Advertisement

ಕಂಪ್ಯೂಟರ್‌ ಶಿಕ್ಷಣ ಬ್ರೇಕ್‌!

04:01 PM Feb 27, 2018 | Team Udayavani |

ಹಟ್ಟಿ ಚಿನ್ನದ ಗಣಿ: ಜೆಸ್ಕಾಂನವರು ಗೌಡೂರು ವಲಯದ ಯಲಗಟ್ಟಾ ಸರ್ಕಾರಿ ಪ್ರೌಢಶಾಲೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಶಾಲೆ ಕಗ್ಗತ್ತಲಲ್ಲಿದ್ದು, ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣವೂ ದೊರೆಯದಂತಾಗಿದೆ.

Advertisement

2008-09ನೇ ಸಾಲಿನಲ್ಲಿ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯಿಂದ ಶಾಲೆಗೆ 15 ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ. ನಾಲ್ಕು ವರ್ಷ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ತರಬೇತಿ ನೀಡಲಾಗಿದೆ. ನಂತರ ನಿರ್ವಹಣೆ ಕೊರತೆಯಿಂದ ತರಬೇತಿ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ನಾಲ್ಕು ತಿಂಗಳ ಹಿಂದೆ ಶಾಲೆಯ ವಿದ್ಯುತ್‌ನೂ ಕಟ್‌ ಮಾಡಿದ್ದರಿಂದ ಕಂಪ್ಯೂಟರ್‌ ಹಾಗೂ ಯುಪಿಎಸ್‌ಗಳು ಧೂಳು ಹಿಡಿದಿದ್ದು, ಕೇಳುವವರೆ ಇಲ್ಲದಂತಾಗಿದೆ. ತರಬೇತಿ ನೀಡಲು ನಿಯುಕ್ತಿಗೊಳಿಸಿದ್ದ ಖಾಸಗಿ ಸಂಸ್ಥೆಯವರು 35,000 ವಿದ್ಯುತ್‌ ಬಿಲ್‌ ಪಾವತಿಸದ್ದರಿಂದ ಶಾಲೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ.

ಈ ಕುರಿತು ಶಾಲಾ ಸಿಬ್ಬಂದಿಗಳನ್ನು ವಿಚಾರಿಸಿದಾಗ ಕಂಪ್ಯೂಟರ್‌ ತರಬೇತಿ ಕೊಠಡಿ ಹಾಗೂ ಶಾಲೆಯ ವಿದ್ಯುತ್‌ ಮೀಟರ್‌ ಬೇರೆ ಇದೆ. ಕಂಪ್ಯೂಟರ್‌ ತರಬೇತಿ ಕೊಠಡಿ ನಿರ್ವಹಣೆ ಶಾಲೆಯ ವ್ಯಾಪ್ತಿಗೆ ಬರುವದಿಲ್ಲ. ಖಾಸಗಿ ಸಂಸ್ಥೆಯವರು ಬಿಲ್‌ ಪಾವತಿಸದಿದ್ದರೆ ಆ ಕೋಣೆಯ ವಿದ್ಯುತ್‌ ಸಂಪರ್ಕ ಮಾತ್ರ ಕಡಿತಗೊಳಿಸಬೇಕು ಮತ್ತು ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯವರು ತರಬೇತಿ ನೀಡುತ್ತಿರುವ ಸಂಸ್ಥೆ ವಿರುದ್ಧ ಕಾನೂನು ಕ್ರಮ ಜರುಗಿಸಿ ವಸೂಲಿ ಮಾಡುವುದನ್ನು ಬಿಟ್ಟು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವ ಹಾಗೆ ಶಾಲೆಯ ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸಿದ್ದಾರೆ ಎಂದು ದೂರಿದರು.

ಸಿಅರ್‌ಸಿ ಗುರನಗೌಡರನ್ನು ಸಂಪರ್ಕಿಸಿದರೆ ಮಕ್ಕಳ ಕಲಿಕೆ ದೃಷ್ಟಿಯಿಂದ ವಿದ್ಯುತ್‌ ಸಂಪರ್ಕ ನೀಡಬೇಕು. ವಿದ್ಯುತ್‌ ಕಡಿತದಿಂದ ಶಾಲೆಯಲ್ಲಿ ತೀವ್ರ ಸಮಸ್ಯೆಯುಂಟಾಗಿದೆ ಎಂದು ತಿಳಿಸಿದ್ದಾರೆ. ಶಾಲೆಯಲ್ಲಿ 242 ಮಕ್ಕಳು 10 ಜನ ಸಿಬ್ಬಂದಿ ಇದ್ದು,
ವಲಯದ ಮೂರು ಪ್ರೌಢಶಾಲೆಗಳ ಪೈಕಿ ಯಲಗಟ್ಟಾ ಶಾಲೆ ಶಿಕ್ಷಣ, ಕ್ರೀಡೆಯಲ್ಲಿ ಉತ್ತಮ ಹೆಸರು ಪಡೆದಿದೆ. ಆದರೆ ಶಿಕ್ಷಣ
ಇಲಾಖೆಯ ಬೇಜವಬ್ದಾರಿಯಿಂದ ಸರ್ಕಾರಿ ಶಾಲೆಯ ಕಲಿಕೆಗೆ ಹಿನ್ನಡೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ

ನಾವು ಹಲವು ಬಾರಿ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಗೆ ಪತ್ರ ಬರೆದಿದ್ದೇವೆ. ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಎಜ್ಯುಸ್ಯಾಟ್‌ ತರಗತಿಗಳಿಗೆ ತೊಂದರೆಯಾಗಿದೆ. 
 ಅಯ್ಯಪ್ಪ, ಮುಖ್ಯ ಶಿಕ್ಷಕ ಯಲಗಟ್ಟಾ ಪ್ರೌಢಶಾಲೆ

Advertisement

ಶಿಕ್ಷಣ ಇಲಾಖೆ ಬೇಜವಾಬ್ದಾರಿತನ ದಿಂದ ಮಕ್ಕಳು ಕಂಪ್ಯೂಟರ್‌ ತರಬೇತಿಯಿಂದ ವಂಚಿತರಾಗುತ್ತಿದ್ದಾರೆ. ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ 4 ತಿಂಗಳಾದರೂ ಸಹಿತ ಯಾವುದೆ ಕ್ರಮಕ್ಕೆ ಮುಂದಾಗಿಲ್ಲ. ಸಾ.ಶಿ. ಇಲಾಖೆ ಉಪನಿರ್ದೇಶಕರು ಕೂಡಲೇ ಸಮಸ್ಯೆ ಇತ್ಯರ್ಥಪಡಿಸಬೇಕು.
ಅಣ್ಣಾರಾಯ, ಪಾಲಕರು.

ಯಲಗಟ್ಟಾ ಶಾಲೆ ವಿದ್ಯುತ್‌ ಬಿಲ್‌ 35,000 ರೂ. ಆಗಿದೆ. ಕಳೆದ 8 ವರ್ಷದಿಂದ ಬಿಲ್‌ ಪಾವತಿಸಿಲ್ಲ, ಹಲವು ಬಾರಿ ಎಚ್ಚರಿಕೆ ನೀಡಿದರೂ ನಿಗಾ ವಹಿಸಿಲ್ಲ, ಸಂಪರ್ಕ ಕಡಿತಗೊಳಿಸಿ 4 ತಿಂಗಳಾದರೂ ಈ ಬಗ್ಗೆ ಬಂದು ವಿಚಾರಿಸಿಲ್ಲ. ಇದು ಶಿಕ್ಷಣ ಇಲಾಖೆಯ ಬೇಜವಾಬ್ದಾರಿ ತೋರಿಸುತ್ತದೆ.
 ದೇವರಾಜ, ಅಧಿಕಾರಿ ಜೆಸ್ಕಾಂ ಹಟ್ಟಿ ಚಿನ್ನದಗಣಿ.

ಶಾಲೆ ಮುಖ್ಯ ಶಿಕ್ಷಕರ ಜೊತೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು, ಬಿಲ್‌ ಪಾವತಿಸದಿದ್ದರೆ ಕಂಪ್ಯೂಟರ್‌ ತರಗತಿಯ ಕೊಠಡಿ ವಿದ್ಯುತ್‌ ಸಂಪರ್ಕ ಮಾತ್ರ ಕಡಿತಗೊಳಿಸಿ, ಶಾಲೆಗೆ ವಿದ್ಯುತ್‌ ಸಂಪರ್ಕ ಮುಂದುವರಿಸುವಂತೆ ಜೆಸ್ಕಾಂ ಇಲಾಖೆಗೆ ತಿಳಿಸಲಾಗುವುದು. 
 ನಂದನೂರು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು.

Advertisement

Udayavani is now on Telegram. Click here to join our channel and stay updated with the latest news.

Next