ಚಾಮರಾಜನಗರ: ಕೋವಿಡ್ ಮೂರನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಆದರೂ ಜನ ಸಾಮಾನ್ಯರು ಇದರ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ. ಸಾವಿರಾರು ಜನರನ್ನು ಸೇರಿಸಿ ಮದುವೆ, ಗೃಹಪ್ರವೇಶದಂಥ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೆ ಇಲ್ಲಿ ಎರಡು ಕುಟುಂಬದವರು ತಮ್ಮ ಮಕ್ಕಳ ಮದುವೆಯನ್ನು ಮನೆಯಲ್ಲೇ ಮಾಡಿ, ಬಂಧು ಮಿತ್ರರು ಇದ್ದಲ್ಲೇ ಹರಸಿ ಎಂದು ಮನವಿ ಮಾಡಿಕೊಂಡು ಇತರರರಿಗೆ ಮಾದರಿಯಾಗಿದ್ದಾರೆ.
ಚಾಮರಾಜನಗರ ತಾಲೂಕಿನ ವೆಂಕಟಯ್ಯನಛತ್ರ ಹೊಸೂರು ಗ್ರಾಮದ ಸುಷ್ಮಾ ಹಾಗೂ ಚನ್ನಪ್ಪನಪುರ ಗ್ರಾಮದ ಶ್ರೇಯಸ್ ಅವರ ವಿವಾಹ ನಿಶ್ಚಯಗೊಂಡು ಇಂದು ಮತ್ತು ನಾಳೆ ನಗರದ ಶಿವಕುಮಾರಸ್ವಾಮಿ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯಬೇಕಿತ್ತು. ಹೀಗಾಗಿ ನೆಂಟರಿಷ್ಟರು, ಬಂಧುಗಳಿಗೆ ಆಹ್ವಾನ ಪತ್ರಿಕೆಯು ತಲುಪಿತ್ತು.
ಆದರೆ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಷ್ಮಾ, ಶ್ರೇಯಸ್ ಹಾಗೂ ಅವರ ಮನೆಯವರು ಒಂದು ನಿರ್ಧಾರ ಕೈಗೊಂಡು ವಿವಾಹವನ್ನು ಅತ್ಯಂತ ಸರಳವಾಗಿ ತಮ್ಮೂರಿನಲ್ಲೇ ನಡೆಸಲು ನಿರ್ಧರಿಸಿದ್ದಾರೆ.
ಹೀಗಾಗಿ ಆಹ್ವಾನ ನೀಡಿದ್ದವರಿಗೆ ; ನೀವು ಇದ್ದಲ್ಲೇ ಆರಾಮವಾಗಿ ಸುರಕ್ಷಿತವಾಗಿರಿ. ನಮ್ಮನ್ನು ಅಲ್ಲಿಂದಲೇ ಆಶೀರ್ವದಿಸಿ ಎಂದು ವಾಟ್ಸಪ್ ಮೂಲಕ ಮನವಿ ಮಾಡಿದ್ದಾರೆ.
Related Articles
ಅದರ ಒಕ್ಕಣೆ ಇಂತಿದೆ:
ಆತ್ಮೀಯ ಬಂಧುಗಳೇ ಸ್ನೇಹಿತರೇ, ಸಂತೋಷದ ವಿಚಾರವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಜ.22 ಮತ್ತು 23ರಂದು ನಮ್ಮ ಮಗಳ ಮದುವೆ ನಿಶ್ಚಯವಾಗಿದ್ದು, ಲಾಕ್ಡೌನ್ ವಿನಾಯಿತಿ ನೀಡಿದ್ದರೂ, ಕೆಲವು ನಿಯಮ ಪಾಲಿಸಬೇಕಾದ್ದರಿಂದ ತೀರಾ ಸರಳವಾಗಿ ನಡೆಯಲಿದೆ. ನಮ್ಮ ಮಗಳಾದ ಸುಷ್ಮಾಳ ಬಾಳಸಂಗಾತಿಯಾಗಲಿರುವ ಶ್ರೇಯಸ್ ಇವರ ಮದುವೆ ಸಂಪ್ರದಾಯಗಳು ನಡೆಯಲಿದ್ದು, ಕುಟುಂಬಸ್ಥರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಆದರೆ, ಮದುವೆ ಅನ್ನೋದು ಸಂಭ್ರಮವಾಗಬೇಕಿದ್ದರೆ ನೀವು ಈ ಕ್ಷಣಗಳಿಗೆ ಸಾಕ್ಷಿಯಾಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಸಮಾರಂಭ ಕಾರ್ಯಕ್ರಮಮಗಳಿಗೆ ಜನರು ಬರುವುದಕ್ಕೆ ಆಗುತ್ತಿಲ್ಲ. ನಿಮ್ಮ ಹಾರೈಕೆ ಆಶೀರ್ವಾದ ಲ್ಲದೇ ನಮ್ಮ ಮಗಳ ಮದುವೆ ಸಂಪನ್ನವಾಗುವುದಾದರೂ ಹೇಗೆ ಹೇಳಿ? ಇದುವೇ ನಮ್ಮ ಆತ್ಮೀಯ ಆಹ್ವಾನ ಎಂದು ತಿಳಿದು, ಈ ವಿವಾಹ ಕಾರ್ಯಕ್ರಮಕ್ಕೆ ತಾವುಗಳು ಆಗಮಿಸದೇ ತಾವು ಇರುವ ಸ್ಥಳದಿಂದಲೇ ನವಜೋಡಿಗಳನ್ನು ಆಶೀರ್ವದಿಸಿ ಎಂದು ಮನವಿ. -ಇಂತಿ ನಿಮ್ಮ ಮೀನಾಕ್ಷಿ, ಸುರೇಶ್, ಕರಿಮಾದಪ್ಪ ಕುಟುಂಬವರ್ಗ, ವಿಸಿ ಹೊಸೂರು. ಚಾಮರಾಜನಗರ ತಾಲೂಕು.
ಕೋವಿಡ್ ತೀವ್ರವಾಗಿ ಹರಡುತ್ತಿದ್ದರೂ ಅದನ್ನು ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಸಮಾರಂಭ ನಡೆಸಿ ಕೋವಿಡ್ ಇನ್ನಷ್ಟು ಹರಡಲು ಕಾರಣರಾಗುವವರಿಗೆ ಈ ಕುಟುಂಬ ಮಾದರಿಯಾಗಿದೆ.