Advertisement

ಬ್ರಿಜ್‌ ಕಂ ಬ್ಯಾರೇಜ್‌ ಪೂರ್ಣ

04:57 PM Nov 30, 2018 | Team Udayavani |

ಬೀಳಗಿ: ತಾಲೂಕಿನ ಹೆರಕಲ್‌ ಗ್ರಾಮದ ಬ್ಯಾಳಿಕಲ್‌ ಗುಡ್ಡದ ಸ್ಥಳದಲ್ಲಿ 42 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹೆರಕಲ್‌ ಬ್ರಿಜ್‌ ಕಮ್‌ ಬ್ಯಾರೇಜ್‌ ಯೋಜನೆ ಕುಡಿವ ನೀರು, ರಸ್ತೆ ಸಂಪರ್ಕ ಹಾಗೂ ಏತ ನೀರಾವರಿಯ ಮೂರು ಪ್ರಮುಖ ಉದ್ದೇಶಕ್ಕೆ ಸದ್ಬಳಕೆಯಾಗುತ್ತಿದೆ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.

Advertisement

ತಾಲೂಕಿನ ಹೆರಕಲ್‌ ಬ್ರಿಜ್‌ ಕಮ್‌ ಬ್ಯಾರೇಜ್‌ ಕಾಮಗಾರಿ ವೀಕ್ಷಣೆ ಮಾಡಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಹುಕೋಟಿ ವೆಚ್ಚದ ಬ್ರಿಜ್‌ ಕಮ್‌ ಬ್ಯಾರೇಜ್‌ ಮೊದಲಿನ ಬಿಜೆಪಿ ಸರಕಾರದ ಯೋಜನೆಯಾಗಿದೆ.  ಇದೀಗ ಯೋಜನೆ ಪೂರ್ಣಗೊಂಡಿದ್ದು, ಕಾರ್ಯಾರಂಭವಾಗಿದೆ. ಬ್ರಿಜ್‌ ಕಮ್‌ ಬ್ಯಾರೇಜ್‌ ಯೋಜನೆಯಿಂದಾಗಿ 3.664 ಟಿಎಂಸಿ ನೀರನ್ನು ಪಡೆಯಬಹುದಾಗಿದೆ. ಒಟ್ಟು 15,344 ಹೆಕ್ಟೇರ್‌ ಪ್ರದೇಶ ನೀರಾವರಿಗೆ ಒಳಪಡಲಿದೆ. 524 ಮೀಟರ ಆಲಮಟ್ಟಿ ಅಣೆಕಟ್ಟು ಎತ್ತರಿಸಿದರೂ ಬ್ರಿಜ್‌ ಕಮ್‌ ಬ್ಯಾರೇಜ್‌ ಮುಳುಗಡೆಯಾಗಲಾರದು. ನವಿಲುತೀರ್ಥ ಮಾದರಿಯಲ್ಲಿ ನಿರ್ಮಾಣವಾಗಿರುವ ಬ್ರಿಜ್‌ ಕಮ್‌ ಬ್ಯಾರೇಜ್‌ 218 ರಿಂದ 13ರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ. ಜತೆಗೆ ಏತ ನೀರಾವರಿಯಿಂದ 218 ರಾಷ್ಟ್ರೀಯ ಹೆದ್ದಾರಿಯ ಎಡ ಮತ್ತು ಬಲಬಾಗದ ಸಾವಿರಾರು ಎಕರೆ ಪ್ರದೇಶಗಳಿಗೆ ನೀರಾವರಿ ಕಲ್ಪಿಸಬಹುದು ಎಂದರು. 

ಯೋಜನೆಯಿಂದ ಸಿಗುವ ಒಟ್ಟು 3.664 ಟಿಎಂಸಿ ನೀರಿನಲ್ಲಿ ಹೆರಕಲ್‌ ದಕ್ಷಿಣ ಕಾಲುವೆಗೆ 1.324 ಟಿಎಂಸಿ, ಉತ್ತರ ಕಾಲುವೆಗೆ 0.732 ಟಿಎಂಸಿ ಹಾಗೂ ಯಳ್ಳಿಗುತ್ತಿ ಗ್ರಾಮದ 2 ಸಾವಿರ ಎಕರೆ ಜಮೀನಿಗೆ 0.016 ಟಿಎಂಸಿ ನೀರು ಒದಗಿಸಲಾಗುವುದು. ಅಲ್ಲದೆ, ತಾಲೂಕಿನ ಗಲಗಲಿ ಬ್ರಿಜ್‌ ಎತ್ತರಿಸುವ ಮೂಲಕ ಅಮಲಝರಿ, ಯಡಹಳ್ಳಿ, ಬಾಡಗಿ, ಬೂದಿಹಾಳ ಸೇರಿದಂತೆ ಒಟ್ಟು 14 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಾಸಕ ನಿರಾಣಿ ತಿಳಿಸಿದರು. 

ಕೆಬಿಜಿಎನ್‌ಎಲ್‌ ಸಹಾಯಕ ಅಭಿಯಂತರ ಜಯಣ್ಣ, ವಿ.ಎಲ್‌. ಶೇಗುಣಶಿ, ತಹಶೀಲ್ದಾರ ಉದಯ ಕುಂಬಾರ, ಜಿಪಂ ಸದಸ್ಯ ಹೂವಪ್ಪ ರಾಠೊಡ, ಬಿಜೆಪಿ ತಾಲೂಕು ಅಧ್ಯಕ್ಷ ಸಂಗಪ್ಪ ಕಟಗೇರಿ, ಮಲ್ಲಪ್ಪ ಶಂಭೋಜಿ, ತಾಪಂ ಸದಸ್ಯ ಮಿಥುನ್‌ ನಾಯಿಕ, ಶೋಭಾ ಹಂಚಿನಾಳ, ಗ್ರಾಪಂ ಅಧ್ಯಕ್ಷ ಸಿದ್ದಪ್ಪ ನಕ್ಕರಗುಂದಿ, ನಿಂಗಪ್ಪ ದಂಧರಗಿ, ರಾಮಣ್ಣ ಕಾಳಪ್ಪಗೋಳ, ಸಂಗಮೇಶ ಭಗವತಿ, ಮಲ್ಲಯ್ಯ ಸುರಗಿಮಠ, ಕಿರಣ ಬಡಿಗೇರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next