Advertisement

ಲಿಜ್‌ ಸಂಪುಟ: ಗೋವಾ ಮೂಲದ ಸುಯೆಲ್ಲಾ ಬ್ರಾವರ್ಮನ್‌ ಗೃಹ ಸಚಿವೆ

09:31 AM Sep 08, 2022 | Team Udayavani |

ಲಂಡನ್‌: ಬ್ರಿಟನ್‌ನ ನೂತನ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಲಿಜ್‌ ಟ್ರಾಸ್‌ ಅವರು ತಮ್ಮ ಸಚಿವ ಸಂಪುಟ ವಿಸ್ತರಿಸಿದ್ದಾರೆ. ಬ್ರಿಟನ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಾಲ್ಕು ಪ್ರಮುಖ ಸಚಿವ ಸ್ಥಾನಗಳನ್ನು ಶ್ವೇತವರ್ಣೀಯ ಪುರುಷರಿಗೆ ನೀಡದೆಯೇ ಲಿಜ್‌ ಹೊಸ ಹೆಜ್ಜೆ ಇಟ್ಟಿದ್ದಾರೆ.

Advertisement

ಗೋವಾ ಮೂಲದ ಸುಯೆಲ್ಲಾ ಬ್ರಾವರ್ಮನ್‌ ಅವರಿಗೆ ಅತಿಮುಖ್ಯ ಖಾತೆಯಾದ ಗೃಹ ಇಲಾಖೆಯ ಜವಾಬ್ದಾರಿ ಕೊಡಲಾಗಿದೆ. ಈ ಹಿಂದೆ ಭಾರತ ಮೂಲದ ಪ್ರೀತಿ ಪಟೇಲ್‌ ಆ ಖಾತೆಯ ಸಚಿವೆಯಾಗಿದ್ದರು. ಹಣಕಾಸು ಇಲಾಖೆಗೆ ಘಾನದ ಘಾನಿಯನ್‌ ಜನಾಂಗದ ಕ್ವಾಸಿ ಕಾರ್ಟೆಂಗ್‌ ಅವರನ್ನು ಸಚಿವರನ್ನಾಗಿಸಲಾಗಿದೆ.

ಹಾಗೆಯೇ ವಿದೇಶಾಂಗ ಇಲಾಖೆಗೆ ಸಿಯೆರಾ ಲಿಯೋನ್‌ನ ಮೂಲದ ಜೇಮ್ಸ್‌ ಕ್ಲವರ್ಲಿ ಅವರನ್ನು ನೇಮಿಸಲಾಗಿದೆ. ಹೀಗಾಗಿ ಪ್ರಧಾನಿ ಸೇರಿ ಪ್ರಮುಖ ನಾಲ್ಕು ಸ್ಥಾನಗಳು ಮೂರು ಸ್ಥಾನಗಳು ವಿದೇಶಿ ಮೂಲದವರಿಗೇ ಸಿಕ್ಕಿದೆ.
ಆಗ್ರಾ ಮೂಲದ ಅಲೋಕ್‌ ಶರ್ಮಾ ಅವರು ಈ ಹಿಂದೆ ನಿರ್ವಹಿಸುತ್ತಿದ್ದ ಹವಾಮಾನ ಖಾತೆಯನ್ನೇ ಮುಂದುವರಿಸಲಿದ್ದಾರೆ.

ಭಾರತ ಮತ್ತು ಶ್ರೀಲಂಕಾ ಮೂಲದವರಾಗಿರುವ ರಾನಿಲ್‌ ಜಯವರ್ದೇನಾ ಅವರಿಗೆ ಪರಿಸರ ಇಲಾಖೆ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಸಹಾಯಕ ಸಚಿವರ ಸ್ಥಾನ ಕೊಡಲಾಗಿದೆ. ಪ್ರಧಾನಿ ರೇಸ್‌ನಲ್ಲಿದ್ದ ರಿಷಿ ಸುನಾಕ್‌ ಹಾಗೂ ಅವರನ್ನು ಬೆಂಬಲಿಸಿದ್ದ ಹಲವು ಮಾಜಿ ಸಚಿವರಿಗೆ ಈ ಬಾರಿಯ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ.

ಮೊದಲ ಸಂಪುಟ ಸಭೆ:
ಲಿಜ್‌ ಟ್ರಾಸ್‌ ಅವರು ತಮ್ಮ ಸಚಿವ ಸಂಪುಟದ ಮೊದಲ ಸಭೆಯನ್ನು ಲಂಡನ್‌ನಲ್ಲಿ ನಡೆಸಿದ್ದಾರೆ. “ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ನಮ್ಮ ಆರ್ಥಿಕತೆಯನ್ನು ಪುನರ್‌ ಸ್ಥಾಪಿಸಬಹುದು, ಬ್ರಿಟನ್‌ ಅನ್ನು ಅತ್ಯಾಧುನಿಕ ಅದ್ಭುತ ಬ್ರಿಟನ್‌ ಆಗಿ ಬದಲಾಯಿಸಬಹುದು ಎನ್ನುವ ನಂಬಿಕೆ ನನಗಿದೆ’ ಎಂದು ಸಭೆಯಲ್ಲಿ ಪ್ರಧಾನಿ ಲಿಜ್‌ ಟ್ರಾಸ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next