಗಳು ಸಿದ್ಧತೆ ಮಾಡಿಕೊಂಡಿವೆ. ಈ ಸುಧಾರಿತ ತಂತ್ರಜ್ಞಾನದ ಇಂಧನ ತಯಾರಿಕೆಗೆ ತೈಲ ಕಂಪನಿಗಳು 30 ಸಾವಿರ ಕೋಟಿ ರೂ.ಗೂ ಅಧಿಕ ಪ್ರಮಾಣದ ಹಣ ಹೂಡಿಕೆ ಮಾಡಲಿವೆ. ಹೀಗಾಗಿ ಈ ಇಂಧನ ಬೆಲೆ ಕನಿಷ್ಠ ಕೆಲ ಪೈಸೆಗಳಿಂದ ಗರಿಷ್ಠ 2 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ನವದೆಹಲಿಯಲ್ಲಿ ಬಿಎಸ್‌-6 ಇಂಧನ ಲಭ್ಯವಿದೆ. ಮುಂದಿನ ವರ್ಷ ದೇಶದ ಎಲ್ಲ ನಗರಗಳಲ್ಲೂ ಸಿಗಲಿದೆ. ಇತ್ತೀಚೆಗಷ್ಟೇ ವಿವಿಧ ಕಂಪೆನಿಗಳು ಬಿಎಸ್‌-6 ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

– ನಿರಂಜನ್‌

Advertisement

Udayavani is now on Telegram. Click here to join our channel and stay updated with the latest news.

Next