Advertisement

ಕುಮ್ಟಿಬೇರು-ರಾಂಪೆಜೆಡ್ಡು ಸಂಕದಲ್ಲಿ ಸಂಕಷ್ಟದ ನಡಿಗೆ

06:00 AM Jul 14, 2018 | |

ವಿಶೇಷ ವರದಿ- ಹೊಸಂಗಡಿ: ಕಳೆದ ನಾಲ್ಕು ದಶಕಗಳಲ್ಲಿ ಹಲವಾರು ಸರಕಾರಗಳು ಬಂದವು, ಹೋದವು. ಆದರೆ ಇಲ್ಲಿನವರ ಸೇತುವೆ ಬೇಡಿಕೆ ಮಾತ್ರ ಈಡೇರಿಲ್ಲ. ನದಿ ದಾಟಲು ಕಾಲುಸಂಕವೇ ಆಶ್ರಯ. ಇದು ಯಡಮೊಗೆ ಸಮೀಪದ ಕುಮಿrಬೇರುವಿನ ಜನರ ಸಂಕಷ್ಟ. ಇವರಿಗೆ ಕುಬ್ಜಾ ನದಿ ದಾಟಿ ರಾಂಪೆಜೆಡ್ಡು, ಹೊಸಂಗಡಿಗೆ ಹೋಗುವುದೆಂದರೆ ಕಷ್ಟ ಪಡಲೇಬೇಕು! 

Advertisement

ಅಕ್ಕಿ ಉಚಿತವಾಗಿ ಸಿಕ್ಕಿದರೂ  ಅದನ್ನು ತರಲು ರಿಕ್ಷಾಕ್ಕೆ 150 ರೂ. ಬಾಡಿಗೆ ಕೊಡಬೇಕು. ಅದೇ ಕುಮ್ಟಿಬೇರುವಿನಲ್ಲಿ ಕಿರುಸೇತುವೆಯಾದರೂಕೇವಲ 30 ರೂ. ಬಾಡಿಗೆಯಷ್ಟೇ ಕೊಡಬೇಕಾಗುತ್ತದೆ ಎನ್ನುತ್ತಾರೆ ಕುಮ್ಟಿಬೇರು ನಿವಾಸಿ ಮಂಜುನಾಥ ನಾಯ್ಕ ಅವರು. ಕುಮ್ಟಿಬೇರುವಿನ ಜನರಿಗೆ ಹೊಸಂಗಡಿಗೆ ತೆರಳಲು ಕಿರುಸೇತುವೆಯಾದರೆ ಕೇವಲ 4 ಕಿ.ಮೀ. ದೂರವಾಗುತ್ತದೆ. ಆದರೆ ಈಗ ಸೇತುವೆಯಿಲ್ಲದೆ ಕೆರೆಕಟ್ಟೆ ಮೂಲಕವಾಗಿ ಸುತ್ತ ಬಳಸಿ ಸುಮಾರು 8 ಕಿ.ಮೀ. ದೂರ ಸಂಚರಿಸಬೇಕಾದ ಅನಿವಾರ್ಯವಿದೆ. 

ಮಕ್ಕಳಿಗೆ ನಿತ್ಯ ಸಂಕಟ
ಮರದ ಕಾಲು ಸಂಕದ ಮೂಲಕವಾಗಿ ಹೊಸಂಗಡಿಯಲ್ಲಿರುವ ಶಾಲೆಗೆ ಸುಮಾರು 15 ಮಕ್ಕಳು ನಿತ್ಯ ತೆರಳುತ್ತಾರೆ. ಸುಮಾರು 40 ಫೀಟು ಉದ್ದದ ಕಾಲುಸಂಕದಲ್ಲಿ ಭಾರೀ ಮಳೆಗೆ ಮಕ್ಕಳು ನಡೆದುಕೊಂಡು ಹೋಗುವುದು ಕಷ್ಟಕರವಾಗಿದೆ. ಆಯತಪ್ಪಿದರೆ ನದಿಗೆ ಬೀಳುವ ಅಪಾಯವೂ ಇದೆ. 

ನಿವೃತ್ತಿಯಾಗುವ ಹೊತ್ತಲೂ ಸೇತುವೆ ಆಗಿಲ್ಲ!
ಇದೇ ಕಾಲುಸಂಕದಲ್ಲಿ ಕುಮಿrಬೇರುವಿನಿಂದ ಶಾಲೆಗೆ ಹೋಗಿ ಕಲಿತವರು ಈಗ ಕೆಲಸ ಪಡೆದು, ನಿವೃತ್ತಿಯಾಗುವ ವಯಸ್ಸಾಯಿತು. ಆದರೆ ಇಲ್ಲಿನ ಸೇತುವೆ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ ಎನ್ನುವುದು ಇಲ್ಲಿನ ಜನರ ಮಾರ್ಮಿಕವಾದ ಮಾತು. 

ಭರವಸೆ ಮಾತ್ರ
ನಾನು 50 ವರ್ಷಗಳಿಂದ ಇಲ್ಲಿ ನೆಲೆಸಿದ್ದೇನೆ. ಆವತ್ತಿನಿಂದ ಇದೇ ಕಾಲುಸಂಕದಲ್ಲಿ ತೆರಳಬೇಕಾಗಿದೆ. ಬೇರೆ ಮಾರ್ಗದಲ್ಲಾದರೆ ಸುತ್ತು ಬಳಸಿ ಹೋಗಬೇಕು. ಓಟು ಬಂದಾಗ ಎಲ್ಲರೂ ಬರುತ್ತಾರೆ. ಈ ಸಲ ಖಂಡಿತ ಸೇತುವೆ ಮಾಡಿ ಕೊಡುತ್ತೇವೆ ಎಂದು ಎಲ್ಲ ಜನಪ್ರತಿನಿಧಿಗಳು ಹೇಳುತ್ತಾರೆ. ಎರಡೆರಡು ಸಲ ಟೆಂಡರ್‌ ಆಗಿದೆ ಅಂತಾನೂ ಹೇಳುತ್ತಾರೆ. ಆದರೆ ಭರವಸೆ ಮಾತ್ರ. ನಮ್ಮ ಸೇತುವೆ ಕನಸು ಮಾತ್ರ ಈಡೇರಲೇ ಇಲ್ಲ ಎನ್ನುತ್ತಾರೆ ರಘುರಾಮ ಶೆಟ್ಟಿಯವರು.

Advertisement

ಕಿರು ಸೇತುವೆಯಾದರೂ ಮಾಡಿಕೊಡಿ
ಪ್ರತಿ ವರ್ಷ ಈ ಕಾಲುಸಂಕವನ್ನು ನಿರ್ಮಿಸುವುದೇ ನಮ್ಮ ಕೆಲಸ. ಎಲ್ಲರಿಗೂ ಸೇತುವೆ ಮಾಡಿಕೊಡಿ ಎಂದು ಬೇಡಿಕೆಯಿಟ್ಟರೂ ಪ್ರಯೋಜನ  ಆಗಿಲ್ಲ. 8 -10 ಜನವಿದ್ದರೆ ಈ ಕಾಲು ಸಂಕ ನಿರ್ಮಾಣಕ್ಕೆ ಒಂದು ದಿನದ ಕೆಲಸ ಆಗುತ್ತದೆ. ಮಕ್ಕಳು ಶಾಲೆಗೆ ಹೋಗಲು, ಹೊಸಂಗಡಿ ಪೇಟೆಗೆ ಹೋಗಲು, ಪಡಿತರ ತರಲು ಎಲ್ಲದಕ್ಕೂ ನಮಗೆ ಸಮಸ್ಯೆಯಾಗುತ್ತಿದೆ. ಕನಿಷ್ಠ ಕಿರು ಸೇತುವೆ ಮಾಡಿ, ರಿಕ್ಷಾ ಹೋಗುವಷ್ಟಾದರೂ ಮಾಡಿಕೊಡಲಿ. 
– ಮಂಜುನಾಥ ನಾಯ್ಕ ಹಾಗೂ ಸುಬ್ಬನಾಯ್ಕ, 
ಕುಮ್ಟಿಬೇರು ನಿವಾಸಿ

ಶಾಸಕರಿಗೆ ಶಿಫಾರಸು
ಜಿ.ಪಂ. ಅನುದಾನ ಸಾಕಾಗದ ಕಾರಣ, ಕುಮಿrಬೇರು- ರಾಂಪೆಜೆಡ್ಡು ವಿಗೆ ಕಿರು ಸೇತುವೆ ನಿರ್ಮಾಣ ಸಂಬಂಧ ಬೈಂದೂರಿನ ಶಾಸಕರಿಗೆ ಶಿಫಾರಸು ಮಾಡಿ, ಆ ಮೂಲಕ ಸೇತುವೆ ಮಂಜೂರು ಮಾಡಿಸುವ ಪ್ರಯತ್ನ ಮಾಡಲಾಗುವುದು. 
– ರೋಹಿತ್‌ ಕುಮಾರ್‌ ಶೆಟ್ಟಿ,ಸಿದ್ದಾಪುರ ಜಿ.ಪಂ. ಸದಸ್ಯರು

ಕಿರು ಸೇತುವೆಗೆ ಪ್ರಯತ್ನ
ಯಡಮೊಗೆ ಸಮೀಪದ ಕುಮ್ಟಿಬೇರು- ರಾಂಪೆಜೆಡ್ಡುವಿಗೆ ಹೊಸಂಗಡಿ ಸಂಪರ್ಕ ಕಲ್ಪಿಸಲು ಕಿರು ಸೇತುವೆ ಬೇಡಿಕೆಯಿದ್ದು, ಖಂಡಿತವಾಗಿಯೂ ಶಾಸಕರ ನಿಧಿಯಡಿ ಅಲ್ಲಿನ ಜನರ ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುವುದು. 
– ಬಿ.ಎಂ.ಸುಕುಮಾರ ಶೆಟ್ಟಿ, 
ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next