ಬೆಂಗಳೂರು: ನಮ್ಮ ಸಮಾಜ ಮನಸ್ಸು ಮಾಡಿದರೆ ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಕಷ್ಟವೇನಲ್ಲ. ಒಳಪಂಗಡಗಳು ಒಡಕು ಮರೆತು ಒಗ್ಗಟ್ಟು ಪ್ರದರ್ಶಿಸಬೇಕಷ್ಟೇ ಎಂದು ಸಮಾಜದ ಹಿರಿಯ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.
ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಹಾನಗಲ್ ಕುಮಾರೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ವೀರಶೈವರು ಪ್ರಬಲ ಸಮುದಾಯ ಎಂದು ಗುರುತಿಸಿಕೊಂಡಿದ್ದೇವೆ. ಸಮಾಜವು ರಾಜಕೀಯವಾಗಿ ಬಲಿಷ್ಠರಾಗಲು ಒಗ್ಗಟ್ಟಿನ ಆವಶ್ಯಕತೆ ಇದೆ. ರಾಜಕೀಯ ಶಕ್ತಿ ಇಲ್ಲದಿದ್ದರೆ ಎಲ್ಲ ಕಡೆಯೂ ಅನ್ಯಾಯವಾಗುತ್ತದೆ. ಈಗ ಅದೇ ಆಗುತ್ತಿದೆ. ಈ ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಉತ್ತಮ ಸ್ಥಾನಗಳಲ್ಲಿದ್ದ ನಮ್ಮ ಸಮುದಾಯದ ಅಧಿಕಾರಿಗಳನ್ನು ಆಯಕಟ್ಟಿನ ಹುದ್ದೆಗಳಿಂದ ದೂರ ಇಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಐಎಎಸ್, ಐಪಿಎಸ್ ಸೇರಿದಂತೆ ಇನ್ನಿತರ ಅತ್ಯುನ್ನತ ಹುದ್ದೆಗಳಲ್ಲಿರುವ ವೀರಶೈವ ಸಮಾಜದ ಅಧಿಕಾರಿಗಳಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ತಾತ್ಸಾರ ಮಾಡಲಾಗುತ್ತಿದೆ. ದೂರದ ಹಾಗೂ ಪ್ರಮುಖವಲ್ಲದ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗುತ್ತಿದೆ. ವೀರಶೈವರಲ್ಲಿ ಒಗ್ಗಟ್ಟಿಲ್ಲದೇ ಇರುವುದು ಇದಕ್ಕೆ ಪ್ರಮುಖ ಕಾರಣ. ಹೀಗಾಗಿ ಒಡಕು ಮರೆತು ಒಂದಾಗಬೇಕಿದೆ ಎಂದು ಕರೆ ನೀಡಿದರು.
ಪ್ರಶಸ್ತಿಯ ಮೊತ್ತ ವಿದ್ಯಾರ್ಥಿಗಳಿಗೆ : ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ಹಾನಗಲ್ ಕುಮಾರೇಶ್ವರ ಪ್ರಶಸ್ತಿ, 50 ಸಾವಿರ ರೂ. ನೀಡಿ ಗೌರವಿಸಲಾಯಿತು. ಇದರ ಜತೆಗೆ 51 ಸಾವಿರ ರೂ.ಗಳನ್ನು ಸೇರಿಸಿ ಪ್ರತಿಭಾ ಪುರಸ್ಕಾರಕ್ಕೆ ಬಳಸಿಕೊಳ್ಳುವಂತೆ 1.01 ಲಕ್ಷ ರೂ.ಗಳನ್ನು ಮಹಾಸಭಾಕ್ಕೆ ಮರಳಿಸಿದರು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಇದಕ್ಕೆ ಮಹಾಸಭಾದ ಜತೆಗೆ ಸಮುದಾಯದ ಮುಖಂಡರೂ ಕೈ ಜೋಡಿಸಬೇಕು. ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ವಿದ್ಯಾಭ್ಯಾಸದ ಖರ್ಚು ವೆಚ್ಚ ವಹಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದ 400 ವಿದ್ಯಾರ್ಥಿಗಳಿಗೆ ಇದೇ ವೇಳೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೂಲಗದ್ದೆ ಸದಾನಂದ ಶಿವಯೋಗ ಆಶ್ರಮದ ಶ್ರೀ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಮಾಜಿ ಉಪಮೇಯರ್ ಬಿ.ಎಸ್. ಪುಟ್ಟರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ್ ಹಿರೇಮಠ, ಐಪಿಎಸ್ ಅಧಿಕಾರಿ ಯತೀಶ್‌ಚಂದ್ರ, ಮಹಾಸಭೆ ಬೆಂಗಳೂರು ಜಿಲ್ಲಾಧ್ಯಕ್ಷ ಎಸ್.ಗುರುಸ್ವಾಮಿ ಉಪಸ್ಥಿತರಿದ್ದರು.