Advertisement

ಅಭಿವೃದ್ಧಿ  ಚಟುವಟಿಕೆಗಳಿಗೆ ಬ್ರೇಕ್‌!

10:03 AM Jun 04, 2018 | |

ಮಹಾನಗರ: ರಾಜ್ಯದಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್‌ ನೈಋತ್ಯ ಪದವೀಧರ/ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಾ. 27ರಿಂದ ಜಾರಿಯಾಗಿರುವ ನೀತಿ ಸಂಹಿತೆಯ ಎಫೆಕ್ಟ್ ಸ್ಥಳೀಯಾಡಳಿತ ಸಂಸ್ಥೆಗಳ ಅಭಿವೃದ್ಧಿ ಚಟುವಟಿಕೆಯ ಮೇಲೆ ಬಿದ್ದಿದೆ. ಹಾಗಾಗಿ ಮೂರು ತಿಂಗಳಿನಿಂದ ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ತಾಲೂಕು ಪಂಚಾಯತ್‌ ಸಾಮಾನ್ಯ ಸಭೆ ನಡೆಯಲೇ ಇಲ್ಲ!

Advertisement

ವಿಧಾನಸಭಾ ಚುನಾವಣೆಗೆ ಮಾ. 27ರಂದು ನೀತಿ ಸಂಹಿತೆ ಜಾರಿಯಾಗಿತ್ತು. ಈ ಚುನಾವಣೆ ಕಳೆದು ಫಲಿತಾಂಶ ಬರುವ ಸಮಯಕ್ಕೆ ವಿಧಾನ ಪರಿಷತ್‌ ಚುನಾವಣೆಯ ದಿನಾಂಕ ಪ್ರಕಟವಾಯಿತು. ಅಲ್ಲಿಂದಲೇ ಮತ್ತೆ ನೀತಿ ಸಂಹಿತೆ ಎದುರಾಗಿದ್ದು, ಜೂ. 8ಕ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ ಎಲ್ಲ ರೀತಿಯ ಅಭಿವೃದ್ಧಿ ಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿವೆ.
 
ಜಿ.ಪಂ.; ಸಾಮಾನ್ಯ ಸಭೆ ಅರ್ಧಕ್ಕೆ ಮೊಟಕಾಗಿತ್ತು!
ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆ ಮಾ. 27ರಂದು ಅರ್ಧಕ್ಕೆ ಮೊಟಕುಗೊಂಡಿತ್ತು. ಅಂದು ಬೆಳಗ್ಗೆ ಹೊಸದಿಲ್ಲಿಯಲ್ಲಿ ಚುನಾವಣೆಯ ದಿನಾಂಕ ಪ್ರಕಟಿಸಲಾಗಿತ್ತು. ಆದರೆ, ಅದಾಗಲೇ ಸ್ವಲ್ಪ ಹೊತ್ತು ನಡೆದ ಸಭೆಯಲ್ಲಿ ‘ನೀತಿ ಸಂಹಿತೆ ಪ್ರಕಟಗೊಂಡ ಕಾರಣದಿಂದ ಯಾವುದೇ ನಿರ್ಣಯ ಕೈಗೊಳ್ಳುವಂತಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ ಕಾರಣದಿಂದ ‘ಹಾಗಾದರೆ ಸಭೆ ನಡೆಸುವ ಅಗತ್ಯವೇ ಇಲ್ಲ’ ಎನ್ನುತ್ತ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸಭೆ ನಡೆದಿಲ್ಲ!

ಡೇಟ್‌ ಫಿಕ್ಸ್‌ ಆಗಿದ್ದ ಮನಪಾ ಸಭೆ ಕ್ಯಾನ್ಸಲ್‌!
ಮಹಾನಗರ ಪಾಲಿಕೆ ಸಾಮಾನ್ಯ ಸಭೆಯನ್ನು ಮಾ. 28ರಂದು ಅಪ ರಾಹ್ನ 3 ಗಂಟೆಗೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಈ ಸಭೆಯನ್ನು ಮುಂದೂಡಲಾಗಿತ್ತು. ಮೇಯರ್‌ ಆಗಿ ಭಾಸ್ಕರ್‌ ಅವರು ಅಧಿಕಾರ ಸ್ವೀಕರಿಸಿದ (ಮಾ. 8ರಂದು ಮೇಯರ್‌ ಚುನಾವಣೆ ನಡೆದಿತ್ತು) ಅನಂತರದ ಮೊದಲ ಸಭೆಯೇ ಈ ಮೂಲಕ ರದ್ದುಗೊಂಡಿತ್ತು. ನಾಲ್ಕು ಸ್ಥಾಯೀ ಸಮಿತಿ ಸಭೆಯೂ ಆಗಲಿಲ್ಲ. ಮುಂದಿನ ಸಾಮಾನ್ಯ ಸಭೆಯು ಚುನಾವಣೆ ನಡೆದ ಬಳಿಕ ಮೇ ಅಂತ್ಯಕ್ಕೆ ನಡೆಯಬಹುದೆಂಬ ನಿರೀಕ್ಷೆ ಇತ್ತು. ಆದರೆ, ವಿಧಾನಸಭಾ ಚುನಾವಣೆ ಮುಗಿದ ತತ್‌ಕ್ಷಣವೇ ವಿಧಾನಪರಿಷತ್‌ ಚುನಾವಣೆಗೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಮುಂದಿನ ಪಾಲಿಕೆ ಸಭೆಗೆ ಜೂನ್‌ ಅಂತ್ಯದವರೆಗೆ  ಕಾಯಲೇಬೇಕಾಗಿದೆ!

ತಾ.ಪಂ. ಸಭೆಯೂ ಬಾಕಿ!
ಜಿಲ್ಲೆಯ ಎಲ್ಲ ತಾ.ಪಂ. ನಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಫೆಬ್ರವರಿಯಲ್ಲಿ ನಡೆದಿದ್ದ ತಾ.ಪಂ. ಸಭೆ ಮಾರ್ಚ್‌ನಲ್ಲಿ ಕೆಲವು ಕಡೆ ಮಾತ್ರ ನಡೆದಿತ್ತು. ಮಂಗಳೂರು ತಾಲೂಕು ಸಹಿತ ಉಳಿದ ಕೆಲವು ತಾಲೂಕು ಪಂಚಾಯತ್‌ ನ ಸಾಮಾನ್ಯ ಸಭೆ ಮಾರ್ಚ್‌ನಿಂದ ನಡೆಯಲೇ ಇಲ್ಲ. ಇಲ್ಲೂ ಮೂರು ತಿಂಗಳಿನಿಂದ ಹೊಸ ಯೋಜನೆಗಳಿಗೆ ಅವಕಾಶ ದೊರೆಯಲಿಲ್ಲ. 

ಹೊಸ ಯೋಜನೆ ಇಲ್ಲ; ತುರ್ತು ಕಾಮಗಾರಿ ಮಾತ್ರ
ಸ್ಥಳೀಯಾಡಳಿತದ ಮಾಸಿಕ ಸಭೆಯ ಮೂಲಕ ಆಯಾ ತಿಂಗಳಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳುವ ಯೋಜನೆ-ಯೋಚನೆಗಳಿಗೆ ಸರ್ವ ಸದಸ್ಯರ ಒಪ್ಪಿಗೆ ಪಡೆದು ಮಂಜೂರಾತಿ ದೊರಕಿಸಲಾಗುತ್ತದೆ. ಈ ಮೂಲಕವೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಮಹತ್ವದ ನಿರ್ಣಯಗಳನ್ನು ಇದೇ ಸಭೆಯ ಮೂಲಕವೇ ಮಾಡಲಾಗುತ್ತದೆ. ಆದರೆ ಮೂರು ತಿಂಗಳಿಂದ ಸ್ಥಳೀಯಾಡಳಿತದ ಸಾಮಾನ್ಯ ಸಭೆ ನಡೆಯದೆ, ಇಂತಹ ಯಾವುದೇ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಆಗಿಲ್ಲ. ಜತೆಗೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತ್ತೈಮಾಸಿಕ ಕೆಡಿಪಿ ಸಭೆ ಕೂಡ ಸದ್ಯ ನಡೆಯಲಿಲ್ಲ. ಮಳೆಗಾಲ ಎದುರಾಗಿರುವ ಕಾರಣದಿಂದ ಈಗಾಗಲೇ ಸಭೆ ನಡೆಸಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಬೇಕಾಗಿತ್ತು. ಆದರೆ, ಮನಪಾ ಸಹಿತ ಎಲ್ಲ ಕಡೆಗಳಲ್ಲಿ ಫೆಬ್ರವರಿಯಿಂದ ಇದಕ್ಕೆ ಅವಕಾಶ ಸಿಗಲಿಲ್ಲ. ಸದ್ಯ ತುರ್ತು ಕಾಮಗಾರಿಗಳನ್ನು ಮಾತ್ರ ಮಾಡಲು ಅವಕಾಶವಿದೆ. ಜನಜೀವನಕ್ಕೆ ಬಹಳಷ್ಟು ಅಪಾಯ/ತೊಂದರೆ ನೀಡುವ ಸಂಗತಿ ಎಂಬುದನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ತುರ್ತು ಕೆಲಸವನ್ನಷ್ಟೇ ಈಗ ಮಾಡಲು ಅವಕಾಶವಿದೆ. ಈ ಮಧ್ಯೆ, ಮುಂದಿನ 2-3 ತಿಂಗಳು ಮಳೆಗಾಲವಿರುವ ಕಾರಣ ಹೊಸ ಯೋಜನೆ ಕೂಡ ಅನುಷ್ಠಾನವಾಗುವುದು ಅನುಮಾನ!

Advertisement

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next