Advertisement
ಹವ್ಯಕ ಸಮಾಜದ ಹುಡುಗರಿಗೆ, ಹುಡುಗಿಯರು ಸಿಗದ ಈ ದುಸ್ಥಿತಿಯ ಸಂಗತಿ ಸಮಾಜದ ಸ್ವರ್ಣವಲ್ಲಿ ಶ್ರೀಗಳ ಗಮನಕ್ಕೆ ಬಂದಾಗ ಅವರೇ ಒಂದು ಯೋಜನೆ ರೂಪಿಸಿದರು. ಇದಕ್ಕೊಂದು ಪರ್ಯಾಯ ಮಾರ್ಗ ಕಂಡುಕೊಳ್ಳಲೇಬೇಕೆಂದು ಸಲಹೆ ಇತ್ತರು. ಉತ್ತರ ಪ್ರದೇಶದ ಮಿರ್ಜಾಪುರ, ಬಲರಾಮಪುರದಲ್ಲಿರುವ ಬ್ರಾಹ್ಮಣ ಸಮುದಾಯದ ಹುಡುಗಿಯರನ್ನು ಮದುವೆ ಮಾಡಿ ಮನೆ ತುಂಬಿಸಿಕೊಳ್ಳುವುದು ಎಂಬುದೇ ಆ ಸಲಹೆ. ಈ ಯೋಜನೆ ಹೆಚ್ಚು ಫಲಶ್ರುತಿ ನೀಡಿದ ಪರಿಣಾಮ, ಯಲ್ಲಾಪುರ ತಾಲೂಕು ಒಂದರಲ್ಲೇ 70-80 ಹುಡುಗಿಯರು ಉತ್ತರ ಪ್ರದೇಶದಿಂದ ಮದುವೆಯಾಗಿ ಯಲ್ಲಾಪುರಕ್ಕೆ ಬಂದಿದ್ದಾರೆ. ಮತ್ತೂ ಹಲವರಿಗೆ ಮದುವೆ ಮಾಡಿಸಿ ಕರೆ ತರುವ ಯೋಜನೆಗಳು ನಡೆಯುತ್ತಿವೆ.
Related Articles
Advertisement
2011ರ ಜನಗಣತಿ ಪ್ರಕಾರ ಮಿರ್ಜಾಪುರದ ಜನಸಂಖ್ಯೆ 24 ಲಕ್ಷ. ಬಲರಾಂಪುರದ ಜನಸಂಖ್ಯೆ 20 ಲಕ್ಷ. ಈ ಅತಿಯಾದ ಜನಸಂಖ್ಯೆಯೇ ಬಡತನಕ್ಕೆ ಕಾರಣ. ಒಂದು ಕುಟುಂಬದಲ್ಲಿ 2-3 ಜನ ಹುಡುಗಿಯರು ಇದ್ದರೆ, ಅವರನ್ನು ಮದುವೆ ಮಾಡಿ ಕೊಡುವುದು ಹೆತ್ತವರಿಗೆ ಅತ್ಯಂತ ತ್ರಾಸದಾಯಕ ಕೆಲಸ. ಕಾರಣ, ಅಲ್ಲಿ ಸಾಮಾನ್ಯ ಕೃಷಿ ಉದ್ಯೋಗ ಮಾಡಿಕೊಂಡಿರುವ ವರನಿಗೆ ಲಕ್ಷ ಲಕ್ಷ ದುಡ್ಡು, ಒಡವೆ, ಪಾತ್ರೆ, ಬೈಕ್, ಕಾರ್ ಇತ್ಯಾದಿಯನ್ನು ಹುಡುಗಿಯ ತಂದೆ ಕೊಡಬೇಕು. ಸರ್ಕಾರಿ ಉದ್ಯೋಗದಲ್ಲಿದ್ದರೆ ವರನ ಬೇಡಿಕೆಗಳು ಇಮ್ಮಡಿ, ಮೂರ್ಮಡಿ ಆಗುತ್ತವೆ ಎಂದು ಹೆಸರು ಹೇಳಲು ಬಯಸದ, ಮದುವೆಯಾಗಿ ಉತ್ತರಪ್ರದೇಶದಿಂದ ಯಲ್ಲಾಪುರಕ್ಕೆ ಬಂದ ಗೃಹಿಣಿಯೋರ್ವರು ಹೇಳುತ್ತಾರೆ.
ಬಂದವರ ಬವಣೆಗಳೇನು?
ಸಾವಿರಾರು ಕಿ.ಮೀ. ದೂರದಿಂದ ವಲಸೆ ಬಂದ ಮಹಿಳೆಗೆ ಎದುರಾಗುವ ಸವಾಲುಗಳು ನೂರಾರು. ಮೊಟ್ಟ ಮೊದಲಾಗಿ ಭಾಷೆಯ ಸಮಸ್ಯೆ, ಉತ್ತರ ಪ್ರದೇಶದಲ್ಲಿ ಅವಧ್ ಮತ್ತು ಹಿಂದಿ ಭಾಷೆಯನ್ನು ಮಾತನಾಡುವ ಮಹಿಳೆಯರು ಇಲ್ಲಿ ಬಂದ ಮೇಲೆ ಕನ್ನಡ ಅಥವಾ ಹವ್ಯಕ ಕನ್ನಡದಲ್ಲಿ ಮಾತನಾಡಬೇಕು. ಮದುವೆಯಾಗುವ ಹುಡುಗನಿಗೆ ಹಿಂದಿ ಬಂದರೆ, ಹುಡುಗನ ಮನೆಯವರಿಗೆ ಹಿಂದಿ ಬರುವುದಿಲ್ಲ. ಮಕ್ಕಳ ಶಾಲಾ ಶಿಕ್ಷಣಕ್ಕೂ ತೊಂದರೆ. ಗ್ರಾಮಾಂತರದಲ್ಲಿ ಆಂಗ್ಲ ಭಾಷೆಯ ಶಾಲೆಗಳಿಲ್ಲ. ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಿದರೆ ಹೆತ್ತಮ್ಮನಿಗೆ ಕನ್ನಡ ಬರುವುದಿಲ್ಲ. ಮಲೆನಾಡಿನ ಮನೆಗಳು ಕಾಡಂಚಿನಲ್ಲಿ, ನಗರದಿಂದ ದೂರದಲ್ಲಿರುವುದರಿಂದ ನಗರ ಸಂಪರ್ಕ ಇಲ್ಲದೆ ಇರುವುದು, ಜನವಸತಿಯಿಲ್ಲದ ನಿರ್ಜನ ಕಾಡಂಚಿನ ಮನೆಗಳಲ್ಲಿ ಜೀವನ ನಡೆಸುವುದು ಕಷ್ಟವೆಂದು ಕೆಲವರು ಹೇಳುತ್ತಾರೆ. ಹೆತ್ತವರ ಮನೆಯಲ್ಲಿ ವಿಶೇಷ ಸಮಾರಂಭಗಳು ಇ¨ªಾಗ, ಸಂಬಂಧಿಕರಿಗೆ ಏನಾದ್ರು ಅರೋಗ್ಯ ಸಮಸ್ಯೆಗಳಾದ ತಕ್ಷಣಕ್ಕೆ ಹೋಗಿ ಬರುವುದು ಉತ್ತರ ಪ್ರದೇಶದಿಂದ ಯಲ್ಲಾಪುರಕ್ಕೆ ಸೊಸೆಯಾಗಿ ಬಂದವರಿಗೆ ಕಷ್ಟ. ಮಕ್ಕಳು, ಪತಿ ಸೇರಿ ಎಲ್ಲರೂ ಪ್ರಯಾಣ ಬೆಳೆಸಬೇಕಾಗುತ್ತದೆ. ಪ್ರಯಾಣ ದುಬಾರಿ. ಹೀಗಾಗಿ ಕಷ್ಟ ಕಾಲದಲ್ಲಿ ತಾಯಿಯ ಮನೆಗೆ ಹೋಗಿ ಬರುವುದು ಕಷ್ಟದ ಕೆಲಸ.
ಕೊಟ್ಟ ಹೆಣ್ಣು ಕುಲಕ್ಕೆ ದೂರ
ಕೊಟ್ಟ ಹೆಣ್ಣು ಕುಲಕ್ಕೆ ದೂರ ಎನ್ನುವ ಹಿರಿಯರ ಮಾತು 21ನೇ ಶತಮಾನದಲ್ಲೂ ಆಚರಣೆಯಲ್ಲಿರುವುದು ಆಶ್ಚರ್ಯದ ಸಂಗತಿ. ಕಾಲ, ಜನ, ತಲೆಮಾರು ಬದಲಾದರೂ ವಿಚಿತ್ರ ಪದ್ಧತಿಗಳು ಮಾತ್ರ ಬದಲಾಗಿಲ್ಲ. ಉತ್ತರ ಪ್ರದೇಶದಲ್ಲಿ ಈಗಲೂ ಒಮ್ಮೆ ಮದುವೆ ಮಾಡಿಕೊಟ್ಟ ಮೇಲೆ ಮುಗಿಯಿತು. ಮತ್ತೆ ಮಗಳ ಮನೆಗೆ ಹೆತ್ತವರು ಹೋಗಲ್ಲ. ಹೋದರೂ ನೀರು ಸಹ ಕುಡಿಯುವುದಿಲ್ಲ. ಆಹಾರ ಸೇವಿಸುವುದು ದೂರದ ಮಾತು. ಆದರೆ, ದೂರದ ಯಲ್ಲಾಪುರಕ್ಕೆ ಮಗಳನ್ನು ಮದುವೆ ಮಾಡಿಕೊಟ್ಟ ಮೇಲೆ ಬರದೆ ಇರುವುದು ಆಗಲ್ಲ. ಬಂದರೂ ಆರಂಭದ ದಿನಗಳಲ್ಲಿ ಒಂದೆರಡು ದಿನಕ್ಕೆ ಮರಳಿ ಹೊರಟು ಬಿಡುತ್ತಿದ್ದರು. ನೀರು, ಆಹಾರ ಸೇವಿಸದೆ, ಮಗಳ ಮನೆಯಿಂದ ದೂರ ಉಳಿದು(ವಸತಿ ಗೃಹದಲ್ಲಿ)ಮಗಳನ್ನು ನೋಡಿಕೊಂಡು ಹೋಗುತ್ತಿದ್ದರು. ಆದರೆ, ಈಗ ಸ್ವಲ್ಪ ಪದ್ಧತಿಯನ್ನು.ಬದಲಾಯಿಸಿಕೊಂಡಿದ್ದಾರೆ. ಬಂದು ಹೋಗಲು ಐದಾರು ದಿನಗಳು ತಗಲುವುದರಿಂದ ಮಗಳ ಮನೆಯಲ್ಲಿ ನಾಲ್ಕೈದು ದಿನವಾದರೂ ಉಳಿಯಬೇಕಾಗುತ್ತದೆ. ಹಾಗೆ ಉಳಿದು ಮರಳಿ ಊರಿಗೆ ಹೋಗುವಾಗ ಶಾಸ್ತ್ರದಂತೆ ಊಟ, ವಸತಿ ಪಡೆದಿದ್ದಕ್ಕೆ ಅಳಿಯನಿಗೆ ಸ್ವಲ್ಪ ಹಣ ಕೊಟ್ಟು ಹೋಗುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.
ಏನೇ ಆದರೂ ದೂರದ ಊರಿನಿಂದ ಬಂದು ಜನ, ಭಾಷೆ, ಆಹಾರ, ವಾತಾವರಣ ಭಿನ್ನವಿದ್ದರೂ ಉತ್ತರ ಪ್ರದೇಶದ ಹೆಣ್ಣುಮಕ್ಕಳು ಇಲ್ಲಿಗೆ ಬಂದು ಹೊಂದಾಣಿಕೆಯ ಜೀವನ ನಡೆಸುತ್ತಿರುವುದು ಶ್ಲಾಘನೀಯ.
ಬಂದವರು ಹೇಗಿದ್ದಾರೆ?:
ಉತ್ತರ ಪ್ರದೇಶದಿಂದ ಬಂದ ಮಹಿಳೆಯರಿಗೆ ಯಲ್ಲಾಪುರ ಒಂದು ರೀತಿಯ ಸ್ವರ್ಗ. ಅಲ್ಲಿಯ ಹಾಗೆ 50 ಡಿಗ್ರಿ ಬಿಸಿಲಿನ ತಾಪತ್ರಯ ಇಲ್ಲ. ಮೈನಸ್ ಡಿಗ್ರಿ ಚಳಿಯೂ ಇಲ್ಲ. ಯಾವಾಗ ಬೇಕಾದಾಗ ದಿಕ್ಕನ್ನು ಬದಲಿಸುವ ನದಿಗಳೂ ಇಲ್ಲಿಲ್ಲ. ಇಲ್ಲಿಯ ಸಮತೋಲನದ ವಾತಾವರಣ, ಹೊರಗಿನವರೆಂದು ಭಾವಿಸದೆ ಇವರು ನಮ್ಮವರು ಎಂದು ಬರಮಾಡಿಕೊಳ್ಳುವ ಸಮಾಜ ಬಾಂಧವರ ನಡೆ ಉತ್ತರ ಪ್ರದೇಶದ ವಧುಗಳಿಗೆ ಸಂತಸದ ಜೀವನ ನಡೆಸಲು ಸಹಕಾರಿಯಾಗಿದೆ. ಹಾಗಂತ ಮದುವೆಯಾಗಿ ಬಂದ ಎಲ್ಲರೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಲಾಗುವುದಿಲ್ಲ. ಹೊಂದಾಣಿಕೆಯ ತೊಂದರೆ ಇರುವುದರಿಂದ ಸಣ್ಣಪುಟ್ಟ ಗೊಂದಲಗಳು ಇವೆ.
ಡಾ. ಗುರು ಬಾಗೇವಾಡಿ
ಸಹಾಯಕ ಪ್ರಾಧ್ಯಾಪಕರು, ಕೇಂದ್ರೀಯ ವಿಶ್ವವಿದ್ಯಾಲಯ