Advertisement

ವರ್ಷಕ್ಕೆ 76,000 ಭಾರತೀಯ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಬಲಿ!

11:14 AM Aug 16, 2017 | |

ದುಬೈ: ಬೇಗನೆ ಚಿಕಿತ್ಸೆ ಕೊಡದೆ ಇರುವ ಕಾರಣಕ್ಕಾಗಿ ಭಾರತದಲ್ಲಿ 2020 ರ ವೇಳೆ ವರ್ಷಕ್ಕೆ 76,000 ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಬಲಿಯಾಗುವ ಸಾಧ್ಯತೆಗಳಿವೆ ಎಂಬ ಆತಂಕಕಾರಿ ವಿಚಾರವನ್ನು ಸಂಶೋಧಕರು ಹೊರಹಾಕಿದ್ದಾರೆ. 

Advertisement

ಸ್ತನ ಕ್ಯಾನ್ಸರ್‌ ಭಾರತೀಯ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ ಆಗಿದ್ದು, 2012 ರಲ್ಲಿ 70,218 ಮಹಿಳೆಯರನ್ನು ಬಲಿ ಪಡೆದಿದೆ ಎಂದು ವ್ಯವಹಾರಿಕ ಅಧ್ಯಯನಗಳ ಮಾಸ ಪತ್ರಿಕೆ ವಿವರ ನೀಡಿದೆ. ಮೃತಪಟ್ಟ ಮಹಿಳೆಯರಲ್ಲಿ ಹೆಚ್ಚಿನವರು 30 ರಿಂದ 50 ವರ್ಷದ ಒಳಗಿನವರು ಎಂದು ವರದಿ ಹೇಳಿದೆ.

ಭಾರತದಲ್ಲಿ ಈ ಸಮಸ್ಯೆ ಪ್ರಮಾಣ ಅಗಾಧವಾಗಿದ್ದು ಸರ್ಕಾರದ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಿದೆ ಎಂದು ದುಬೈನ ಉಲ್ಲೊಂಗಾಂಗ್‌ನ ಸಂಶೋಧನಾ ವಿಭಾಗದ ಅಸೋಸಿಯೇಟ್‌ ಡೀನ್‌ ವಿಜಯ್‌ ಪಿರೇರಾ ಹೇಳಿದ್ದಾರೆ.

ಸ್ತನ ಕ್ಯಾನ್ಸರನ್ನು ಸ್ವಯಂ ಪರೀಕ್ಷಿಸಿಕೊಳ್ಳುವಲ್ಲಿ ಮಹಿಳೆಯರಲ್ಲಿನ ತಿಳುವಳಿಕೆಯ ಕೊರತೆ ಮತ್ತು ಸಂಕೋಚವೇ ಕಾಯಿಲೆ ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. 

ಮಹಿಳೆಯರು ಕೌಟುಂಬಿಕ ಸಮಸ್ಯೆಗಳಿಂದಾಗಿ ಕಾಯಿಲೆ ಕಾಣಿಸಿಕೊಂಡ ಆರಂಭದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಬಹುತೇಕರು ಪುರುಷ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಲು ಸಂಕೋಚ ಹೊಂದಿರುತ್ತಾರೆ. ಹೀಗಾಗಿ ಕಾಯಿಲೆ ಪ್ರಾಣವನ್ನು ಕಸಿದುಕೊಳ್ಳುತ್ತಿದೆ ಎಂದು ಸಂಶೋಧಕರು ಕಾರಣ ನೀಡಿದ್ದಾರೆ. 

Advertisement

ಪುರುಷರಿಗೂ ಈ ಬಗ್ಗೆ ತಿಳುವಳಿಕೆ ನೀಡಬೇಕಾಗಿರುವ ಅಗತ್ಯವಿದೆ ಎಂದಿರುವ  ಸಂಶೋಧಕರು, ಆರಂಭಿಕ ಹಂತದ ರೋಗ ಲಕ್ಷಣಗಳನ್ನು ಪತ್ತೆ ಹಚ್ಚುವ ಅರಿವು ಹೊಂದಿದಲ್ಲಿ ಪ್ರಾಣ ಕಳೆದುಕೊಳ್ಳುವುದನ್ನು ತಡೆಯಬಹುದು ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

ವಿವಾಹಿತ ಮಹಿಳೆಯರು ಪತಿಯ ಬಳಿ ಖಾಸಗಿ ವಿಚಾರಗಳನ್ನೂ ಹೇಳಿಕೊಳ್ಳಲು ಹಿಂಜರಿಕೆ ತೋರಬಾರದು, ಈ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು. ಸೂಕ್ತ ಕಾಲದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಶಂಕೆ ಪರಿಹರಿಸಿಕೊಳ್ಳಬೇಕು ಎಂದು ಸಂಶೋಧಕರು ಕರೆ ನೀಡಿದ್ದಾರೆ. 

ಮಹಿಳೆಯರು ತಡವಾಗಿ ಗರ್ಭ ದಿರಿಸುವುದು, ಮಕ್ಕಳಿಗೆ ಸ್ತನ್ಯ ಪಾನ ನೀಡುವ ಅವಧಿ ಕಡಿಮೆಗೊಳಿಸುವುದು, ಬಾಣಂತಿಯಾಗಿರುವ ವೇಳೆ ಪಾಶ್ಚಾತ್ಯ ಆಹಾರ ಪದ್ಧತಿ, ಸ್ಥೂಲಕಾಯ, ವೇಗದ ಆರ್ಥಿಕ ಅಭಿವೃದ್ಧಿ ಮತ್ತು ಹೆಚ್ಚಾಗಿ ಆಗುತ್ತಿರುವ ನಗರೀಕಣವೂ ಸ್ತನ ಕ್ಯಾನ್ಸರ್‌ಗೆ ಕಾರಣವಾಗಿದೆ ಎಂಬ ಅಂಶಗಳನ್ನು ಸಂಶೋಧಕರು ಅಧ್ಯಯನದ ವೇಳೆ ಕಂಡು ಕೊಂಡಿದ್ದಾರೆ. 

ಸ್ತನ ಕ್ಯಾನ್ಸರ್‌ನ ಬಗ್ಗೆ ಅರಿವು ಮೂಡಿಸುವಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ದಾದಿಯರು ಹೆಚ್ಚಿನ ಕೆಲಸ ಮಾಡಬೇಕಾಗಿದೆ.ಅಂತೆಯೇ, ಸಾಮಾಜಿಕ ತಾಣಗಳು, ಶಾಲಾ-ಕಾಲೇಜ್‌ಗಳು ಮತ್ತು ಮಾಧ್ಯಮಗಳು ಪರಿಣಾಮಕಾರಿಯಾಗಿ ಅರಿವು ಮೂಡಿಸಬಲ್ಲವು ಎಂದು ಸಂಶೋಧಕರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next