Advertisement

ಬಿಆರ್ ಎಸ್-ಜೆಡಿಎಸ್ ಮೈತ್ರಿ; ಚುನಾವಣೆ ಒಟ್ಟಾಗಿ ಎದುರಿಸುತ್ತೇವೆ: ಹೆಚ್ ಡಿಕೆ

07:36 PM Oct 05, 2022 | Team Udayavani |

ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನೇತೃತ್ವದ ʼಭಾರತ್ ರಾಷ್ಟ್ರ ಸಮಿತಿʼ (ಬಿಆರ್ ಎಸ್ ) ಜತೆ ಜಾತ್ಯತೀತ ಜನತಾದಳವೂ ಮಿತ್ರಪಕ್ಷವಾಗಿ ಸಕ್ರಿಯವಾಗಿ ಕೆಲಸ ಮಾಡಲಿದೆ ಹಾಗೂ ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ಒಟ್ಟಾಗಿ ಎದುರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

Advertisement

ಹೈದರಾಬಾದ್ʼನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವನ್ನು ಬಿಆರ್ ಎಸ್ ಹೆಸರಿನಲ್ಲಿ ರಾಷ್ಟ್ರೀಯ ಪಕ್ಷವನ್ನಾಗಿ ಘೋಷಣೆ ಮಾಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಬೆಂಗಳೂರಿಗೆ ಹೊರಡುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿ, ಈ ಮೊದಲಿನಿಂದಲೂ ಜೆಡಿಎಸ್ ಮತ್ತು ಟಿಆರ್ ಎಸ್ ಪಕ್ಷಗಳು ಸಹಜ ಮಿತ್ರಪಕ್ಷಗಳಾಗಿದ್ದವು. ಪರಸ್ಪರ ವಿಶ್ವಾಸದಿಂದ ಕೆಲಸ ಮಾಡಿಕೊಂಡು ಬಂದಿವೆ. ಈಗ ಟಿಆರ್ ಎಸ್ ರಾಷ್ಟ್ರೀಯ ಪಕ್ಷವಾಗಿ ಬಿಆರ್ ಎಸ್ ಹೆಸರಿನಲ್ಲಿ ಹೊರಹೊಮ್ಮಿರುವುದನ್ನು ನಮ್ಮ ಪಕ್ಷ ಮುಕ್ತಮನಸ್ಸಿನಿಂದ ಸ್ವಾಗತಿಸುತ್ತಿದೆ. ಮುಂದಿನ ದಿನಗಳಲ್ಲಿ ನಾವು ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದರು.

2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಆರ್ ಎಸ್ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿವೆ. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ-ಕಾಂಗ್ರೆಸ್ ಮುಕ್ತ್ ರಾಜಕೀಯ ವಾತಾವರಣವಿದೆ. ಅದೇ ಸ್ಥಿತಿಯನ್ನು ಕರ್ನಾಟದಲ್ಲೂ ತರಲು ನಾನು ಮತ್ತು ಚಂದ್ರಶೇಖರ್ ರಾವ್ ಅವರೂ ನಿರ್ಧಾರ ಮಾಡಿದ್ದೇವೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು‌ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾದ ಪೂರ್ಣ ಬಹುಮತದ ಸರಕಾರ ರಚನೆ ಮಾಡುವ ಬಗ್ಗೆ ಎರಡೂ ಪಕ್ಷಗಳು ಸದೃಢವಾಗಿ ಕೆಲಸ ಮಾಡಲಿವೆ. ಸಂಪೂರ್ಣ ಬೆಂಬಲ ನೀಡುವುದಾಗಿ ಕೆಸಿಆರ್ ಅವರು ಭರವಸೆ ನೀಡಿದ್ದಾರೆ ಎಂದರು.

2023ರ ಚುನಾವಣೆಯಲ್ಲಿ ಫಲಿತಾಂಶ ಜೆಡಿಎಸ್ ಪರವಾಗಿ ಬಂದರೆ, ಅದು 2024ರ ಲೋಕಸಭೆ ಚುನಾವಣೆಗೆ ಹೊಸ ದಿಕ್ಸೂಚಿಯಾಗಲಿದೆ. ಕರ್ನಾಟಕವೂ ರಾಷ್ಟ್ರ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ. ಕರ್ನಾಟಕದಲ್ಲಿ ಕನ್ನಡಿಗರದ್ದೇ ಆದ ಸ್ವಾಭಿಮಾನದ ಸರಕಾರ ತರುವ ನಿಟ್ಟಿನಲ್ಲಿಯೂ ನಾವಿಬ್ಬರೂ ಚರ್ಚೆ ನಡೆಸಿದ್ದೇವೆ. ಅದಕ್ಕೆ ಇವತ್ತಿನ ಕಾರ್ಯಕ್ರಮ ವೇದಿಕೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next