ನವದೆಹಲಿ: ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಬ್ರಿಕ್ಸ್ ರಾಷ್ಟ್ರಗಳು ಶೂನ್ಯ ಸಹಿಷ್ಣು ಧೋರಣೆ ಹೊಂದಿರಬೇಕು ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಬ್ರಿಕ್ಸ್ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ಗುರುವಾರ ನಡೆದ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ವರ್ಚುವಲ್ ವಿಧಾನದ ಮೂಲಕ ಭಾಗಿಯಾಗಿದ್ದ ಅವರು, ಬ್ರಿಕ್ಸ್ ರಾಷ್ಟ್ರಗಳು ಯಾವಾಗಲೂ ತಮ್ಮ ಸಾರ್ವಭೌಮತ್ವವನ್ನು, ಪ್ರಾದೇಶಿಕ ಸಮಗ್ರತೆ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳನ್ನು ಕಾಪಾಡುವ ನಿಟ್ಟಿನಲ್ಲಿ ಪರಸ್ಪರ ಸಹಕಾರ ಕೊಡುವ ವಾಗ್ಧಾನದೊಂದಿಗೆ ಹೆಜ್ಜೆ ಹಾಕುತ್ತಿವೆ. ಈ ವಾಗ್ಧಾನವನ್ನು ಯಾರೂ ಮರೆಯಬಾರದು ಎಂದು ಜೈಶಂಕರ್ ಹೇಳಿದ್ದಾರೆ.
ಇದಿಷ್ಟೇ ಅಲ್ಲದೆ, “ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸೂಚಿಸಿರುವ ಸುಧಾರಣೆಗಳನ್ನು ಬ್ರಿಕ್ಸ್ ರಾಷ್ಟ್ರಗಳು ಅವಿರೋಧವಾಗಿ ಪಾಲಿಸಬೇಕು. ಕೊರೊನೋತ್ತರ ಸಂದರ್ಭದಲ್ಲಿ ನಾವೆಲ್ಲರೂ ಕೈಗೊಂಡಿರುವ ಆರ್ಥಿಕ ಸಬಲೀಕರಣ ಕ್ರಮಗಳನ್ನು ಬ್ರಿಕ್ಸ್‌ನ ಎಲ್ಲಾ ರಾಷ್ಟ್ರಗಳೂ ಪರಸ್ಪರ ಬೆಂಬಲಿಸಬೇಕು ಹಾಗೂ ನಮ್ಮ ನಡುವಿನ ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಬೇಕು” ಎಂದು ಜೈಶಂಕರ್ ಕರೆ ನೀಡಿದ್ದಾರೆ.