ಲಂಡನ್: ಬ್ರೆಕ್ಸಿಟ್ ಬಳಿಕ ಇಳಿಮುಖದಲ್ಲಿ ಸಾಗಿರುವ ಇಂಗ್ಲೆಂಡ್‌ನ ಆರ್ಥಿಕತೆ, ಈಗ ದೊಡ್ಡ ಆಘಾತವನ್ನೇ ಅನುಭವಿಸಿದೆ.
ಇದುವರೆಗೆ ಜಗತ್ತಿನ ಟಾಪ್ 5 ಆರ್ಥಿಕತೆ ಹೊಂದಿದ ದೇಶಗಳು ಎಂಬ ಗರಿಮೆ ಹೊಂದಿದ್ದ ಇಂಗ್ಲೆಂಡ್ ಈಗ ಈ ಶ್ರೀಮಂತ ಗುಂಪಿನಿಂದ ಹೊರ ಬಿದ್ದಿದ್ದು, ಆರನೇ ಸ್ಥಾನಕ್ಕೋಗಿದೆ. ಇದುವರೆಗೆ ಆರರಲ್ಲಿ ಇದ್ದ ಫ್ರಾನ್ಸ್ ಒಂದು ಸ್ಥಾನಕ್ಕೆ ಮೇಲೆ ಹೋಗಿ ಟಾಪ್ 5ರೊಳಗೆ ಅಲಂಕರಿಸಿ ಕುಳಿತಿದೆ. ಆದರೆ ಭಾರತದ ಏರುಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯಿಂದಾಗಿ 2019 ವೇಳೆಗೆ ಫ್ರಾನ್ಸ್ ಮತ್ತು ಇಂಗ್ಲೆಂಡ್‌ಗಳನ್ನು ಹಿಂದಕ್ಕೆ ಹಾಕಿ ಭಾರತವೇ
ಐದನೇ ಸ್ಥಾನಕ್ಕೇರಲಿದೆ ಎಂದೂ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಬ್ರಿಟನ್ ಆರನೇ ಸ್ಥಾನಕ್ಕೆ ಇಳಿದಿರುವ ಬಗ್ಗೆ ಸ್ವತಃ ಅಲ್ಲಿನ ಖಜಾನೆ ಮುಖ್ಯಸ್ಥ ಫಿಲಿಪ್ ಹಮ್ಮಾಂಡ್ ಅವರೇ ಅಧಿಕೃತವಾಗಿ ಹೇಳಿದ್ದಾರೆ. ಮೊನ್ನೆಯಷ್ಟೇ ಬಜೆಟ್ ಮಂಡನೆ ಮಾಡಿದ ಫಿಲಿಪ್, ಬ್ರಿಟನ್ ಆರ್ಥಿಕತೆ ಇಳಿಮುಖವಾಗಿದ್ದು, ಈಗ ಜಗತ್ತಿನ ದೊಡ್ಡ ಆರ್ಥಿಕತೆ ಹೊಂದಿದ ಟಾಪ್ 5ದೇಶಗಳ ಪಟ್ಟಿಯಿಂದ ಆರಕ್ಕೆ ಕುಸಿದಿದೆ ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕೆ ಬ್ರೆಕ್ಸಿಟ್ ನಂತರದ ವಿದ್ಯಮಾನಗಳು ಕಾರಣ ಎಂದೂ ಅವರು ವಿಶ್ಲೇಷಿಸಿದ್ದಾರೆ.
2019ಕ್ಕೆ ಟಾಪ್ 5ಗೆ ಭಾರತ: ಸದ್ಯದ ಮಟ್ಟಿಗೆ ಹೇಳುವುದಾದರೆ ಭಾರತದ ಆರ್ಥಿಕ ಸ್ಥಿತಿ ಏರು ಗತಿಯಲ್ಲೇ ಇದೆ. ಇದೇ ಪರಿಸ್ಥಿತಿ ಹಾಗೆಯೇ ಮುಂದುವರಿದಲ್ಲಿ 2019ರ ವೇಳೆಗೆ ಭಾರತದ ಆರ್ಥಿಕತೆ ಇನ್ನಷ್ಟು ಪ್ರಗತಿ ಕಾಣಲಿದ್ದು ಟಾಪ್ 5 ದೇಶಗಳ ಸಾಲಿಗೆ ಸೇರಿಕೊಳ್ಳಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಹೀಗಾಗಿ ಪ್ರಾನ್ಸ್ ಮತ್ತು ಇಂಗ್ಲೆಂಡ್ ಟಾಪ್ 5 ದೇಶಗಳ ಪಟ್ಟಿಯಿಂದ ಹೊರಬೀಳಲಿವೆ.
2030ಕ್ಕೆ ಟಾಪ್ 3ಗೆ ಭಾರತ: ಇನ್ನು ಭಾರತದ ಬೆಳೆಯುತ್ತಿರುವ ಜಿಡಿಪಿ ಆಧಾರದ ಮೇಲೆ ಭಾರತ 2028ರ ಹೊತ್ತಿಗೇ ಟಾಪ್ 3ಗೆ ಏರಲಿದೆ ಎಂದು ಸ್ವತಃ ಅಂತಾರಾಷ್ಟ್ರೀಯ ಹಣಕಾಸು ನಿಧಿಯೇ ಭವಿಷ್ಯ ನುಡಿದಿದೆ. ಆಗ ಭಾರತದ ಒಟ್ಟಾರೆ ಆರ್ಥಿಕತೆಯ ಮೌಲ್ಯ 17 ಲಕ್ಷ ಕೋಟಿ ಡಾಲರ್ ಆಗಲಿದೆ. ಆದರೆ, ಆಗ ಭಾರತವನ್ನು ಬಿಟ್ಟರೆ ಟಾಪ್ 1ರ ಸ್ಥಾನದಲ್ಲಿ ಚೀನ (36 ಲಕ್ಷ ಕೋಟಿ ಡಾಲರ್) ಮತ್ತು ಅಮೆರಿಕ(25 ಲಕ್ಷ ಕೋಟಿ ಡಾಲರ್) ಇರಲಿದೆ. ಇದಾದ ನಂತರ 2050 ವೇಳೆಗೆ ಭಾರತ ಬೃಹತ್ ಆರ್ಥಿಕತೆಯಲ್ಲಿ ಎರಡನೇ ಸ್ಥಾನಕ್ಕೆ ಏರಲಿದ್ದರೆ, ಅಮೆರಿಕ ಮೂರನೇ ಸ್ಥಾನಕ್ಕೆ ಇಳಿಯಲಿದೆ. ಯಥಾ ಪ್ರಕಾರ ಚೀನ ಮೊದಲನೇ ಸ್ಥಾನ ಉಳಿಸಿಕೊಳ್ಳಲಿದೆ. ಆಗ ಚೀನ (61 ಲಕ್ಷ ಕೋಟಿ), ಭಾರತ (42 ಲಕ್ಷ ಕೋಟಿ) ಹಾಗೂ ಅಮೆರಿಕ (41 ಲಕ್ಷ ಕೋಟಿ ರೂ.) ಮೌಲ್ಯದ ಆರ್ಥಿಕತೆ ಹೊಂದಲಿವೆ.