Advertisement

ಬ್ರಾಂಡ್‌ ಗಣೇಶ್‌

06:41 PM Oct 10, 2017 | |

ಅಂತೂ ಅಧಿಕೃತವಾಗಿದೆ. ಮುವಾಯ್‌ ಥಾಯ್‌ನ ಭಾರತೀಯ ರಾಯಭಾರಿಯಾಗಿ ಗಣೇಶ್‌ ಹೆಸರು ಮಂಗಳವಾರ ಘೋಷಿಸಲಾಗುತ್ತದೆ ಎಂಬ ಸುದ್ದಿಯಿತ್ತು. ಅದರಂತೆ ಮಂಗಳವಾರ ಮಧ್ಯಾಹ್ನ ಗಣೇಶ್‌ ರಾಯಭಾರಿ ಎಂದು ಘೋಷಿಸಲಾಗಿದೆ. ಗಣೇಶ್‌ ರಾಯಭಾಗಿಯಾಗಿರುವುದಷ್ಟೇ ಅಲ್ಲ, ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಅವರು ಸಮರ ಕಲೆಯನ್ನು ಪ್ರದರ್ಶಿಸಲಿದ್ದಾರೆ.

Advertisement

ಈಗಾಗಲೇ ಹಲವು ಕಲಾವಿದರು, ಹಲವು ಕ್ರೀಡೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಆದರೆ, ಮುವಾಯ್‌ ಥಾಯ್‌ನಲ್ಲಿ ಗುರುತಿಸಿಕೊಳ್ಳುವುದಾಗಲೀ, ಆ ಸಮರ ಕಲೆಯ ರಾಯಭಾರಿಯಾದ ಉದಾಹರಣೆ ಸಿಗುವುದಿಲ್ಲ. ಗಣೇಶ್‌ಗೆ ಹೇಗೆ ಅಂಥದ್ದೊಂದು ಆಸಕ್ತಿ ಬೆಳೆಯಿತು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಗಣೇಶ್‌ ಹೇಳುವಂತೆ ಅವರಿಗೆ ಒಂದು ಸಮರ ಕಲೆ ಕಲೆಯುವ ಆಸಕ್ತಿ ಇತ್ತಂತೆ.

“ನನಗೆ ಮಾರ್ಷಲ್‌ ಆರ್ಟ್‌ ಕಲಿಯಬೇಕು ಎಂಬ ಆಸಕ್ತಿ ಇತ್ತು. ಒಮ್ಮೆ ಇಂಟರ್‌ನೆಟ್‌ ಸರ್ಫ್ ಮಾಡಿದಾಗ, ಮುವಾಯ್‌ ಥಾಯ್‌ ಬಗ್ಗೆ ಗೊತ್ತಾಯಿತು. ಅದು ಅತ್ಯಂತ ಕಷ್ಟವಷ್ಟೇ ಅಲ್ಲ, ಕಡಿಮೆ ಜನಪ್ರಿಯವಾದ ಕ್ರೀಡೆ. ಅದಲ್ಲದೆ ಆ ಕಲೆಗೂ, ಭಾರತಕ್ಕೂ ಸಂಬಣಧವಿದೆ. ರಾಮಾ, ಆಂಜನೇಯನ ಉಲ್ಲೇಖವಿದೆ. ಮುವಾಯ್‌ ಥಾಯ್‌ನಲ್ಲಿ ಗರುಡ, ಗಣಪತಿಗೆ ನಮಸ್ಕಾರ ಮಾಡುತ್ತಾರೆ. ಹಾಗಾಗಿ ಆಸಕ್ತಿ ಬೆಳೆಯಿತು. ಇದನ್ನು ಯಾರು ಹೇಳಿಕೊಡುತ್ತಾರೆ ಎಂದಾಗ ಹೇಮಂತ್‌ ಕುಮಾರ್‌ ಅವರ ಹೆಸರು ಗೊತ್ತಾಯಿತು.

ಅವರ ಹತ್ತಿರ ವಿಚಾರ ಮಾಡಿದಾಗ, ಮುವಾಯ್‌ ಥಾಯ್‌ ಕಲಿಯುವುದಕ್ಕೆ ಸಾಕಷ್ಟು ಸಂಯಮ ಬೇಕು. ಆರಂಭದಲ್ಲಿ ಬೋರ್‌ ಆಗುತ್ತದೆ ಎಂದು ಹೇಳಿದರು’ ಎನ್ನುತ್ತಾರೆ ಗಣೇಶ್‌. ಹೇಮಂತ್‌ ಹೇಳಿದಂತೆ, ಮುವಾಯ್‌ ಥಾಯ್‌ ಕಲಿಯುವಾಗ ಆರಂಭದಲ್ಲಿ ಸಾಕಷ್ಟು ಬೋರ್‌ ಆಯಿತಂತೆ. “ಮೊದಲ ಮೂರ್‍ನಾಲ್ಕು ತಿಂಗಳು ಹೆಚ್ಚೇನೂ ಆಗುವುದಿಲ್ಲ. ನಾವು ಮೊದಲೇ ಸಿನಿಮಾ ಮಂದಿ. ಸಿನಿಮಾ ಫೈಟಿಂಗ್‌ ಅಂದರೆ ತಕ್ಷಣ ಹೊಡೆಯೋದಿರುತ್ತೆ. ಆದರೆ, ಇಲ್ಲಿ ಹಾಗಲ್ಲ. ತುಂಬಾ ನಿಧಾನ. ಕ್ರಮೇಣ ಆಸಕ್ತಿ ಬೆಳೆಯುತ್ತಾ ಹೋಯಿತು. ಪ್ರತಿ ದಿನ ಬೆಳಿಗ್ಗೆ 4.30ಕ್ಕೆ ಎದ್ದು ಅಭ್ಯಾಸ ಮಾಡಿದೆ. ಸಾಕಷ್ಟು ಇಂಜ್ಯುರಿಗಳಾಯಿತು.

ಆದರೆ, ಇದರಿಂದ ನನಗೆ ಬಹಳ ಸಹಾಯವಾಯಿತು. ದಿನ ಅಭ್ಯಾಸ ಮಾಡಿ ಇನ್ನೂ ಶಿಸ್ತು ಹೆಚ್ಚಾಯಿತು. ಮೊದಲಿನಿಂದ ಒಂದು ಶಿಸ್ತು ರೂಢಿಸಿಕೊಂಡಿದ್ದೆ. ಇದರಿಂದ ಜಾಸ್ತಿ ಆಯ್ತು. ಮೂರು ತಿಂಗಳ ಹಿಂದೆಯೇ ಹೇಮಂತ್‌ ಬಂದು ಬ್ರಾಂಡ್‌ ಅಂಬಾಸಿಡರ್‌ ಆಗುವ ಕುರಿತು ಹೇಳಿದ್ದರು. ಆಗ ಒಪ್ಪಿರಲಿಲ್ಲ. ಏಕೆಂದರೆ, ಕಲೆ ಬಗ್ಗೆ ಗೊತ್ತಿರಬೇಕು, ಜ್ಞಾನ ಇರಬೇಕು. ಹಾಗಾಗಿ ಸತತ ಪ್ರಾಕ್ಟೀಸ್‌ ಮಾಡಿದೆ. ಕಳೆದ ಎರಡು ತಿಂಗಳಿನಿಂದ ಸ್ವೀಟ್‌ ತಿಂದಿಲ್ಲ.

Advertisement

ಮೂರು ತಿಂಗಳಿನಿಂದ ಪಾರ್ಟಿ ಮಾಡಿಲ್ಲ. ದಿನಕ್ಕೆ ನಾಲ್ಕು ಗಂಟೆ ತರಬೇತಿ ಪಡೆಯುತ್ತಿದ್ದೇನೆ. ವಿಶ್ವಾಸ ಬಂದ ನಂತರ ರಾಯಭಾರಿ ಆಗುವುದಕ್ಕೆ ಒಪ್ಪಿಕೊಂಡೆ’ ಎನ್ನುತ್ತಾರೆ ಗಣೇಶ್‌. ಈ ಕಲೆಗೆ ಎಷ್ಟು ಪ್ರೋತ್ಸಾಹ ಬೇಕೋ ಅಷ್ಟು ಕೊಡುತ್ತೀನಿ ಎನ್ನುವ ಗಣೇಶ್‌, “ಕಳೆದ 9 ತಿಂಗಳುಗಳಿಂದ ಕಲಿಯುತ್ತಿದ್ದೀನಿ. ಇನ್ನು ಮೂರು ತಿಂಗಳಲ್ಲಿ ಅಡ್ವಾನ್ಸ್‌ ಲೆವೆಲ್‌ಗೆ ಹೋಗುತ್ತೀನಿ. ಜನವರಿಯಲ್ಲಿ ನಡೆಯುವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ರಿಂಗ್‌ನಲ್ಲಿ ಮೂರು ನಿಮಿಷಗಳ ಕಾಲ ರಿಯಲ್‌ ಫೈಟ್‌ ಮಾಡುತ್ತೀನಿ.

ಇನ್ನು ನಾನು ಹೇಗೆ ಕಲಿತೆ, ಏನೆಲ್ಲಾ ಮಾಡಿದೆ ಅನ್ನೋದರ ವೀಡಿಯೋ ಮಾಡುತ್ತಿದ್ದೇನೆ. ಸುಮಾರು 12 ನಿಮಿಷಗಳ ವೀಡಿಯೋವನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುತ್ತೀನಿ. ಇದು ಯುವಕರಿಗೆ ಸ್ಫೂರ್ತಿಯಾಗಿ, ಮುವಾಯ್‌ ಥಾಯ್‌ ಇನ್ನಷ್ಟು ಜನಪ್ರಿಯವಾಗಲಿ ಎಂಬ ಕಾರಣಕ್ಕೆ ಮಾಡುತ್ತಿದ್ದೇನೆ’ ಎನ್ನುವ ಗಣೇಶ್‌, ಅವಕಾಶ ಸಿಕ್ಕರೆ ಸಿನಿಮಾದಲ್ಲೂ ಮುವಾಯ್‌ ಥಾಯ್‌ ಬಳಸಿಕೊಳ್ಳಬಹುದು ಎನ್ನುತ್ತಾರೆ. “ಸದ್ಯಕ್ಕೆ ಮುವಾಯ್‌ ಥಾಯ್‌ ಕುರಿತು ಚಿತ್ರ ಮಾಡುವ ಯೋಚನೆ ಇಲ್ಲ. ಆದರೆ, ಅವಕಾಶ ಬಂದರೆ ಖಂಡಿತಾ ಚಿತ್ರದಲ್ಲಿ ಅಳವಡಿಸಿಕೊಳ್ಳಬಗಹುದು.

ಅಭ್ಯಾಸವಂತೂ ನಿಲ್ಲುವುದಿಲ್ಲ. ಅದನ್ನು ಇನ್ನೂ ಮುಂದುವರೆಸುತ್ತೇನೆ. ಮುಂದೆ ಸಿನಿಮಾದಲ್ಲಿ ಮುವಾಯ್‌ ಥಾಯ್‌ ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಖುಷಿಯ ವಿಷಯ. ಇನ್ನು ಭಾರತದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಸಮರಕಲೆಯನ್ನು ಪ್ರಮೋಟ್‌ ಮಾಡುತ್ತಿದ್ದೇನೆ. ನವೆಂಬರ್‌ನಲ್ಲಿ ಯೂರೋಪ್‌ಗೆ ಹೋಗಲಿದ್ದೇನೆ. ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತೇನೆ. ಮಾರ್ಚ್‌ನಲ್ಲಿ ಥಾಯ್ಲೆಂಡ್‌ನ‌ಲ್ಲಿ ವಿಶ್ವ ಚ್ಯಾಂಪಿಯನ್‌ಶಿಪ್‌ ನಡೆಯಲಿದೆ. ಅಲ್ಲಿ ಡಿಗ್ನಿಟರಿಯಾಗಿ ಭಾಗವಹಿಸುತ್ತೇನೆ’ ಎನ್ನುತ್ತಾರೆ ಗಣೇಶ್‌.

Advertisement

Udayavani is now on Telegram. Click here to join our channel and stay updated with the latest news.

Next