ಕೋಲಾರ: ಸಾಮಾನ್ಯವಾಗಿ ವಧು ನಾಪತ್ತೆಯಾಗಿ ಮದುವೆ ಮುರಿದು ಬೀಳುವ ಪ್ರಸಂಗಗಳು ಅಲ್ಲೊಮ್ಮೆ ಇಲ್ಲೊಮ್ಮೆ ನಡೆಯುತ್ತದೆ.ಆದರೆ ಕೋಲಾರದಲ್ಲಿ ವಧು, ವರ ಇಬ್ಬರೂ ನಾಪತ್ತೆಯಾಗಿ ಭಾನುವಾರ ನಡೆಯಬೇಕಿದ್ದ ಅದ್ಧೂರಿ ಮದುವೆಯೆ ಮುರಿದು ಬಿದ್ದಿದೆ.
ಬಂಗಾರಪೇಟೆಯ ನೇರ್ನಳ್ಳಿಯ ಎನ್ . ಸೌಮ್ಯ ಎಂಬಾಕೆಗೆ ಮಾಲೂರಿನಚನ್ನಕಲ್ಲಿನ ನಿವಾಸಿ ಸಿ.ಎಂ.ಗುರೇಶ್ ಜೊತೆ ವಿವಾಹ ನೆರವೇರಬೇಕಿತ್ತು. ಶನಿವಾರ ಸಂಜೆ ಇದ್ದಕ್ಕಿದ್ದಂತೆ ವಧು ಸೌಮ್ಯ ನಾಪತ್ತೆಯಾಗಿದ್ದಾಳೆ.
ವಧು ನಾಪತ್ತೆಯಾದ ಬೆನ್ನಲ್ಲೇ ವರ ಗುರೇಶ್ ಮತ್ತು ಸೌಮ್ಯ ಕಡೆಯವರು ಮದುವೆ ಮುರಿದು ಬೀಳಬಾರದು ಎಂದು ಬೇರೆ ಹುಡುಗಿಯೊಂದಿಗೆ ರಾತ್ರೋ ರಾತ್ರಿ ಮದುವೆ ನಿಗದಿ ಮಾಡಿದ್ದಾರೆ. ಸೌಮ್ಯ ಚಿಕ್ಕಪ್ಪನ ಪುತ್ರಿ ವೆಂಕಟರತ್ನಮ್ಮ ಳೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ.
ಮದುವೆಗೆ ಒಪ್ಪಿದ್ದ ವರ ಗುರೇಶ್ ಭಾನುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ಬಂದಿದೆ.
ವಧು,ವರ ಇಬ್ಬರೂ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಸಾವಿರಾರು ಜನರ ಔತಣಕ್ಕಾಗಿ ಮಾಡಿದ್ದ ಊಟ ವ್ಯರ್ಥವಾಗಿದೆ. ಮದುವೆಗಾಗಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ನೂರಾರು ಸಂಬಂಧಿಕರು ಬೇಸರದಿಂದ ಮನೆಗೆ ವಾಪಾಸ್ ತೆರಳಿದ್ದಾರೆ.