Advertisement

ಪೋಡಿ ಮುಕ್ತ ಅಭಿಯಾನಕ್ಕೂ ಲಂಚ

02:50 PM Feb 28, 2018 | |

ಪುತ್ತೂರು: ಪೋಡಿ ಮುಕ್ತ ಅಭಿಯಾನ ಯೋಜನೆ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ಮಾಡಲು ಬಂದ ಸರ್ವೆ ಇಲಾಖೆ ಅಧಿಕಾರಿಗಳು ಲಂಚ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಭೂದಾಖಲೆಗಳ ಸಹಾಯಕ ನಿರ್ದೇಶಕರನ್ನು ತಾಲೂಕು ಪಂಚಾಯತ್‌ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಲಂಚಗುಳಿತನದ ವಿರುದ್ಧ ಸದಸ್ಯರು ಪಕ್ಷ ಭೇದ ಮರೆತು ಮುಗಿಬಿದ್ದರು. 

ಹಳೇನೇರಂಕಿ ಗ್ರಾಮವನ್ನು ಪೋಡಿಮುಕ್ತ ಮಾಡುವಾಗ ಸರ್ವೆ ಕಾರ್ಯಕ್ಕಾಗಿ ಬಂದ ಅಧಿಕಾರಿಗಳು 10 ಮನೆಗಳಿಂದ 2 ಸಾವಿರ ರೂ. ಲಂಚ ಪಡೆದುಕೊಂಡಿದ್ದಾರೆ ಎಂದು ಹಿಂದಿನ ಸಭೆಯಲ್ಲಿ ತಿಳಿಸಲಾಗಿತ್ತು. ಇದರ ಪಾಲನ ವರದಿ ನೀಡಿದ ಭೂದಾಖಲೆಗಳ ಸಹಾಯಕ ನಿರ್ದೇಶಕರು, ಪೋಡಿ ಮುಕ್ತ ಯೋಜನೆ ಸರಕಾರಿ ಕಾರ್ಯಕ್ರಮ. ಇದಕ್ಕೆ ಹಣ ಕೊಡುವಂತಿಲ್ಲ. ಸರ್ವೆ ಸಮಯದಲ್ಲಿ ಭೂಮಾಪಕರು ಹಣ ಕೇಳಿದ ಬಗ್ಗೆ ಲಿಖಿತ ದೂರು ನೀಡಿದರೆ, ಸೂಕ್ತ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಉತ್ತರಿಸಿದರು.

ಲಿಖಿತ ದೂರು ನೀಡಬೇಕು ಎಂಬ ಹೇಳಿಕೆ ಸದಸ್ಯರನ್ನು ಕೆರಳಿಸಿತು. ಸದನದಲ್ಲಿ ಹೇಳುವಾಗ ಲಿಖೀತ ದೂರು ನೀಡುವ ಆವಶ್ಯಕತೆ ಏನು? ಹಣ ತೆಗೆದುಕೊಂಡ ಮನೆಯವರನ್ನು ನಿಮ್ಮ ಎದುರು ತಂದು ನಿಲ್ಲಿಸಬೇಕಾ ಎಂದು ಸದಸ್ಯೆ ತೇಜಸ್ವಿನಿ ಗೌಡ ಕಟ್ಟ ಪುಣಿ ಪ್ರಶ್ನಿಸಿದರು. ಸುಳ್ಯದಲ್ಲಿ ತಂಗಿದ್ದೇವೆ. ಅಲ್ಲಿಂದ ಹೇಳನೇರಂಕಿಗೆ ಬರಲು ತುಂಬಾ ಖರ್ಚಾಗುತ್ತದೆ ಎಂದು ಹೇಳಿ, ಹಣ ಪಡೆದುಕೊಂಡಿದ್ದಾರೆ. ಇದು ಗಮನಕ್ಕೆ ಬಂದ ಮೇಲೆ ಹಣ ವಾಪಸ್‌ ಕೊಡಿಸಿದ್ದೇನೆ ಎಂದರು.

ಪ್ರತಿಕ್ರಿಯಿಸಿದ ಅಧಿಕಾರಿ, ಲಿಖಿತ ದೂರು ನೀಡಿದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಮತ್ತೂಮ್ಮೆ ಹೇಳಿದರು. ಇದರಿಂದ ಆಕ್ರೋಶಗೊಂಡ ಸದಸ್ಯ ಪರಮೇಶ್ವರ್‌ ಭಂಡಾರಿ, ಸದನದಲ್ಲಿ ಈ ಬಗ್ಗೆ ಮಾಹಿತಿ ನೀಡುವಾಗ ಲಿಖಿತ ದೂರು ನೀಡುವಂತೆ ಕೇಳುವುದರ ಉದ್ದೇಶ ಏನು? ಶುಲ್ಕ ತೆಗೆದುಕೊಳ್ಳುವಂತಿಲ್ಲ ಎಂದಿದ್ದರೂ ಲಂಚ ತೆಗೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಧ್ವನಿಗೂಡಿಸಿದ ಸದಸ್ಯೆ ಉಷಾ ಅಂಚನ್‌, ಸರಕಾರದ ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ. ಪೋಡಿ ಮುಕ್ತ ಕೆಲಸ ಕಾರ್ಯ ಯಾವ ಗ್ರಾಮದಲ್ಲಿಎಷ್ಟು ಕೆಲಸ ಆಗಿದೆ ಎಂಬ ಬಗ್ಗೆ ಮಾಹಿತಿ ಬೇಕು. ಈ ಬಗ್ಗೆ ಅಧ್ಯಕ್ಷರು ತಕ್ಷಣ ಸೂಚನೆ ನೀಡಿ, ಮಾಹಿತಿ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌ ಅಧಿಕಾರಿಗೆ ಸೂಚನೆ ನೀಡಿದರು.

ದೂಪದ ಮರ ಕಡಿಯಲು ಅನುಮತಿ ಬೇಕು
ಕಡಿಯಬಹುದಾದ 42 ಜಾತಿಯ ಮರಗಳ ಪಟ್ಟಿಯಲ್ಲಿ ದೂಪದ ಮರ ಇದ್ದರೂ ಅನುಮತಿ ಇಲ್ಲದೆ ಕಡಿಯುವಂತಿಲ್ಲ ಎಂದು ತೇಜಸ್ವಿನಿ ಅವರ ಪ್ರಶ್ನೆಗೆ ಉತ್ತರಿಸಲಾಯಿತು. ಪ್ರತಿಕ್ರಿಯಿಸಿದ ತೇಜಸ್ವಿನಿ, ಉಪ್ಪಿನಂಗಡಿ, ಹಳೇನೇರಂಕಿ ಪ್ರದೇಶಗಳಲ್ಲಿ ಹೇರಳವಾಗಿ ದೂಪದ ಮರ ಕಡಿಯಲಾಗುತ್ತಿದೆ. ಪ್ರಶ್ನಿಸಿದರೆ, ರೇಂಜರ್‌ ಅನುಮತಿ ನೀಡಿದ್ದಾರೆ ಎನ್ನುತ್ತಾರೆ. ಮೊದಲು ಅನುಮತಿ ನೀಡಿ, ದೂರು ಕೊಟ್ಟ ಬಳಿಕ ಪ್ರಕರಣ ದಾಖಲಿಸಿಕೊಂಡದ್ದು ಏಕೆ? ಈ ಬಗ್ಗೆ ರೇಂಜರ್‌ ಉತ್ತರ ನೀಡಬೇಕೆಂದು ಪಟ್ಟು ಹಿಡಿದರು.

ಉಪಾಧ್ಯಕ್ಷೆ ರಾಜೇಶ್ವರಿ, ಇಒ ಜಗದೀಶ್‌ ಎಸ್‌., ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ, ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್‌ ಉಪಸ್ಥಿತರಿದ್ದರು. ತಾ.ಪಂ. ಸದಸ್ಯರಾದ ಫೌಜಿಯಾ ಇಬ್ರಾಹಿಂ, ರಾಧಾಕೃಷ್ಣ ಬೋರ್ಕರ್‌, ರಾಮ ಪಾಂಬಾರ್‌, ಮೀನಾಕ್ಷಿ ಮಂಜುನಾಥ್‌, ದಿವ್ಯಾ ಪುರುಷೋತ್ತಮ ಗೌಡ, ಲಕ್ಷ್ಣಣ ಬೆಳ್ಳಿಪ್ಪಾಡಿ, ಪರಮೇಶ್ವರ ಭಂಡಾರಿ. ಶಿವರಂಜನ್‌, ರಾಜೇಶ್ವರಿ, ಲಲಿತಾ ಈಶ್ವರ್‌, ಸುಜಾತ ಕೃಷ್ಣಮೂರ್ತಿ, ಜಯಂತಿ ಆರ್‌. ಗೌಡ, ತೇಜಸ್ವಿನಿ ಗೌಡ, ಉಷಾ ಅಂಚನ್‌, ಆಶಾ ಲಕ್ಷ್ಮಣ್‌, ಕೆ.ಟಿ. ವಲ್ಸಮ್ಮ, ಕುಸುಮಾ ಪಿ.ವೈ., ಫಝಲ್‌ ಕೋಡಿಂಬಾಳ, ಗಣೇಶ್‌ ಕೈಕುರೆ ಮತ್ತು ಇಲಾಖೆಗಳ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡರು.

ಪರ್ಯಾಯ ವ್ಯವಸೆಯಿಲ್ಲ 
ಶಿರಾಡಿ ಘಾಟಿಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಅಲ್ಲಿ ಸಂಚಾರ ಬಂದ್‌ ಮಾಡಲಾಗಿದೆ. ಹೆದ್ದಾರಿಯಲ್ಲಿ ಹೋಗುವ ಬಸ್‌ಗಳನ್ನು ಡೈವರ್ಟ್‌ ಮಾಡಲಾಗಿದೆ. ಹೀಗಿದ್ದರೂ ಆ ಭಾಗದ ವಿದ್ಯಾರ್ಥಿಗಳಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಲ್ಲ ಎಂದು ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಕೇಳಿದರು. ಇವತ್ತೇ ಸಭೆ ಮಾಡಿ ಚರ್ಚೆ ಮಾಡ್ತೀವಿ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಹೇಳಿದರು. ಇಷ್ಟು ದಿನ ಎಲ್ಲಿ ಹೋಗಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಪ್ರಾಣಿ ನಿರೋಧಕ ಕಂದಕ
ರಕ್ಷಿತಾರಣ್ಯದ ಗಡಿಗಳಲ್ಲಿ ಪ್ರಾಣಿ ನಿರೋಧಕ ಕಂದಕ ನಿರ್ಮಿಸಲಾಗುತ್ತಿದ್ದರೂ ಅದನ್ನು ಪೂರ್ತಿ ಮಾಡಲು ಆಗುತ್ತಿಲ್ಲ ಎಂದು ವಲಯ ಅರಣ್ಯಾಧಿ ಕಾರಿ ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದರು. ಕಂದಕ ನಿರ್ಮಿಸಲು ಹೊರಟರೂ ಅಲ್ಲಲ್ಲಿ ರಸ್ತೆ, ಕಾಲು ದಾರಿ, ಹಾಡಿ, ಕಾಲನಿ ವ್ಯವಸ್ಥೆಗಳು ಅಡ್ಡ ಬರುತ್ತಿವೆ. ಇದರಿಂದ ಪ್ರಾಣಿಗಳ ಚಲನೆಗೆ ಅನುಕೂಲವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next