ಧಾರವಾಡ: ಸಮರ್ಪಕ ಜಲ ನಿರ್ವಹಣೆ ದಿಸೆಯಲ್ಲಿ ದೇಶಕ್ಕೆ ರಾಷ್ಟ್ರೀಯ ಜಲ ನೀತಿಯಲ್ಲ, ಜಲ ಕಾಯ್ದೆ ರೂಪಿಸುವುದು ಅವಶ್ಯಕ ಎಂದು ಡಾ| ರಾಜೇಂದ್ರ ಪೋದ್ದಾರ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಡೆದ “ಸಂಪನ್ಮೂಲಗಳು: ಸವಾಲುಗಳು ಸಾಧ್ಯತೆಗಳು’ ಗೋಷ್ಠಿಯಲ್ಲಿ ನೆಲ-ಜಲ ಕುರಿತು ಅವರು ಮಾತನಾಡಿದರು.
ಜಲನೀತಿ ಕೇವಲ ಮಾರ್ಗಸೂಚಿ ಮಾತ್ರ. ತ್ವರಿತವಾಗಿ ಸಮಗ್ರ ಜಲ ನಿರ್ವಹಣೆಗೆ ಜಲ ಕಾಯ್ದೆಯನ್ನು ರೂಪಿಸುವ ಅವಶ್ಯಕತೆಯಿದೆ. ಖಾಸಗಿ ಕಂಪನಿಗಳು ತಮ್ಮ ಸ್ವಾರ್ಥಕ್ಕಾಗಿ ನೆಲ-ಜಲ ಮಾರಾಟ ಮಾಡುತ್ತಿವೆ. ಇದನ್ನು ತಡೆಗಟ್ಟಲು ಕ್ರಮ ಅಗತ್ಯ. ಈ ದಿಸೆಯಲ್ಲಿ ಸಾಂಘಿಕ ಹೋರಾಟ ಅವಶ್ಯಕ ಎಂದು ತಿಳಿಸಿದರು.
ಪರಿಸರ ಮಾಲಿನ್ಯದಿಂದಾಗಿ 2030ರ ವೇಳೆಗೆ ಆಹಾರ ಭದ್ರತೆ ಸಮಸ್ಯೆ ಸೃಷ್ಟಿಸಲಿದೆ. 2008ರಿಂದ 2012ರವರೆಗೆ 4 ವರ್ಷದಲ್ಲಿ ಎಂಟು ಸಾವಿರ ಹೆಕ್ಟೇರ್ ಭೂಮಿ ಇತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ನೀರಿನ ಕೊರತೆ ನೀಗದೇ ನೀರಿಗಾಗಿ 3ನೇ ಮಹಾಯುದ್ಧ ನಡೆಯುವುದನ್ನೂ ಅಲ್ಲಗಳೆಯುವಂತಿಲ್ಲ ಎಂದರು.
ಡಾ| ಸಂಜೀವ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಮಂಡ್ಯ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಬ್ಬು ಬೆಳೆಯಲಾಗುತ್ತದೆ. ಕಬ್ಬು ಬೆಳೆಗೆ ನೀರು ಹೆಚ್ಚು ಪೋಲಾಗುತ್ತಿದೆ.ಇದರಿಂದ ಭೂಮಿ ಬಂಜರಾಗಿ ಬೇರೆ ಬೆಳೆಗಳನ್ನು ಬೆಳೆಯಲಾಗದ ಸ್ಥಿತಿ ನಿರ್ಮಾಣ ವಾಗಿದೆ.
ಕಬ್ಬು ಬೆಳೆಗೆ ಮಹಿಳೆಯರ ಅವಶ್ಯಕತೆ ಹೆಚ್ಚಾಗಿರದಿದ್ದರಿಂದ ಕಬ್ಬು ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಮಾಣ ಹೆಚ್ಚಾಗಿರುವುದು ದೌರ್ಭಾಗ್ಯದ ಸಂಗತಿ ಎಂದು ಹೇಳಿದರು. ಜಿ.ವಿ. ಕೊಂಗವಾಡ ಅಧ್ಯಕ್ಷತೆ ವಹಿಸಿದ್ದರು. ಡಾ| ಬಸವರಾಜ ಮುಡಬಾಗಿಲು ಸ್ವಾಗತಿಸಿದರು. ಮಹೇಶ ಪತ್ತಾರ ನಿರೂಪಿಸಿದರು. ಪ್ರವೀಣ ಪವಾರ ವಂದಿಸಿದರು.