ಲಂಡನ್: ಬ್ರಿಟನ್‌ನಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗದಂತೆ ತಡೆಯಲು ವಿದೇಶಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸದಂತೆ ಮಾಡಲು ಪ್ರಧಾನಿ ರಿಷಿ ಸುನಕ್ ಮುಂದಾಗಿದ್ದಾರೆ.
ಕಡಿಮೆ ಗುಣಮಟ್ಟದ ಪದವಿಗಳನ್ನು ಪಡೆಯಲು ಬರುವ ವಿದ್ಯಾರ್ಥಿಗಳು ಮತ್ತು ಅವರ ಜತೆಗೆ ಬರುವವರ ಮೇಲೆ ನಿಯಂತ್ರಣ ಹೇರಿದಂತೆ ವಲಸಿಗರ ಸಂಖ್ಯೆಯಲ್ಲಿ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ನಿರ್ಬಂಧ ಹೇರಲು ಅವರು ಮುಂದಾಗಿದ್ದಾರೆ ಎಂದು ಪ್ರಧಾನಮಂತ್ರಿಗಳ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್‌ನ ಮೂಲಗಳನ್ನು ಉಲ್ಲೇಖಿಸಿ-“ಬಿಬಿಸಿ’ ವರದಿ ಮಾಡಿದೆ.
ಬ್ರಿಟನ್‌ನ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಮಾಹಿತಿ ಪ್ರಕಾರ 2021ರಲ್ಲಿ 1,73,000 ಮಂದಿ ವಲಸಿಗರು ದೇಶ ಪ್ರವೇಶ ಮಾಡಿದ್ದರು. ಪ್ರಸಕ್ತ ವರ್ಷ ಇದುವರೆಗೆ 5,04,000 ಮಂದಿ ವಿದೇಶಿಯರು ಇದ್ದಾರೆ. ಅದರೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 3.31 ಲಕ್ಷ ಮಂದಿ ಇತರ ದೇಶಗಳ ನಾಗರಿಕರು ಹೆಚ್ಚುವರಿಯಾಗಿ ಪ್ರವೇಶ ಮಾಡಿದ್ದಾರೆ.
ಈಗಾಗಲೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಬ್ರಿಟನ್ ಸರ್ಕಾರ ವ್ಯವಸ್ಥೆಯನ್ನು ಸರಿದಾರಿಗೆ ತರಲು ಹಲವು ರೀತಿಯಲ್ಲಿ ಪ್ರಯತ್ನ ನಡೆಸುತ್ತಿದೆ.