Advertisement

ಬ್ರಾಹ್ಮಣ ಸಿಎಂ ಆಗಲಿ, ನನ್ನ ಬೆಂಬಲವಿದೆ: ಎಚ್‌ಡಿಕೆ

09:48 PM Feb 06, 2023 | Team Udayavani |

ಬೆಂಗಳೂರು: ಬ್ರಾಹ್ಮಣರ ಕುರಿತ ತಮ್ಮ ಹೇಳಿಕೆಗೆ ಮತ್ತೊಮ್ಮೆ ಸ್ಪಷ್ಟೀಕರಣ ನೀಡಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಮರಾಠಿ ಪೇಶ್ವೆಗಳ ಡಿಎನ್‌ಎ ಇರುವ ವ್ಯಕ್ತಿಯನ್ನು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು ಬಿಜೆಪಿ ಮತ್ತು ಆರೆಸ್ಸೆಸ್‌ ಹೊರಟಿವೆ ಎಂದು ಹೇಳಿದ್ದೇನೆಯೇ ಹೊರತು, ರಾಜ್ಯದ ಬ್ರಾಹ್ಮಣ ಸಮುದಾಯವನ್ನು ನಾನೆಲ್ಲೂ ನಿಂದಿಸಿಲ್ಲ ಎಂದು ಪುನರುಚ್ಚರಿಸಿದ್ದಾರೆ.

Advertisement

ಬ್ರಾಹ್ಮಣ ಸಮುದಾಯವನ್ನು ನಾನೆಲ್ಲೂ ನಿಂದಿಸಿಲ್ಲ ಎಂದು ಹೇಳುತ್ತಲೇ ಪ್ರಹ್ಲಾದ ಜೋಷಿಯವರು “ಒಳ್ಳೆಯ ಬೆಳೆಯಲ್ಲಿ ಪಾರ್ಥೇನಿಯಂ ಇದ್ದಂತೆ’ ಅಂತಲೂ ಕುಟುಕಿದ್ದಾರೆ. ಜತೆಗೆ, ಈ ರಾಜ್ಯದಲ್ಲಿ ಬ್ರಾಹ್ಮಣ ಸಿಎಂ ಆಗಲಿ. ಬೇಡ ಎಂದವರು ಯಾರು? ನನ್ನ ಸಹಮತವೂ ಇದೆ. ನಾನೂ ಬೆಂಬಲ ಕೊಡುವೆ. ಆದರೆ ಕನ್ನಡ ಪರಂಪರೆ, ಸಂಸ್ಕೃತಿಯ ಮೇಲೆ ದಾಳಿ ನಡೆಸಿದ ಪೇಶ್ವೆಗಳ ಡಿಎನ್‌ಎ ಹೊಂದಿರುವ ವ್ಯಕ್ತಿ ಸಿಎಂ ಆಗಬೇಕಾ ಎನ್ನುವ ಪ್ರಶ್ನೆ ನನ್ನದು ಎಂದು ಅವರು ಹೇಳಿದರು.

ಯಶವಂತಪುರ ವಿಧಾನಸಭೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆಯೇ ಹೊರತು ನಾನು ಎತ್ತಿದ ವಿಷಯದ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದರು.

ಪ್ರಹ್ಲಾದ ಜೋಷಿ ಪಾರ್ಥೇನಿಯಂ ಒಳ್ಳೆಯ ಬೆಳೆಯಲ್ಲಿ ಪಾರ್ಥೇನಿಯಂ ಬೆಳೆದಂತೆ ಆಗಿದೆ ಬಿಜೆಪಿ ಪರಿಸ್ಥಿತಿ. ಪ್ರಹ್ಲಾದ್‌ ಜೋಷಿ ಅಂತಹ ಪಾರ್ಥೇನಿಯಂ. ಹಿಂದೆ ನಿತೀಶ್‌ ಕುಮಾರ್‌ ಅವರ ಡಿಎನ್‌ಎ ಬಗ್ಗೆ ಪ್ರಧಾನಿ ಮೋದಿ ಸಹಿತ ಪ್ರಮುಖ ಬಿಜೆಪಿ ನಾಯಕವರು ಟೀಕೆ ಮಾಡಿಲ್ಲವೇ? ನಾನು ಮಾತನಾಡಿದರೆ ಮಾತ್ರ ಇವರು ಅದಕ್ಕೆ ವಿವಾದದ ಸ್ವರೂಪ ಕೊಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ನಾನು ಸಿಎಂ ಆಗಿದ್ದಾಗಲೇ ಬ್ರಾಹ್ಮಣ ಮಹಾಸಭಾಗೆ ಬನಶಂಕರಿ ಬಳಿ ಜಾಗ ಕೊಟ್ಟಿರುವುದು. ಎರಡನೇ ಬಾರಿ ಸಿಎಂ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು. ಹೀಗಿರುವಾಗ ಕೆಲವರು ನನ್ನ ಹೇಳಿಕೆ ತಿರುಚುತ್ತಿದ್ದಾರೆ. ಸರ್ವೇ ಜನಃ ಸುಖೀನೋ ಭವಂತು ಎಂದು ನಮ್ಮ ಬ್ರಾಹ್ಮಣರು ಹರಸುತ್ತಾರೆ. ಆದರೆ ಪೇಶ್ವೆ ಬ್ರಾಹ್ಮಣರು ಸರ್ವನಾಶೋ ಭವಂತು ಎಂದು ಶಪಿಸುತ್ತಾರೆ. ನಮ್ಮದು ಕುವೆಂಪು ಹೇಳಿದಂತಹ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದರು.

Advertisement

ಎಚ್‌ಡಿಕೆ ಹೇಳಿಕೆ ಕ್ಷುಲ್ಲಕ ರಾಜಕಾರಣದ ಪರಮಾವಧಿ
ಬೆಂಗಳೂರು: ಎಚ್‌.ಡಿ.ಕುಮಾರಸ್ವಾಮಿ ಅವರು ಜಾತ್ಯತೀತ ಜನತಾದಳ ಎಂದು ಹೆಸರಿಟ್ಟುಕೊಂಡು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಬ್ರಾಹ್ಮಣ ಸಮುದಾಯದ ಒಳಪಂಗಡಗಳ ನಡುವೆಯೇ ಮನಸ್ತಾಪ ಸೃಷ್ಟಿಸುವ ಅವರ ಉದ್ದೇಶ ಈಡೇರುವುದಿಲ್ಲ. ಬ್ರಾಹ್ಮಣರು ಪ್ರಜ್ಞಾವಂತರು, ಸೂಕ್ಷ್ಮ ಸಂವೇದನೆ ಉಳ್ಳ ವಿಚಾರವಂತರು. ಅವರ ಸಮಸ್ಯೆಗಳೇನಿದ್ದರೂ ಅವರೇ ಬಗೆಹರಿಸಿಕೊಳ್ಳುತ್ತಾರೆ. ಈ ಬಗ್ಗೆ ಕುಮಾರಸ್ವಾಮಿ ವಕಾಲತ್ತು ವಹಿಸುವುದಾಗಲಿ, ಲಘುವಾಗಿ ಮಾತನಾಡುವ ಅಗತ್ಯವಾಗಲಿ ಇಲ್ಲ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದ ಮೂರ್ತಿ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರು ಕೂಡಲೇ ಬ್ರಾಹ್ಮಣ ಸಮುದಾಯದ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರಹ್ಲಾದ ಜೋಷಿ ಅವರನ್ನು ಮಹಾರಾಷ್ಟ್ರ ಮೂಲದ ಪೇಶ್ವೆಗಳು ಅಥವಾ ದೇಶಸ್ಥ ಬ್ರಾಹ್ಮಣರು ಎಂದು ಮಾಹಿತಿ ಇಲ್ಲದೆ ನಾಲಿಗೆ ಹರಿಬಿಟ್ಟಿರುವುದು ಕ್ಷುಲ್ಲಕ ರಾಜಕಾರಣದ ಪರಮಾವಧಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next