Advertisement

ಗುಜರಾತಿನ ಜನರಿಂದ ದಾಖಲೆಗಳನ್ನು ಮುರಿಯುವುದರಲ್ಲಿಯೂ ದಾಖಲೆ : ಪ್ರಧಾನಿ ಮೋದಿ

07:38 PM Dec 08, 2022 | Team Udayavani |

ನವದೆಹಲಿ : ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭಾರಿ ಗೆಲುವು ದಾಖಲಿಸಿದ್ದು, 182 ಸ್ಥಾನಗಳ ಪೈಕಿ 156 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಜಯ ದಾಖಲಿಸಿದೆ. ”ಗುಜರಾತಿನ ಜನರು ದಾಖಲೆಗಳನ್ನು ಮುರಿಯುವುದರಲ್ಲಿಯೂ ದಾಖಲೆಯನ್ನು ಸೃಷ್ಟಿಸಿದ್ದಾರೆ.ಬಿಜೆಪಿಗೆ ಗುಜರಾತ್ ಇತಿಹಾಸದಲ್ಲೇ ಅತಿ ದೊಡ್ಡ ಜನಾದೇಶ ನೀಡುವ ಮೂಲಕ ರಾಜ್ಯದ ಜನತೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಜಾತಿ, ವರ್ಗ, ಸಮುದಾಯ ಮತ್ತು ಎಲ್ಲಾ ರೀತಿಯ ವಿಭಜನೆಗಳನ್ನು ಮೀರಿ ಬಿಜೆಪಿಗೆ ಮತ ಹಾಕಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

ಗೆಲುವಿನ ಸಂಭ್ರಮದಲ್ಲಿ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ”ಬಿಜೆಪಿಗೆ ಸಿಕ್ಕಿರುವ ಜನಬೆಂಬಲ ನವ ಭಾರತದ ಆಶಯಗಳ ಪ್ರತಿಬಿಂಬವಾಗಿದೆ.ಬಿಜೆಪಿಗೆ ಸಿಕ್ಕಿರುವ ಸಾರ್ವಜನಿಕ ಬೆಂಬಲವು ಭಾರತದ ಯುವಜನತೆಯ ‘ಯುವ ಸೋಚ್’ನ ದ್ಯೋತಕವಾಗಿದೆ.ಬಡವರು, ಶೋಷಿತರು, ವಂಚಿತರು, ಆದಿವಾಸಿಗಳ ಸಬಲೀಕರಣಕ್ಕೆ ದೊರೆತ ಬೆಂಬಲವೇ ಬಿಜೆಪಿಗೆ ದೊರೆತ ಸಾರ್ವಜನಿಕ ಬೆಂಬಲ” ಎಂದು ಹೇಳಿದ್ದಾರೆ.

”ಮೊದಲನೆಯದಾಗಿ ನಾನು ಜನತಾ ಜನಾರ್ದನನ ಮುಂದೆ ತಲೆಬಾಗುತ್ತೇನೆ. ಜನತಾ ಜನಾರ್ದನ್ ಅವರ ಆಶೀರ್ವಾದ ಅಪಾರ. ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮಾಡಿದ ಶ್ರಮದ ಸುಗಂಧವನ್ನು ಇಂದು ನಾವು ಎಲ್ಲೆಡೆ ಅನುಭವಿಸುತ್ತಿದ್ದೇವೆ” ಎಂದರು.

”ಬಿಜೆಪಿಯ ಮೇಲಿನ ಈ ಒಲವು ದೇಶದ ವಿವಿಧ ರಾಜ್ಯಗಳ ಉಪಚುನಾವಣೆಗಳಲ್ಲೂ ಗೋಚರಿಸುತ್ತಿದೆ. ಯುಪಿಯ ರಾಂಪುರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.ಬಿಹಾರ ಉಪಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಮುಂದಿನ ದಿನಗಳ ಸ್ಪಷ್ಟ ಸಂದೇಶ ನೀಡುತ್ತಿದೆ” ಎಂದರು.

”ಆದಷ್ಟು ಬೇಗ ಎಲ್ಲಾ ಸೌಲಭ್ಯಗಳು ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ತಲುಪಬೇಕು ಎಂಬ ಬಿಜೆಪಿಯ ಆಶಯದಿಂದ ಜನರು ಬಿಜೆಪಿಗೆ ಮತ ಹಾಕಿದ್ದಾರೆ. ದೇಶದ ಹಿತದೃಷ್ಟಿಯಿಂದ ಅತಿ ದೊಡ್ಡ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಬಿಜೆಪಿಗಿದೆ ಎಂಬ ಕಾರಣಕ್ಕೆ ಜನರು ಬಿಜೆಪಿಗೆ ಮತ ಹಾಕಿದ್ದಾರೆ” ಎಂದರು.

Advertisement

”ಯುವಕರು ನಂಬಿಕೆ ಇಟ್ಟು ಸರ್ಕಾರದ ಕೆಲಸ ಕಣ್ಣಿಗೆ ಕಂಡಾಗ ಮಾತ್ರ ಮತ ಹಾಕುತ್ತಾರೆ. ಇಂದು ಯುವಕರು ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದಾಗ, ಯುವಕರು ನಮ್ಮ ಕೆಲಸವನ್ನು ಪರೀಕ್ಷಿಸಿದ್ದಾರೆ ಮತ್ತು ನಂಬಿದ್ದಾರೆ ಎಂಬ ಸಂದೇಶವು ತುಂಬಾ ಸ್ಪಷ್ಟವಾಗಿದೆ” ಎಂದರು.

”ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಶ್ರೀಸಾಮಾನ್ಯನ ಬಯಕೆ ಎಷ್ಟು ಪ್ರಬಲವಾಗಿದೆ ಎಂಬುದನ್ನು ಗುಜರಾತ್ ಫಲಿತಾಂಶಗಳು ಸಾಬೀತುಪಡಿಸಿವೆ.ದೇಶದ ಮುಂದೆ ಸವಾಲು ಎದುರಾದಾಗ ದೇಶದ ಜನತೆ ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂಬ ಸಂದೇಶ ಸ್ಪಷ್ಟವಾಗಿದೆ”ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next