ಹೊಸದಿಲ್ಲಿ: ದೆಹಲಿಯ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿ( ಬಿಆರ್‌ಎಸ್ ) ನಾಯಕಿ ಕೆ.ಕವಿತಾ ಅವರನ್ನು ದೆಹಲಿ ನ್ಯಾಯಾಲಯ ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಸ್ಟಡಿ ವಿಚಾರಣೆ ವಿಸ್ತರಿಸಲು ಜಾರಿ ನಿರ್ದೇಶನಾಲಯ ಕೋರದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಈ ಆದೇಶ ಹೊರಡಿಸಿದ್ದಾರೆ.
ಮಾ. 16 ರಂದು 7 ದಿನಗಳ ಇಡಿ ಕಸ್ಟಡಿಗೆ ಕವಿತಾ ಅವರನ್ನು ಒಪ್ಪಿಸಲಾಗಿತ್ತು. ಕಳೆದ ಶನಿವಾರ ಅದನ್ನು ಮೂರು ದಿನಗಳವರೆಗೆ ವಿಸ್ತರಿಸಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ ಅಪ್ರಾಪ್ತ ಮಗನ ಪರೀಕ್ಷೆಯ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡುವಂತೆ ಕವಿತಾ ಪರ ವಕೀಲ ನಿತೇಶ್ ರಾಣಾ ಕೋರಿದರು.
ದೆಹಲಿಯ ವಿಚಾರಣಾ ನ್ಯಾಯಾಲಯ ಕವಿತಾ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಏಪ್ರಿಲ್ 1 ರಂದು ವಿಚಾರಣೆ ನಡೆಸಲಿದೆ.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕೆ ಕವಿತಾ ಅವರನ್ನು ಮಾರ್ಚ್ 15 ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು.