ಲಂಡನ್/ಮುಂಬೈ: ಅಮೆರಿಕದ ಡಾಲರ್ ಎದುರು ಯು.ಕೆ.ಯ ಕರೆನ್ಸಿ ಪೌಂಡ್ ಸ್ಟರ್ಲಿಂಗ್ ಸೋಮವಾರ ಸಾರ್ವಕಾಲಿಕ ಕುಸಿತ ಕಂಡಿದೆ.
ಲಂಡನ್‌ನ ವಿದೇಶಿ ವಿನಿಮಯ ಕೇಂದ್ರದಲ್ಲಿ ಅಮೆರಿಕದ ಡಾಲರ್ ಎದುರು 1.03 ಪೌಂಡ್ ಕುಸಿತ ಕಂಡಿದೆ. 1971ರಲ್ಲಿ ಕರೆನ್ಸಿ ವ್ಯವಸ್ಥೆಯನ್ನು ದಶಮಾಂಶೀಕರಣ ವ್ಯವಸ್ಥೆಗೆ ಒಳಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ಪ್ರಮಾಣದ ಕುಸಿತ ಅನುಭವಿಸಿದೆ.
ಬೋರಿಸ್ ಜಾನ್ಸನ್ ನೇತೃತ್ವದ ಸರ್ಕಾರ ರಾಜೀನಾಮೆ ನೀಡಿದ ಬಳಿಕ ಅಸ್ತಿತ್ವಕ್ಕೆ ಬಂದ ಲಿಜ್ ಟ್ರಸ್ ನೇತೃತ್ವದ ಸರ್ಕಾರಕ್ಕೆ ಈ ಪರಿಸ್ಥಿತಿ ಸವಾಲಿನದ್ದಾಗಿದೆ. ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರು ತೆರಿಗೆ ಪ್ರಮಾಣ ಕಡಿತಗೊಳಿಸುವ ಬಗ್ಗೆ ಹಾಗೂ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ವೆಚ್ಚ ಮಾಡುವ ಬಗ್ಗೆ ಘೋಷಣೆ ಮಾಡಿರುವಂತೆಯೇ ಪೌಂಡ್ ಸ್ಟರ್ಲಿಂಗ್ ದಾಖಲೆಯ ಕುಸಿತ ಕಂಡಿದೆ.
ಕಳೆದ ಶುಕ್ರವಾರದಿಂದ ಈಚೆಗೆ ಅಮೆರಿಕದ ಡಾಲರ್ ಎದುರು, ಶೇ.5ರಷ್ಟು ಕುಸಿತ ಅನುಭವಿಸಿದೆ. ಬ್ರಿಟನ್‌ನ ಹೊಸ ಸರ್ಕಾರ 50 ವರ್ಷಗಳಲ್ಲಿಯೇ ಮೊದಲ ಬಾರಿಗೆ 45 ಬಿಲಿಯನ್ ಪೌಂಡ್ ಮೊತ್ತದಷ್ಟು ತೆರಿಗೆ ಮೊತ್ತವನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿರುವಂತೆಯೇ ಹೊಸ ಸಂಕಷ್ಟ ಎದುರಾಗಿದೆ.
ದಾಖಲೆ ಕುಸಿತ: ಇದೇ ವೇಳೆ ಅಮೆರಿಕದ ಡಾಲರ್ ಎದುರು ರೂಪಾಯಿ 58 ಪೈಸೆ ಕುಸಿತ ಕಂಡಿದೆ. ದಿನಾಂತ್ಯಕ್ಕೆ 81.67 ರೂ.ಗೆ ಮುಕ್ತಾಯವಾಗಿದೆ. ಶುಕ್ರವಾರ (ಸೆ.23) 30 ಪೈಸೆ ಕುಸಿತಗೊಂಡು 81.09 ರೂ.ಗೆ ಮುಕ್ತಾಯಗೊಂಡದ್ದು ಸಾರ್ವಕಾಲಿಕ ಇಳಿಕೆಯಾಗಿತ್ತು. ಸೋಮವಾರದ ಕುಸಿತವನ್ನೂ ಪರಿಗಣಿಸಿದರೆ ಇದು ನಾಲ್ಕನೇ ಇಳಿಕೆಯಾಗಿದೆ. ಜತೆಗೆ 193 ಪೈಸೆಯಷ್ಟು ನಷ್ಟ ಉಂಟಾಗಿದೆ.