ಅಯೋಧ್ಯೆ: ಬಿರುಬೇಸಿಗೆಯಲ್ಲಿ ಬೆವರು ಕಿತ್ತುಬರುತ್ತಿದ್ದರೂ ಈ ಕಾರ್ಮಿಕರು ಮಾತ್ರ ತದೇಕಚಿತ್ತದಿಂದ ತಮ್ಮ ಕೆಲಸದಲ್ಲಿ ಮುಳುಗಿರುತ್ತಾರೆ. ರಾತ್ರಿ ಹಗಲೆನ್ನದೆ ಸುಮಾರು 350 ಮಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಗುರಿ ಒಂದೇ- ಡಿಸೆಂಬರ್‌ನೊಳಗೆ ಕೆಲಸವನ್ನು ಪೂರ್ಣಗೊಳಿಸುವುದು!
ಹೌದು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣಕ್ಕೆ ಈ ವರ್ಷದ ಡಿಸೆಂಬರ್‌ನ ಗಡುವು ನೀಡಲಾಗಿದ್ದು, ಅದರೊಳಗೆ ಎಲ್ಲ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಮಿಕರು ಭರದಿಂದ ಕೆಲಸ ಮಾಡುತ್ತಿದ್ದಾರೆ. ಮೂರು ಮಹಡಿಯ ದೇವಾಲಯದ ಮೊದಲ ಮಹಡಿಯಲ್ಲಿ “ಗರ್ಭಗುಡಿ’ಯಿದ್ದು, ಈ ಮಹಡಿಯ ಶೇ.75ರಷ್ಟು ಕೆಲಸಗಳು ಪೂರ್ಣಗೊಂಡಿವೆ. ಮುಂದಿನ ಮಕರ ಸಂಕ್ರಾಂತಿಯ ವೇಳೆ ಗರ್ಭಗುಡಿಯಲ್ಲಿ ರಾಮ್‌ಲಲ್ಲಾ ವಿಗ್ರಹ ಪ್ರತಿಷ್ಠಾಪನೆ ನಡೆಯಲಿರುವ ಕಾರಣ, ಕ್ಷಿಪ್ರವಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
2024ರ ಜನವರಿಯಲ್ಲಿ ದೇವಾಲಯದ ಮೊದಲ ಮಹಡಿಯಲ್ಲಿ ರಾಮ್‌ಲಲ್ಲಾ ದರ್ಶನಕ್ಕೆ ಅವಕಾಶ ಸಿಗಲಿದ್ದು, ನಂತರದಲ್ಲಿ ಉಳಿದ ಮಹಡಿಗಳ ಕಾಮಗಾರಿ ಆರಂಭವಾಗಲಿದೆ ಎಂದು ಟ್ರಸ್ಟ್ ಸದಸ್ಯರು ಮಾಹಿತಿ ನೀಡಿದ್ದಾರೆ.
5 ಸಾವಿರ ಕೋಟಿ ರೂ. ಸಂಗ್ರಹ:
ಪ್ರತಿ ತಿಂಗಳು ಸಾರ್ವಜನಿಕರಿಂದ ಸುಮಾರು 1 ಕೋಟಿ ರೂ.ಗಳವರೆಗೆ ದೇಣಿಗೆ ಸಂಗ್ರಹವಾಗುತ್ತಿದೆ ಎಂದು ಟ್ರಸ್ಟ್ ಹೇಳಿದೆ. 2023ರ ಮಾರ್ಚ್ 31ರವರೆಗೆ ಸುಮಾರು 5 ಸಾವಿರ ಕೋಟಿ ರೂ.ಗಳು ಟ್ರಸ್ಟ್‌ಗೆ ಹರಿದುಬಂದಿದೆ. ದೇವಾಲಯದ ನಿರ್ಮಾಣದ ಬಳಿಕ ಉಳಿಯುವ ಹೆಚ್ಚುವರಿ ಹಣವನ್ನು ಅಯೋಧ್ಯೆಯ ಅಭಿವೃದ್ಧಿಗೆ ಬಳಸಲಾಗುವುದು ಎಂದು ಟ್ರಸ್ಟ್ ಸದಸ್ಯರು ಹೇಳಿದ್ದಾರೆ.
Related Articles