Advertisement

ಪಾಳು ಬಿದ್ದ ಜಾಗದಲ್ಲಿ ಸಂತೆಗೆ ಬ್ರೇಕ್‌

03:02 PM Jan 17, 2020 | Suhan S |

ಜಮಖಂಡಿ: ರೈತರು ಬೆಳೆದ ತರಕಾರಿ ಹಾಗೂ ಕಾಳುಕಡಿ ಮಾರಾಟ ಮಾಡಲು ತಾಲೂಕಿನ ಹುನ್ನೂರು ಗ್ರಾಮದಲ್ಲಿ 30 ವರ್ಷಗಳಿಂದ ಪಾಳುಬಿದ್ದ ಜಾಗದಲ್ಲಿ ಪ್ರತಿ ಶುಕ್ರವಾರ ನಡೆಸಲಾಗುತ್ತಿದ್ದ ಸಂತೆಗೆ ಕೃಷಿ ಡಿಪ್ಲೊಮಾ ಕಾಲೇಜಿನ ಪ್ರಾಂಶುಪಾಲರು ಏಕಾಏಕಿ ಕಡಿವಾಣ ಹಾಕಿದ್ದು, ಜಮಖಂಡಿ ಕುಡಚಿ ಹೆದ್ದಾರಿ ಅಕ್ಕಪಕ್ಕದಲ್ಲೇ ಸಂತೆ ನಡೆದಿದೆ.

Advertisement

ಅನ್ನದಾತರ ಹಿತ ಕಾಯಬೇಕಿದ್ದ ಕೃಷಿ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲರ ಕಾರ್ಯವೈಖರಿಗೆ ವ್ಯಾಪಾರಸ್ಥರು, ಗ್ರಾಹಕರು ಕೂಡ ಆಕ್ರೋಶ ವ್ಯಕ್ತಪಡಿಸಿದರು. ಈ ವಾರ ಸಂತೆ ಮುಖ್ಯ ರಸ್ತೆಗೆ ಬಂದಿದ್ದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಹುನ್ನೂರು ಗ್ರಾಮದ ಮುಖ್ಯರಸ್ತೆಯಲ್ಲಿ ನಡೆಯುತ್ತಿದ್ದ ಸಂತೆಯಿಂದಾಗಿ ಕೃಷಿಕರು, ವ್ಯಾಪಾರಸ್ಥರು ಹಾಗೂ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಮುಖ್ಯವಾಗಿ ಸಂಚಾರ ಸಮಸ್ಯೆ ತಲೆದೋರಿತ್ತು. ವಾಹನಗಳ ಸಂಚಾರದಿಂದ ಮೇಲೇಳುತ್ತಿದ್ದ ಧೂಳು ತರಕಾರಿ, ಕಾಯಪಲ್ಲೆ ಮೇಲೆ ಬಿದ್ದು ಜನರ ಆರೋಗ್ಯ ಮೇಲೂ ಪರಿಣಾಮ ಬೀರುತ್ತಿತ್ತು. ಹುನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಪಾಳುಬಿದ್ದು ನಿರುಪಯುಕ್ತವಾಗಿದ್ದ ಸರ್ಕಾರಿ ಜಾಗಕ್ಕೆ ಸಂತೆ ಸ್ಥಳಾಂತರಿಸಿ ಹಲವಾರು ವಾರಗಳಿಂದ ತರಕಾರಿ, ಕಾಯಿಪಲ್ಲೆ ಮಾರುಕಟ್ಟೆಗೆ ಅವಕಾಶ ನೀಡಲಾಗಿತ್ತು.

ಗ್ರಾಮದ ಹೃದಯ ಭಾಗದಲ್ಲಿರುವ ಈ ಜಾಗದಲ್ಲಿ ಸಂತೆ ನಡೆಯುವುದರಿಂದ ಹುನ್ನೂರು ಸೇರಿ ಸುತ್ತ ಮುತ್ತಲಿನ ಬಡಾವಣೆಗಳ ಜನರಿಗೆ ಅನುಕೂಲವಾಗಿತ್ತು. 30 ವರ್ಷಗಳಿಂದ ಪಾಳುಬಿದ್ದ ಜಾಗಕ್ಕೆ ಕಾಯಕಲ್ಪ ದೊರೆತಿತ್ತು ಎನ್ನುತ್ತಾರೆ ಗ್ರಾಮಸ್ಥರಾದ ಐ.ಎಸ್ .ಹನಗಂಡಿ, ಹನುಮಂತ ತುಳಸಿಗೇರಿ.

ಯಾವುದೇ ಕಾರಣ ನೀಡದೆ ಕೃಷಿ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲ ಡಾ| ಟಿ.ಎ.ಮಾಲಬಸರಿ ಪೊಲೀಸರನೆರವಿನೊಂದಿಗೆ ಗುರುವಾರ ರಾತ್ರಿ ಪಾಳು ಬಿದ್ದ ಜಾಗದ ಗೇಟ್‌ಗೆ ಬೀಗ ಜಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next