Advertisement

ಸುಧಾರಿತ ರೂಪದಲ್ಲಿ ಭಾರತೀಯ ಸೇನೆಗೆ ಸೇರಲಿದೆ ಬ್ರಹ್ಮೋಸ್‌ ಕ್ಷಿಪಣಿ

09:05 AM Apr 10, 2019 | Team Udayavani |

ನವದೆಹಲಿ: ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸುತ್ತಿರುವ ಸೂಪರ್‌ ಸಾನಿಕ್‌ ಕ್ರೂಸ್‌ ಮಿಸೈಲ್‌ ಬ್ರಹ್ಮೋಸ್‌ ನ ಗುರಿ ಬೇಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ಷಿಪಣಿ ತಯಾರಿಕಾ ಕಂಪೆನಿ ಬ್ರಹ್ಮೋಸ್‌ ಏರೋಸ್ಪೇಸ್‌ ಕಂಪೆನಿ ನಿರ್ಧರಿಸಿದೆ. ಬ್ರಹ್ಮೋಸ್‌ ನ ಪ್ರಸ್ತುತ ಗುರಿ ಸಾಮರ್ಥ್ಯ 400 ಕಿಲೋಮೀಟರ್‌ ಗಳಾಗಿದ್ದು, ಇದನ್ನು 500 ಕಿಲೋಮೀಟರ್‌ ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರ ಗುರಿ ಬೇಧನಾ ಸಾಮರ್ಥ್ಯದ ಜೊತೆಜೊತೆಗೆ ಹೈಪರ್‌ಸೌಂಡ್‌ ವಿಧಾನದ ಮೂಲಕ ಈ ಕ್ಷಿಪಣಿಯ ವೇಗವರ್ಧನೆಗೂ ನಿರ್ಧರಿಸಲಾಗಿದೆ.

ಪ್ರಸ್ತುತ ಬ್ರಹ್ಮೋಸ್‌ ನ ಗರಿಷ್ಠ ವೇಗ 2.8 ಮ್ಯಾಕ್‌ ಗಳಷ್ಟಾಗಿದ್ದರೆ ಭವಿಷ್ಯದಲ್ಲಿ ಈ ವೇಗವನ್ನು 4.5 ಮ್ಯಾಕ್‌ ಗೆ ಹೆಚ್ಚಿಸಲಾಗುವುದು ಎಂದು ಕಂಪೆನಿಯ ಆಡಳಿತ ಸಹ ನಿರ್ದೆಶಕ ಅಲೆಕ್ಸಾಂಡರ್‌ ಮಾಸ್ಕಿವ್‌ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Advertisement

ಭಾರತೀಯ ಮೂರೂ ಸಶಸ್ತ್ರ ಪಡೆಗಳಲ್ಲೂ ಬ್ರಹ್ಮೋಸ್‌ ಕ್ಷಿಪಣಿ ಸಂಗ್ರಹವಿದೆ. ಸದ್ಯ ಶತ್ರುಗಳ ದೂರದ ಗುರಿಯನ್ನು ಬೇಧಿಸುವಲ್ಲಿ ಆಧುನಿಕ ಯುದ್ಧ ತಂತ್ರಜ್ಞಾನಕ್ಕೆ ಹೋಲಿಸಿದಲ್ಲಿ ಬ್ರಹ್ಮೋಸ್‌ ನ ಗುರಿ ಬೇಧನಾ ಸಾಮರ್ಥ್ಯ ಕಡಿಮೆಯಿದ್ದು ಇದನ್ನು ಹೆಚ್ಚಿಸುವ ಅನಿವಾರ್ಯತೆ ಇದೆ. ಮುಂದಿನ ತಲೆಮಾರಿನ ಯುದ್ಧತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಬ್ರಹ್ಮೋಸ್‌ ಎನ್‌.ಜಿ. (ನೆಕ್ಸ್ಟ್ ಜನರೇಷನ್‌) ಎಂಬ ಹೊಸ ಮಾದರಿಯ ಕ್ಷಿಪಣಿ ತಯಾರಿ ಯೋಜನೆ ಕಾರ್ಯಗತಗೊಳ್ಳುವ ಹಂತದಲ್ಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಕೆಲವೇ ವರ್ಷಗಳ ಒಳಗಾಗಿ ಮುಂದಿನ ತಲೆಮಾರಿನ ಈ ಬ್ರಹ್ಮೋಸ್‌ ಎನ್‌.ಜಿ. ಭಾರತೀಯ ಸೇನಾಪಡೆಗಳಿಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.

ಈ ನೂತನ ಕ್ಷಿಪಣಿಯನ್ನು ಪ್ರಮುಖವಾಗಿ ಭಾರತೀಯ ವಾಯುಪಡೆಗೆಂದೇ ತಯಾರಿಸಲಾಗುತ್ತಿರುವುದು ವಿಶೇಷವಾಗಿದೆ. ಭಾರತೀಯ ವಾಯುಪಡೆಯ ಸುಖೋಯ್‌ 30 ಎಂ.ಕೆ.ಐ. ಹಾಗೂ ತೇಜಸ್‌ ಲಘು ಯುದ್ಧ ವಿಮಾನಗಳಿಗೆ ಹೊಂದಿಕೊಳ್ಳುವ ಮಾದರಿಯಲ್ಲಿ ಈ ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ. ಇದೀಗ ವಾಯುಪಡೆಯ ಬಳಿಯಲ್ಲಿರುವ ಬ್ರಹ್ಮೋಸ್‌ ಕ್ಷಿಪಣಿಯ ತೂಕ 2.5 ಟನ್‌ ಗಳಾಗಿದ್ದರೆ ಈ ಹೊಸ ತಲೆಮಾರಿನ ಕ್ಷಿಪಣಿ 1.5 ಟನ್‌ ಗಳಷ್ಟು ತೂಕವನ್ನು ಹೊಂದಿರಲಿದೆ. ಮಾತ್ರವಲ್ಲದೆ ಈ ಕ್ಷಿಪಣಿ ತಯಾರುಗೊಂಡ ಬಳಿಕ ಸುಖೋಯ್‌ ಯುದ್ಧ ವಿಮಾನವೊಂದು ಏಕಕಾಲಕ್ಕೆ ಐದು ಕ್ಷಿಪಣಿಗಳನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯವನ್ನು ಪಡೆಯಲಿದೆ. ಮತ್ತು ಇದಕ್ಕಾಗಿ ಸುಖೋಯ್‌ ರಚನೆಯಲ್ಲಿ ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ. ಪ್ರಸ್ತುತ ಸುಖೋಯ್‌ ಯುದ್ಧ ವಿಮಾನವು ಏಕಕಾಲಕ್ಕೆ ಒಂದು ಕ್ಷಿಪಣಿಯನ್ನು ಮಾತ್ರವೇ ಹೊತ್ತೂಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next