Advertisement
ಚೀನದ ಕ್ಸಿಯಾಮೆನ್‌ನಲ್ಲಿ ನಡೆಯುತ್ತಿರುವ ಬ್ರೆಜಿಲ್, ರಷ್ಯಾ, ಭಾರತ, ಚೀನ ಮತ್ತು ದಕ್ಷಿಣ ಕೊರಿಯಾ ದೇಶಗಳ ಕೂಟ ಬ್ರಿಕ್ಸ್ ಶೃಂಗಸಭೆಯಲ್ಲಿ ಜಗತ್ತನ್ನು ಕಾಡುತ್ತಿರುವ ಭಯೋತ್ಪಾದನೆಯನ್ನು ಖಂಡಿಸಿದೆ. ಜತೆಗೆ, ಪಾಕಿಸ್ಥಾನದ ನೆರವಿನಿಂದಲೇ ಕಾರ್ಯಾಚರಣೆ ಮಾಡುತ್ತಿರುವ ಲಷ್ಕರ್-ಎ-ತಯ್ಯಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ಹುಟ್ಟಡಗಿಸುವ ಬಗ್ಗೆ ಐದೂ ರಾಷ್ಟ್ರಗಳು ಜಂಟಿ ಹೇಳಿಕೆ ಹೊರಡಿಸಿವೆ. 43 ಪುಟಗಳ ಈ ಹೇಳಿಕೆಯಲ್ಲಿ ಈ ಉಗ್ರ ಸಂಘಟನೆಗಳಿಗೆ ನೆಲೆ ಮತ್ತು ನೆರವು ನೀಡುತ್ತಿರುವ ದೇಶಗಳ ಮೇಲೆ ಒತ್ತಡ ತಂದು, ಇವುಗಳ ಅಟಾಟೋಪ ನಿಲ್ಲಿಸುವ ಸಂಬಂಧವೂ ನಿರ್ಧರಿಸಲಾಗಿದೆ. ಅಫ್ಘಾನಿಸ್ಥಾನ ಮೇಲೆ ಪದೇ ಪದೇ ಆಗುತ್ತಿರುವ ಉಗ್ರ ದಾಳಿಯನ್ನು ನಿಲ್ಲಿಸುವ ಸಲುವಾಗಿ ತತ್‌ಕ್ಷಣವೇ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯದ ಬಗ್ಗೆ ವಿವರಣೆ ನೀಡಲಾಗಿದೆ.
Related Articles
ವಿಶೇಷವೆಂದರೆ, ಈ ಶೃಂಗ ಸಭೆಯಲ್ಲೂ ಭಯೋತ್ಪಾದನೆ ವಿಚಾರವನ್ನು ಪ್ರಸ್ತಾಪಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರೇ. ಇಡೀ ಜಗತ್ತನ್ನು ಕಾಡುತ್ತಿರುವ ಉಗ್ರವಾದವನ್ನು ಮಟ್ಟ ಹಾಕುವ ಮತ್ತು ಇದಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಾ ಅಂತಾರಾಷ್ಟ್ರೀಯ ಭದ್ರತೆಗೆ ಆತಂಕ ತರುವಂಥವರ ವಿರುದ್ಧ ಕ್ರಮ ಅನಿವಾರ್ಯ ಎಂದರು. ಇದಕ್ಕೆ ಉಳಿದ ಎಲ್ಲ ನಾಯಕರು ಸಮ್ಮತಿಸಿದರು ಎಂದು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ಇಲಾಖೆ ಅಧಿಕಾರಿ ಪ್ರೀತಿ ಸರನ್ ಹೇಳಿದ್ದಾರೆ. ಭಾರತದ ಮಟ್ಟಿಗೆ ಈ ನಿರ್ಣಯ ಬಹು ಮುಖ್ಯವಾದದ್ದು. ಜೈಶ್ ಎ ಮಹಮ್ಮದ್ ಮುಖ್ಯಸ್ಥ ಅಜರ್ ಮಸೂದ್‌ಗೆ ನಿರ್ಬಂಧ ಹಾಕಲು ಚೀನ ಮೊದಲಿನಿಂದಲೂ ಅಡ್ಡಗಾಲು ಹಾಕಿದೆ. ಇದೀಗ ಚೀನ ಕೂಡ ಜೆಇಎಂಗೆ ಮಟ್ಟ ಹಾಕುವ ಸಹಿ ಮಾಡಿರುವುದರಿಂದ ಮುಂದೆ ಭಾರತದ ಪ್ರಯತ್ನಕ್ಕೆ ಜಯ ಸಿಗಬಹುದು ಎಂದಿದ್ದಾರೆ.
Advertisement
ಬ್ರಿಕ್ಸ್ ಹೇಳಿಕೆಯಿಂದ ಏನಾಗುತ್ತೆ ?ಉಗ್ರವಾದ, ಸಂಘಟನೆಗಳಿಗೆ ನೇಮಕ, ಒಂದು ಕಡೆಯಿಂದ ಮತ್ತೂಂದು ಕಡೆಗೆ ಅಂತಾರಾಷ್ಟ್ರೀಯ ಮಟ್ಟದ ಉಗ್ರರ ಓಡಾಟದ ನಿಗ್ರಹ, ಉಗ್ರರಿಗೆ ಧನ ಸಹಾಯ (ಹವಾಲಾ) ಸಿಗುವುದಕ್ಕೆ ತಡೆ, ಶಸ್ತ್ರಾಸ್ತ್ರ ಗಳ ಪೂರೈಕೆ, ಮಾದಕ ವಸ್ತುಗಳ ಕಳ್ಳಸಾಗಾಟ, ಅಪರಾಧ ಚಟುವಟಿಕೆಗಳಿಗೆ ತಡೆ, ಉಗ್ರರ ಅಡಗುದಾಣಗಳ ನಾಶ, ಇಂಟರ್ನೆಟ್ ಅನ್ನು ದುರ್ಬಳಕೆ ಮಾಡಿ ಕೊಳ್ಳುವುದರ ತಡೆ, ಅತ್ಯಾಧುನಿಕ ಮಾಹಿತಿ ವಿಧಾನ ಗಳ ದುರ್ಬಳಕೆ ನಿಗ್ರಹಿಸುವ ಕೆಲಸವಾಗುತ್ತದೆ. ಇಂದು ಮೋದಿ-ಕ್ಸಿ ಜಿನ್‌ಪಿಂಗ್ ಭೇಟಿ
ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ಮಾತುಕತೆ ನಡೆಸಲಿದ್ದಾರೆ. ಡೋಕ್ಲಾಮ್ ಗಡಿ ವಿವಾದದ ಅನಂತರ ನಡೆಯುತ್ತಿರುವ ಪ್ರಮುಖ ಮಾತುಕತೆ ಇದು. ಗಡಿ ವಿವಾದದ ಬಗ್ಗೆಯೂ ಮಾತುಕತೆ ವೇಳೆ ಪ್ರಸ್ತಾವವಾಗಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿ ಇಲ್ಲ.