Advertisement

ಮಾರಸ್ವಾಮಿ ಸೇತುವೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮನವಿ

05:25 PM Jun 26, 2022 | Team Udayavani |

ಮರವಂತೆ: ಇಲ್ಲಿನ ಹೆದ್ದಾರಿಯಿಂದ ಮಾರಸ್ವಾಮಿ ದೇವಸ್ಥಾನ ಬಳಿಯ ಮರವಂತೆ – ಪಡುಕೋಣೆ ಸೇತುವೆಯನ್ನು ಸಂಪರ್ಕಿಸುವ ಸುಮಾರು 100 ಮೀ. ರಸ್ತೆ ಜಾಗದ ಸಮಸ್ಯೆಯಿಂದಾಗಿ ಡಾಮರು ಕಾಮಗಾರಿಯಾಗದೇ, ಅಪಾಯಕಾರಿ ತಿರುವಾಗಿ ಮಾರ್ಪಟ್ಟಿದ್ದು, ಇದನ್ನು ನಿವಾರಿಸಿ, ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕಾಗಿ ಮರವಂತೆ ಗ್ರಾ.ಪಂ. ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ.

Advertisement

ಇಲ್ಲಿ ಸೇತುವೆ ನಿರ್ಮಾಣಗೊಂಡು 5 ವರ್ಷವಾದರೂ, 100 ಮೀ. ಸಂಪರ್ಕ ರಸ್ತೆ ಮಾತ್ರ ಇನ್ನೂ ಆಗಿಲ್ಲ. ಇದಕ್ಕೆ ಸಣ್ಣ ಖಾಸಗಿ ಜಾಗದ ಸಮಸ್ಯೆಯಿದೆ. ಇದರಿಂದ ಈಗಿರುವ ತಾತ್ಕಾಲಿಕ ಮಾರ್ಗದ ಮೂಲಕ ವಾಹನಗಳು ಹೆದ್ದಾರಿ ಹಾಗೂ ಸೇತುವೆಯಿಂದ ಸುಮಾರು 10 ಅಡಿ ಆಳಕ್ಕಿಳಿದು, ಮತ್ತೆ ಅಷ್ಟೇ ಎತ್ತರಕ್ಕೆ ಏರಬೇಕಾದ ಸ್ಥಿತಿಯಿದೆ. ಇದಲ್ಲದೆ 20 ಮೀ. ಅಂತರದಲ್ಲಿ 90 ಡಿಗ್ರಿಯ ತಿರುವುಗಳಿದ್ದು, ಅಪಘಾತಗಳಿಗೂ ಕಾರಣವಾಗಿದೆ.

ನಿತ್ಯ ಈ ಮಾರ್ಗದಲ್ಲಿ ನೂರಾರು ವಾಹನಗಳು, 15 ಕ್ಕೂ ಅಧಿಕ ಶಾಲಾ ಮಕ್ಕಳ ವಾಹನಗಳು ಸಂಚರಿಸುತ್ತವೆ. ಇಳಿ ಜಾರಿನಿಂದ ಹತ್ತಿ, ಹೆದ್ದಾರಿಗೆ ಬರಬೇಕಾದರೆ, ಹೆದ್ದಾರಿಯಲ್ಲಿ ನೇರವಾಗಿ ಸಂಚರಿಸುತ್ತಿರುವ ವಾಹನಗಳು ಕಾಣುವುದಿಲ್ಲ. ಇಲ್ಲಿ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಇಲ್ಲಿನ ರಸ್ತೆಯನ್ನು ಎತ್ತರಿಸಿ, ನೇರವಾಗಿಸಿ, ಶಾಶ್ವತ ರಸ್ತೆಯಾಗಿ ಮಾಡಬೇಕಿದೆ. ಖಾಸಗಿ ಜಾಗವನ್ನು ವಶಕ್ಕೆ ಪಡೆಯಲು ಕಾನೂನು ತೊಡಕಿದ್ದು, ಶಾಸಕರು ಮಧ್ಯ ಪ್ರವೇಶಿಸಿ, ಪರಿಹರಿಸಬೇಕು ಎನ್ನುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಗ್ರಾಮಸಭೆ ನಿರ್ಣಯ ಕಳೆದ ಮರವಂತೆ ಗ್ರಾಮಸಭೆಯಲ್ಲೂ ಈ ಬಗ್ಗೆ ಸಾರ್ವ ಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಸಭೆಯಲ್ಲಿ ನಿರ್ಣಯ ಸಹ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next