ಹೊಸದಿಲ್ಲಿ: “ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹಣದ ಆಮಿಷವೊಡ್ಡಿ ಹಿಂದೂ ಯುವತಿಯರನ್ನು ಇಸ್ಲಾಂಗೆ ಮತಾಂತರಿಸುತ್ತಿದೆ. ಮತಾಂತರಗೊಳ್ಳುವ ಬ್ರಾಹ್ಮಣ ಯುವತಿಯರಿಗೆ 5 ಲಕ್ಷ ರೂ. ಸಿಖ್ ಯುವತಿಯರಿಗೆ 7 ಲಕ್ಷ ರೂ. ಮತ್ತು ಕ್ಷತ್ರಿಯ ಯುವತಿಯರಿಗೆ 4.5 ಲಕ್ಷ ರೂ. ರೇಟ್ ಫಿಕ್ಸ್ ಆಗಿದೆ!’
ಇಂಥದೊಂದು ರೋಚಕ ಸುದ್ದಿಯನ್ನು ಆಂಗ್ಲ ಸುದ್ದಿವಾಹಿನಿಯೊಂದು ಕೆಲ ದಿನಗಳ ಹಿಂದೆ ಪ್ರಸಾರ ಮಾಡಿತ್ತು. ಇದನ್ನು ನೋಡಿದ ಜನ ಬೆಚ್ಚಿ ಬಿದ್ದರು. ಕೆಲವೆಡೆ ರೊಚ್ಚಿಗೆದ್ದರು. ಆದರೆ ಇದು ಸುದ್ದಿವಾಹಿನಿಯ ವರದಿಗಾರ ಸ್ಥಳಕ್ಕೆ ತೆರಳಿ ಮಾಡಿದ ತನಿಖಾ ವರದಿಯಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದ ಸುಳ್ಳು “ರೇಟ್ ಕಾರ್ಡ್’ ಸಂದೇಶವೊಂದನ್ನು ನಂಬಿ ಪ್ರಕಟಿಸಿದ ಸುಳ್ಳು ಸುದ್ದಿ!
ಜಾರ್ಖಂಡ್‌ನ ಗ್ರಾಮವೊಂದರ ಜನರಿಗೆ ಸತತ 2 ತಿಂಗಳ ಕಾಲ ಮಕ್ಕಳ ಅಪಹರಣಕಾರರಿಗೆ ಸಂಬಂಧಿಸಿದ ಚಿತ್ರವೊಂದು ವಾಟ್ಸ್‌ಆ್ಯಪ್ ಮೂಲಕ ರವಾನೆಯಾಗುತ್ತಿತ್ತು. ಆ ಚಿತ್ರದಲ್ಲಿ ಕಿಡ್ನಾಪರ್‌ಗಳ ಎಲ್ಲ ವಿವರಗಳಿದ್ದವು. ಪರಿ ಣಾಮ ಮೇ ತಿಂಗಳಲ್ಲಿ ಗ್ರಾಮಸ್ಥರು, ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಏಳು ಮಂದಿ ಅಮಾಯಕರನ್ನು ಕೊಂದೇ ಹಾಕಿದ್ದರು.
ಈಗ ಫೇಸ್‌ಬುಕ್, ವಾಟ್ಸ್‌ಆ್ಯಪ್ ಮೂಲಕ ಕ್ಷಣಾ ರ್ಧದಲ್ಲಿ ಸಾವಿರಾರು ಜನರನ್ನು ತಲುಪುವ ಇಂಥ “ಸುಳ್ಳು ಸುದ್ದಿ’ಗಳ ಬೆನ್ನುಹತ್ತಿ, ಅವುಗಳ ಮುಖವಾಡ ಕಳಚುವ ಕಾರ್ಯದಲ್ಲಿ ಆಲ್ಟ್ನ್ಯೂಸ್, ಬೂಮ್ ಲೈವ್ ಮತ್ತು ಎಸ್‌ಎಂ ಹೋಕ್ಸ್‌ಲಯರ್ ಎಂಬ ಸಂಸ್ಥೆಗಳು ಸದ್ದಿಲ್ಲದೆ ತೊಡಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಉದ್ರೇಕಕಾರಿ ಸುದ್ದಿಗಳನ್ನು ಹುಡುಕುವ ಈ ತಂಡಗಳು, ಅವುಗಳ ಮೂಲ ಹುಡುಕಿ ಅವುಗಳು ಅಪ್ಪಟ ಸುಳ್ಳು ಸುದ್ದಿಗಳು ಎಂಬುದನ್ನು ಜನರ ಮುಂದಿಡುತ್ತಿವೆ.
ಫೇಕ್ ಸುದ್ದಿ ಬಣ್ಣ ಬಯಲು: ಈಗ ಸುಳ್ಳು ಸುದ್ದಿಗಳ ಬಣ್ಣ ಬಯಲುಮಾಡುವಲ್ಲಿ ತೊಡಗಿರುವ ಆಲ್ಟ್ನ್ಯೂಸ್ ರೋಚಕ ಸುಳ್ಳು ಸುದ್ದಿಗಳ ನಿಜ ಬಣ್ಣವನ್ನು ಪ್ರಕಟಿಸುತ್ತಿ¤ದೆ. “ಭಾರತದಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಏನೇ ವೀಡಿಯೋ ಇದ್ದರೂ ಜನ ಮುಗಿಬೀಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಈ ಬಗ್ಗೆ ಸುಳ್ಳು ವೀಡಿಯೋಗಳನ್ನು ಹರಿಬಿಡುತ್ತಾರೆ. ಇದನ್ನು ಹೆಚ್ಚು ಜನ ನೋಡುವುದರಿಂದ ವಿಡಿಯೋ ಹಾಕಿದವರು ಜಾಹೀರಾತುಗಳ ಮೂಲಕ ಹೆಚ್ಚು ಹಣ ಸಂಪಾದಿಸುತ್ತಾರೆ. ಅವುಗಳನ್ನು ನೋಡಿ ಜನ ತಾಳ್ಮೆ ಕಳೆದುಕೊಳ್ಳುವ ಮೊದಲು ಅವುಗಳ ಸತ್ಯಾಸತ್ಯತೆ ಅರಿಯುವುದು ಒಳಿತು,’ ಎನ್ನುತ್ತಾರೆ ಆಲ್ಟ್ನ್ಯೂಸ್ ಸಂಸ್ಥಾಪಕ, ಅಹಮದಾಬಾದ್‌ನ ಟೆಕ್ಕಿ ಪ್ರತೀಕ್ ಸಿನ್ಹಾ.
ಹಸುವಿನ ರಕ್ತ ಕುಡಿದ ಬಾಲಕಿ!
ವ್ಯಕ್ತಿಯೊಬ್ಬ ತನ್ನ ಹಾಗೂ ಮಗಳ ಮುಖಕ್ಕೆ ಕೆಂಪು ಬಣ್ಣ ಹಚ್ಚಿಕೊಂಡು, “ಗೋಮಾತೆಯ ರಕ್ತ ಕುಡಿದ ಮಗಳು ಖುಷಿಯಾಗಿದ್ದಾಳೆ. ನಾವು ಹಸುವಿನ ರಕ್ತ ದಲ್ಲಿ ಹೋಳಿ ಆಡಿದ್ದೇವೆ,’ ಎಂದು ಕೆರಳಿಸುವಂತೆ ಬರೆ ದಿದ್ದ ಫೋಟೋ ಹರಿದಾಡಿತ್ತು. ಇದರ ಹಿಂದೆ ಬಿದ್ದ ಬೂಮ್‌ಲೈವ್‌ಗೆ ತಿಳಿದದ್ದು, ಅದು ಈಜಿಪ್ಟ್ ಉದ್ಯಮಿ ಮಗಳೊಂದಿಗೆ ತೆಗೆದುಕೊಂಡ ಮಾಮೂಲಿ ಸೆಲ್ಫಿ. ಕಿಡಿಗೇಡಿಗಳು ಫೋಟೋದಲ್ಲಿ ತಂದೆ ಮಗಳ ಮುಖಕ್ಕೆ ರಕ್ತ ಬಳಿದು ಫೇಸ್‌ಬುಕ್‌ಗೆ ಹಾಕಿದ್ದರು.
ವೈರಲ್ ಆದ ಸುಳ್ಳು ಸುದ್ದಿಗಳು
– ಕೇರಳದಲ್ಲಿ ಐಸಿಸ್ ಸಂಘಟನೆ ಹಿಂದೂ ಯುವತಿಯರನ್ನು ಮತಾಂತರಗೊಳಿಸುತ್ತಿದೆ
– ಮಾರುಕಟ್ಟೆಗೆ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ ಲಗ್ಗೆಯಿಟ್ಟಿವೆ
– ಗೋ ರಕ್ಷಕರ ವಿರುದ್ಧದ ಪ್ರತಿಭಟನೆಗೆ ಭಾರತೀಯ ಸಂಘಟಕರು ಪಾಕಿಸ್ಥಾನದವರನ್ನು ಸಂಪರ್ಕಿಸಿ ಅಲ್ಲಿ ಪ್ರತಿಭಟನೆ ಮಾಡಿಸಿದರು.
– ಪ್ರಧಾನಿ ಮೋದಿ ಅಮೆರಿಕಗೆ ಹೋದಾಗ ಅವರಿಗೆ “ಅಶ್ವದಳ ಗೌರವ’ ದೊರೆಯಿತು ಎಂಬ ವೀಡಿಯೊ (ಅದು ಒಬಾಮಾಗೆ ಅಶ್ವ ದಳ ಗೌರವ ಸಲ್ಲಿಸಿದ ವೀಡಿಯೋ)
– ಕೇರಳದಲ್ಲಿ ವ್ಯಕ್ತಿಯೊಬ್ಬ ಆರ್‌ಎಸ್‌ಎಸ್ ಕಾರ್ಯಕರ್ತನಿಗೆ ಚಾಕುವಿ ನಿಂದ ನೂರಾರು ಬಾರಿ ಇರಿದ ವೀಡಿಯೋ (ಅಸಲಿಗೆ ಅದು ಮೆಕ್ಸಿಕೋದ ವೀಡಿಯೋ)
– ಮುಸ್ಲಿಂ ಯುವಕನನ್ನು ವಿವಾಹವಾದ ಯುವತಿ ಬುರ್ಖಾ ಧರಿಸಲಿಲ್ಲವೆಂದು ಆಕೆಯನ್ನು ಸುಟ್ಟು ಕೊಂದ ವಿಡಿಯೋ (ದಕ್ಷಿಣ ಮೆಕ್ಸಿಕೋದ ಗ್ವಾಟೆಮಾಲಾ ದಲ್ಲಿ ನಡೆದ ಘಟನೆಯ ವೀಡಿಯೋ)