Advertisement

ಸೋಲಿನಿಂದ ಹಿನ್ನಡೆಯಾಗಿದೆ: ಮ್ಯಾಕ್ಸ್‌ವೆಲ್‌

12:42 PM May 09, 2017 | Harsha Rao |

ಮೊಹಾಲಿ: ಈಗಾಗಲೇ ಕೂಟದಿಂದ ಹೊರಬಿದ್ದ ಗುಜರಾತ್‌ ಲಯನ್ಸ್‌ ವಿರುದ್ಧ ತವರಿನ ಮೊಹಾಲಿ ಅಂಗಳದಲ್ಲೇ ಅನುಭವಿಸಿದ ಸೋಲು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಮುಂದಿನ ಸುತ್ತಿನ ಪ್ರವೇಶಕ್ಕೆ ಭಾರೀ ಹಿನ್ನಡೆ ಉಂಟುಮಾಡಿದೆ. ಇದು ಪಂಜಾಬ್‌ ಕಪ್ತಾನ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

Advertisement

“ಸೋಲಿನಿಂದ ನಮಗೆ ಭಾರೀ ಹಿನ್ನಡೆಯಾಗಿದೆ. 189 ರನ್‌ ಮೊತ್ತವನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಆದರೆ ನಮ್ಮ ಬೌಲಿಂಗ್‌ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಫೀಲ್ಡಿಂಗ್‌ ಕೂಡ ಕಳಪೆಯಾಗಿತ್ತು. ಒಂದೆರಡಲ್ಲ, 3 ಕ್ಯಾಚ್‌ಗಳನ್ನು ಕೈಚೆಲ್ಲಿದೆವು’ ಎಂದು ಮ್ಯಾಕ್ಸ್‌ವೆಲ್‌ ಬೇಸರದಿಂದ ಹೇಳಿದರು. 

“ಹಾಶಿಮ್‌ ಆಮ್ಲ ಅವರ ಮತ್ತೂಂದು ಶತಕವೂ ವ್ಯರ್ಥವಾದ ಬಗ್ಗೆ ನಿಷಾದವಿದೆ. ನನಗಿದು ಅವರಿಗಿಂತ ಹೆಚ್ಚಿನ ನೋವುಂಟು ಮಾಡಿದೆ. ಈ ಕೂಟದಲ್ಲಿ ನಾವಿನ್ನೂ ಸತತ ಗೆಲುವಿನ ಎತ್ತರವನ್ನು ಮುಟ್ಟಿಲ್ಲ. ನಾವಿನ್ನು ಆಮ್ಲ, ಮಿಲ್ಲರ್‌ ಸೇವೆಯನ್ನು ಕಳೆದುಕೊಳ್ಳಲಿದ್ದೇವೆ. ಉಳಿದ ಮೀಸಲು ಆಟಗಾರರನ್ನು ಕಟ್ಟಿಕೊಂಡು ಹೊಸ ತಂಡವನ್ನು ರಚಿಸಿ ಉಳಿದ ಹೋರಾಟ ಪೂರೈಸಬೇಕಿದೆ…’ ಎಂಬುದಾಗಿ ಮ್ಯಾಕ್ಸ್‌ವೆಲ್‌ ಹೇಳಿದರು.

ರವಿವಾರ ರಾತ್ರಿ ಬ್ಯಾಟಿಂಗಿಗೆ ಇಳಿಸ ಲ್ಪಟ್ಟ ಪಂಜಾಬ್‌ 3 ವಿಕೆಟಿಗೆ 189 ರನ್‌ ಪೇರಿಸಿದರೆ, ಗುಜರಾತ್‌ 19.4 ಓವರ್‌ಗಳಲ್ಲಿ 4 ವಿಕೆಟಿಗೆ 192 ರನ್‌ ಬಾರಿಸಿ ವಿಜಯಿಯಾಯಿತು. ವಿಜೇತ ತಂಡದ ಪರ ಆರಂಭಕಾರ ಡ್ವೇನ್‌ ಸ್ಮಿತ್‌ 39 ಎಸೆತಗಳಿಂದ 74 ರನ್‌ (8 ಬೌಂಡರಿ, 4 ಸಿಕ್ಸರ್‌) ಹಾಗೂ ಇಶಾನ್‌ ಕಿಶನ್‌ 29 ರನ್‌ ಹೊಡೆದು,  9.2 ಓವರ್‌ಗಳಿಂದ 91 ರನ್‌ ಪೇರಿಸಿ ಭರ್ಜರಿ ಓಪನಿಂಗ್‌ ಕೊಟ್ಟರು. ರೈನಾ 39, ದಿನೇಶ್‌ ಕಾರ್ತಿಕ್‌ ಔಟಾಗದೆ 35 ರನ್‌ ಹೊಡೆದರು. ಭಾರತೀಯರಿಂದಲೇ ಕೂಡಿದ ಪಂಜಾಬ್‌ ಬೌಲಿಂಗ್‌ ಕ್ಲಿಕ್‌ ಆಗಲೇ ಇಲ್ಲ. 

ಉತ್ತಮ ಆರಂಭ: ರೈನಾ
ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಚೇಸ್‌ ಮಾಡುವ ನಿಟ್ಟಿನಲ್ಲಿ ಸ್ಮಿತ್‌-ಇಶಾನ್‌ ಕಿಶನ್‌ ನಿರ್ಮಿಸಿದ ಅಡಿ ಪಾಯ ನಿರ್ಣಾಯಕ ಪಾತ್ರ ವಹಿಸಿತು ಎಂಬುದಾಗಿ ಗುಜರಾತ್‌ ಲಯನ್ಸ್‌ ತಂಡದ ನಾಯಕ ಸುರೇಶ್‌ ರೈನಾ ಅಭಿಪ್ರಾಯಪಟ್ಟರು. 

Advertisement

“ನಮ್ಮ ಗೆಲುವಿಗೆ ಪವರ್‌-ಪ್ಲೇ ಬ್ಯಾಟಿಂಗ್‌ ಅತ್ಯಂತ ಮಹತ್ವದ್ದಾಗಿತ್ತು. ಇಲ್ಲಿ ರನ್‌ ಹರಿದು ಬಂದರೆ ಗೆಲುವು ಖಾತ್ರಿ ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಇದರಲ್ಲಿ ಯಶಸ್ವಿಯಾದೆವು. ಬಳಿಕ ನಾನು, ಕಾರ್ತಿಕ್‌ ಕೂಡ ಉತ್ತಮ ಪ್ರದರ್ಶನವಿತ್ತೆವು. ಈ ಬಾರಿ ನಮಗೆ ಬಹಳಷ್ಟು ಮಂದಿ ಗಾಯಾಳು ಆಟ ಗಾರರ ಸಮಸ್ಯೆ ಎದುರಾಯಿತು. ಆದರೂ ಯುವ ಕ್ರಿಕೆಟಿಗರ ಪಾಲಿಗೆ ಇದೊಂದು ಅತ್ಯುತ್ತಮ ಕ್ರಿಕೆಟ್‌ ಋತು ಎನಿಸಿಕೊಂಡಿತು…’ ಎಂದು ರೈನಾ ಹೇಳಿದರು.
ಸಂಕ್ಷಿಪ್ತ ಸ್ಕೋರ್‌: ಪಂಜಾಬ್‌-3 ವಿಕೆಟಿಗೆ 189. ಗುಜರಾತ್‌-19.4 ಓವರ್‌ಗಳಲ್ಲಿ 4 ವಿಕೆಟಿಗೆ 192 (ಸ್ಮಿತ್‌ 74, ಇಶಾನ್‌ ಕಿಶನ್‌ 29, ರೈನಾ 39, ಕಾರ್ತಿಕ್‌ ಔಟಾಗದೆ 35, ಸಂದೀಪ್‌ ಶರ್ಮ 19ಕ್ಕೆ 2).

ಪಂದ್ಯಶ್ರೇಷ್ಠ: ಡ್ವೇನ್‌ ಸ್ಮಿತ್‌.

Advertisement

Udayavani is now on Telegram. Click here to join our channel and stay updated with the latest news.

Next