Advertisement

ಬಿಆರ್‌ಸಿ ಕಚೇರಿಗೆ ಬಂತು ಹೊಸಕಳೆ

02:07 PM Mar 28, 2019 | Team Udayavani |
ಹೊನ್ನಾಳಿ: ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಪಟ್ಟಣದ ಬಿಆರ್‌ಸಿ ಕಟ್ಟಡಕ್ಕೆ ಕಾಯಕಲ್ಪ ನೀಡಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಒಂದು ಬಾರಿ ಕಟ್ಟಡದ ಕಡೆಗೆ ಕಣ್‌ ಹಾಯಿಸುವಂತೆ ಮಾಡಿದ್ದಾರೆ ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಎಚ್‌.ಎಸ್‌. ಉಮಾಶಂಕರ್‌.
ಈ ಹಿಂದೆ ಬಿಆರ್‌ಸಿ ಕಟ್ಟಡ ಸುಣ್ಣ, ಬಣ್ಣ ಹಾಗೂ ಮೂಲ ಸೌಕರ್ಯವಿಲ್ಲದೆ ದುಸ್ಥಿತಿಯಲ್ಲಿತ್ತು. ಕತ್ತಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಚ್‌.ಎಸ್‌. ಉಮಾಶಂಕರ್‌ ಬಿಆರ್‌ಸಿಯಾಗಿ ಬಂದ ನಂತರ ಕಟ್ಟಡದ ಸೌಂದರ್ಯೀಕರಣಕ್ಕೆ ರೂಪರೇಷೆ ಹಾಕಿಕೊಂಡು ಕಾರ್ಯಪ್ರವೃತ್ತರಾದರು.
ಸರ್ಕಾರದಿಂದ ಅನುದಾನವಿಲ್ಲದೆ ಸುಣ್ಣ, ಬಣ್ಣ, ಗೋಡೆ ಬರಹ, ಫ್ಯಾನ್‌ಗಳು, ಟ್ಯೂಬ್‌ಲೈಟ್‌ಗಳು, ನೆಲಹಾಸು ಮೊದಲಾದವುಗಳನ್ನು ಹೊಂದಿಸುವುದು ಹೇಗೆ ಎಂದು ಚಿಂತಿಸಿ, ಸರ್ಕಾರಿ ಪ್ರಾಥಮಿಕ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ನೀಡಲು ವ್ಯಾಟ್ಸ್‌ ಆ್ಯಪ್‌ ಮೂಲಕ ಮನವಿ ಮಾಡಿದರು.
ಕೇಳುವ ಕೈ ಸ್ವತ್ಛವಾಗಿದ್ದರೆ ಕೊಡುಗೈ ದಾನಿಗಳಿಗೆ ಬರವಿಲ್ಲ ಎನ್ನುವಂತೆ ಶಿಕ್ಷಕರು ನಾ ಮುಂದು ತಾ ಮುಂದು ಎಂದು ರೂ.100ರಿಂದ ಹಿಡಿದು ಸಾವಿರದವರೆಗೂ ದೇಣಿಗೆ ನೀಡಿದರು. ಈ ಹಣದಿಂದ ಬಿಆರ್‌ಸಿ ಕಟ್ಟಡಕ್ಕೆ ಸುಣ್ಣ-ಬಣ್ಣ ಮಾಡಿಸಿ, ಶಿಕ್ಷಣಕ್ಕೆ ಪೂರಕವಾದ ಯುಕ್ತಿಗಳಾದ ಬಾಲ ಕಾರ್ಮಿಕ ಪದ್ಧತಿ ತೊಲಗಿಸಿ ಶಿಕ್ಷಣ ಆರಂಭಿಸಿ, ಶಿಕ್ಷಣವೇ ಶಕ್ತಿ ಸೇರಿದಂತೆ ಇತರೆ ಚಿತ್ರ, ಬರಹಗಳನ್ನು ಬರೆಸಲಾಯಿತು. ಕಟ್ಟಡ ಪ್ರವೇಶಿಸುತ್ತಿದ್ದಂತೆ ಬಲ ಭಾಗದಲ್ಲಿ ಶಿಕ್ಷಣ ಇಲಾಖೆ ವರ್ಗೀಕರಣದ ಮಾಹಿತಿ ಬರೆಸಲಾಗಿದೆ.
ಇದರಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮಂತ್ರಿಯಿಂದ ಪ್ರಾರಂಭವಾಗಿ ಕೊನೆ ಹಂತದ ಪ್ರಾಥಮಿಕ ಶಾಲಾ ಶಿಕ್ಷಕರವರೆಗೆ ಮಾಹಿತಿ ಇದೆ. ಈ ಬರವಣಿಗೆಗೆ ತಾಲೂಕಿನ ಚಿತ್ರಕಲಾ ಶಿಕ್ಷಕರನ್ನು ಬಿಡುವಿನ ವೇಳೆಯಲ್ಲಿ ಬಳಸಿಕೊಳ್ಳಲಾಗಿದೆ. ಅಲ್ಲದೇ ಕಚೇರಿಯಲ್ಲಿ ನೀರಿನ ವ್ಯವಸ್ಥೆ. ಫ್ಯಾನ್‌, ಟ್ಯೂಬ್‌ಲೈಟ್‌ಗಳ ವ್ಯವಸ್ಥೆ ಮಾಡಿ ಒಳಗೋಡೆಗಳ ಮೇಲೆ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿವರ ಹಾಗೂ ಮಕ್ಕಳ ಸಂಖ್ಯೆಯನ್ನು ಬರೆಯಿಸಿ ಸಮಗ್ರ ಚಿತ್ರಣ ದೊರೆಯುವಂತೆ ಮಾಡಲಾಗಿದೆ. ಮಹಾತ್ಮರ, ದಾರ್ಶನಿಕರ, ಶಿಕ್ಷಣ ತಜ್ಞರ ಫೋಟೊಗಳನ್ನು ಕಟ್ಟಡದಲ್ಲಿ ಹಚ್ಚಲಾಗಿದೆ.
ಈ ಎಲ್ಲ ಕೆಲಸ ಕಾರ್ಯಗಳಿಗೆ ತಗುಲಿದ ವೆಚ್ಚ ಬರೋಬ್ಬರಿ 1.70 ಲಕ್ಷ ರೂ.ಗಳು. ತಾಲೂಕಿನ ಶಿಕ್ಷಕರು, ಶಾಲೆಗಳು ಕೈ ಜೋಡಿಸಿದ್ದರಿಂದ ಬಿಆರ್‌ಸಿ ಕಚೇರಿ ಈಗ ಒಂದು ಸುಂದರ ಕಚೇರಿಯಾಗಿ ಮಾರ್ಪಟ್ಟಿದೆ.
ತಾಲೂಕಿನ ಎಲ್ಲಾ ಶಿಕ್ಷಕರು ಕೈಜೋಡಿಸಿದ ಪರಿಣಾಮ ತಾಲೂಕು ಕೇಂದ್ರದ ಬಿಆರ್‌ಸಿ ಕಟ್ಟಡಕ್ಕೆ ಕಾಯಕಲ್ಪ ನೀಡಲಾಯಿತು. ಡಯಟ್‌ ಪ್ರಾಂಶುಪಾಲ ಲಿಂಗರಾಜ್‌ ಇದಕ್ಕೆಲ್ಲ ಪ್ರೇರಕರು. ಶಿಕ್ಷಣದ ಅಗತ್ಯಗಳನ್ನು ಪೂರೈಸಲು ಸಹಕರಿಸಿದ ಎಲ್ಲಾ ಶಿಕ್ಷಕರಿಗೆ ಇಲಾಖೆ ಪರ ಧನ್ಯವಾದಗಳು.
 ಎಚ್‌.ಎಸ್‌. ಉಮಾಶಂಕರ್‌, ಬಿಆರ್‌ಸಿ, ಹೊನ್ನಾಳಿ.
ಶಿಕ್ಷಣದ ಮೂಲಭೂತ ಅವಶ್ಯಕತೆಗಳಿಗನುಗುಣವಾಗಿ ಬಿಆರ್‌ಸಿ ಕಚೇರಿ ಕಟ್ಟಡಕ್ಕೆ ಉತ್ತಮ ಸ್ಪರ್ಶ ಕೊಡಲಾಗಿದೆ. ಇದೊಂದು ಪ್ರಯೋಗಾಲಯ ಹಾಗೂ ಡಯಟ್‌ನ ಆಶಯಕ್ಕೆ ತಕ್ಕಂತೆ ನವೀಕರಣಗೊಳಿಸಲಾಗಿದೆ.
 ಜಿ.ಇ. ರಾಜೀವ್‌, ಬಿಇಒ, ಹೊನ್ನಾಳಿ
„ಎಂ.ಪಿ.ಎಂ. ವಿಜಯಾನಂದಸ್ವಾಮಿ.
Advertisement

Udayavani is now on Telegram. Click here to join our channel and stay updated with the latest news.

Next