ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು, ಇದು ದೇಶದ ರಕ್ಷಣ ಕ್ಷೇತ್ರದಲ್ಲಿ ಮಹತ್ತರ ಮೈಲುಗಲ್ಲಾಗಿದೆ.
ಭಾರತೀಯ ನೌಕಾಪಡೆಯು ರವಿವಾರದಂದು ಈ ಕ್ಷಿಪಣಿಯನ್ನು ಇತ್ತೀಚೆಗಷ್ಟೇ ಹೊಸದಾಗಿ ಸೇರ್ಪಡೆಯಾದ ಸ್ವದೇಶಿ ನಿರ್ಮಿತ ಯುದ್ಧನೌಕೆ ಐಎನ್‌ಎಸ್ ಮೊರ್ಮುಗಾವೊ ಮೂಲಕ ಪ್ರಯೋಗಾರ್ಥ ವಾಗಿ ಉಡಾಯಿಸಿತು. ಈ ಪರೀಕ್ಷೆಯಲ್ಲಿ ಕ್ಷಿಪಣಿಯು ನಿಗದಿತ ಸಮಯದಲ್ಲಿ ನಿಖರ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಗಳು ಶಬ್ದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಈ ಕ್ಷಿಪಣಿಗಳನ್ನು ಸಬ್‌ಮರಿನ್, ಹಡಗುಗಳು, ವಿಮಾನಗಳ ಮೂಲಕ ಉಡಾಯಿಸಬಹುದಾಗಿದೆ. ಕ್ಷಿಪ ಣಿಯ ಈ ಯಶಸ್ವೀ ಪರೀಕ್ಷೆ ರಕ್ಷಣ ಕ್ಷೇತ್ರದಲ್ಲಿ ದೇಶವನ್ನು ಆತ್ಮನಿರ್ಭರ ವನ್ನಾ ಗಿ ಸುವ ದಿಸೆಯಲ್ಲಿ ಮತ್ತೂಂದು ಮಹತ್ತರ ಹೆಜ್ಜೆ ಎಂದೇ ಪರಿಗಣಿಸಲಾಗಿದೆ.
ಏತನ್ಮಧ್ಯೆ ಕೇಂದ್ರ ಸರಕಾರ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳಲ್ಲಿ ಬಳಸಲಾಗುವ ಡಿಜಿಟಲ್ ಮ್ಯಾಪ್ ಜನರೇಟರ್, ನೌಕಾ ಹಡಗುಗಳಲ್ಲಿ ಬಳಕೆ ಮಾಡುವ ಡಾಟಾ ರೆಕಾರ್ಡರ್ ಸಹಿತ ಕೆಲವೊಂದು ರಕ್ಷಣ ಘಟಕಗಳು, ಉಪ ವ್ಯವಸ್ಥೆಗಳು, ರಕ್ಷಣ ಸಾಮಗ್ರಿಗಳು ಮತ್ತು ಬಿಡಿಭಾಗಗಳಾದಿಯಾಗಿ 928 ರಕ್ಷಣ ವಸ್ತುಗಳ ಆಮದಿನ ಮೇಲೆ ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ನಿರ್ಬಂಧ ಹೇರಲು ನಿರ್ಧರಿಸಿದೆ. ಕಳೆದೆರಡು ವರ್ಷಗಳ ಅವಧಿಯಲ್ಲಿ ರಕ್ಷಣ ಸಚಿವಾಲಯವು ಇಂತಹ ಮೂರು ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಕ್ರಮವಾಗಿ 351, 107 ಮತ್ತು 780 ರಕ್ಷಣ ವ್ಯವಸ್ಥೆ ಮತ್ತು ಸಾಮಗ್ರಿಗಳು ಸೇರಿದ್ದವು. ಈ ಸಾಲಿನಲ್ಲಿ ಈಗ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಇದು ಅತ್ಯಂತ ಹೆಚ್ಚಿನ ಸಂಖ್ಯೆಯ ರಕ್ಷಣ ಸಲಕರಣೆಗಳು ಮತ್ತು ಸಾಮಗ್ರಿಗಳನ್ನು ಒಳಗೊಂಡಿದೆ.
ಕೇಂದ್ರ ಸರಕಾರದ ಈ ದಿಟ್ಟ ನಿರ್ಧಾರದಿಂದಾಗಿ ಈಗಾಗಲೇ ಗಣನೀಯ ಸಂಖ್ಯೆಯಲ್ಲಿ ದೇಶೀಯವಾಗಿ ರಕ್ಷಣ ಸಾಮಗ್ರಿ, ಆಧುನಿಕ ಶಸ್ತ್ರಾಸ್ತ್ರ, ಸಲಕರಣೆಗಳನ್ನು ಉತ್ಪಾದಿಸಲಾಗುತ್ತಿದೆ. ಈಗಾಗಲೇ ಆಮದಿಗೆ ನಿರ್ಬಂಧ ಹೇರಲಾಗಿರುವ ನೂರಾರು ವ್ಯವಸ್ಥೆ, ಸಲಕರಣೆಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಆಮದಿಗೆ ನಿರ್ಬಂಧ ಹೇರಲಾಗಿರುವ ಎಲ್ಲ ವಸ್ತುಗಳನ್ನು ದೇಶದಲ್ಲಿಯೇ ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ರಕ್ಷಣ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು ಕೂಡ ಸರಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕೈಜೋಡಿಸಿದ್ದು ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ತತ್ಪರಿಣಾಮವಾಗಿ ಭಾರತ ಈಗ ರಕ್ಷಣ ವಲಯದಲ್ಲಿ ಸ್ವಾವಲಂಬನೆಯ ದಿಸೆಯಲ್ಲಿ ದಾಪುಗಾಲಿಡುತ್ತಿದ್ದು ಮುಂದಿನ ಕೆಲವೇ ದಶಕಗಳಲ್ಲಿ ದೇಶದ ಈ ಮಹತ್ವಾಕಾಂಕ್ಷೆ ಈಡೇರುವ ನಿರೀಕ್ಷೆ ಮೂಡಿದೆ.
Related Articles
ಜಾಗತಿಕವಾಗಿ ಬಲಾಡ್ಯವಾಗಿರುವ ರಾಷ್ಟ್ರಗಳು ರಕ್ಷಣ ಕ್ಷೇತ್ರದಲ್ಲಿ ಆಧುನಿಕತೆಗೆ ತೆರೆದುಕೊಂಡು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳುವ ಮೂಲಕ ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಮತ್ತು ನೆರೆ ರಾಷ್ಟ್ರಗಳಾದ ಚೀನ ಮತ್ತು ಪಾಕಿಸ್ಥಾನ ಗಡಿಯಲ್ಲಿ ಪದೇಪದೆ ತಕರಾರು ತೆಗೆದು ಸಂಘರ್ಷಕ್ಕೆ ಮುಂದಾಗುತ್ತಿರುವುದರಿಂದ ಭಾರತ ಕೂಡ ರಕ್ಷಣೆಯತ್ತ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಜನಾಬದ್ಧವಾಗಿ ದೂರ ದೃಷ್ಟಿಯೊಂದಿಗೆ ಹೆಜ್ಜೆಗಳನ್ನಿರಿಸಿರುವುದು ಶ್ಲಾಘನೀಯ.