Advertisement
ಕಬ್ಬು ಕಟಾವಿಗೆ ಬಂತು…2018ರ ಸೆಪ್ಟಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಉಡುಪಿಗೆ ಬಂದಿದ್ದಾಗ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಉಳಿವಿಗೆ ರೈತರು ಕಬ್ಬು ಬೆಳೆಯಲು ಆರಂಭಿಸ ಬೇಕು. ಕಬ್ಬು ಬೆಳೆದಲ್ಲಿ ಮಾತ್ರ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂಬ ಭರವಸೆ ನೀಡಿದ್ದರು. ಈ ಹಿನ್ನೆಲೆ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಮಂಡ್ಯದಿಂದ ಉತ್ತಮ ತಳಿಯ ಕಬ್ಬಿನ ಬೀಜಗಳನ್ನು ಖರೀದಿಸಿ ರೈತರಿಗೆ ವಿತರಣೆ ಮಾಡಿತ್ತು. ಸುಮಾರು 60 ಎಕ್ರೆ ಪ್ರದೇಶದಲ್ಲಿ ರೈತರು ಕಬ್ಬಿನ ನಾಟಿ ಮಾಡಿದ್ದರು. ಇದೀಗ ಕಬ್ಬು ಬೆಳೆದು ಕಟಾವಿಗೆ ಬಂದು ನಿಂತಿದೆ. ಆದರೆ ಕಾರ್ಖಾನೆ ಪ್ರಾರಂಭದ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.
ಕಾರ್ಖಾನೆ ಪುನಶ್ಚೇತನಕ್ಕೆ ಆಡಳಿತ ಮಂಡಳಿ ಸುಮಾರು 30 ಕೋಟಿ ರೂ. ಬೇಡಿಕೆ ಇಟ್ಟು ಈಗಿನ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಈ ಕುರಿತು ನಿರಾಸಕ್ತಿ ವಹಿಸಿದ ಸರಕಾರ ಬೇರೆ ಸಕ್ಕರೆ ಕಂಪೆನಿಗೆ ಲೀಸ್‌ಗೆ ಕೊಡುವ ಬಗ್ಗೆ ಆಲೋಚನೆಯಲ್ಲಿದೆ ಎನ್ನಲಾಗಿದೆ. ಲಾಭದಾಯಕ ಬೆಳೆ
ಕಬ್ಬು ಎನ್ನುವುದು ರೈತರಿಗೆ ಅತ್ಯಧಿಕ ಲಾಭ ನೀಡುವ ಬೆಳೆಯಾಗಿದೆ. ನಿರ್ವಹಣ ವೆಚ್ಚ ಕೂಡ ಕಡಿಮೆಯಾಗಿರುವುದರಿಂದ ಪ್ರತಿ ಟನ್‌ಗೆ ಕನಿಷ್ಠ 2,500 ರೂ. ಸಿಕ್ಕಿದರೂ ಕಾಡುಪ್ರಾಣಿಗಳಿಂದ ಆದ ನಷ್ಟ, ಖರ್ಚು ಕಳೆದು ಕನಿಷ್ಠ 30ರಿಂದ 40ಸಾವಿರ ರೂ.ವರೆಗೆ ಲಾಭ ಗಳಿಸಲು ಸಾಧ್ಯ. ಭತ್ತಕ್ಕೆ ಹೋಲಿಸಿದರೆ ನೀರಿನ ಅಗತ್ಯವೂ ಕಡಿಮೆ. ಫೆಬ್ರವರಿ-ಮಾರ್ಚ್‌ಗೆ ಮೊದಲು ಕಬ್ಬನ್ನು ಕಟಾವು ಮಾಡಿ ಅರೆದರೆ ಇಳುವರಿ 9 ಶೇಕಡಕ್ಕಿಂತ ಹೆಚ್ಚು ಬರುತ್ತದೆ.
Related Articles
ಆಡಳಿತ ಮಂಡಳಿ ಈಗ ಬೆಳೆದ ಕಬ್ಬನ್ನು ಜಿಲ್ಲೆಗೆ ಸಮೀಪದ ದಾವಣಗೆರೆ, ಹಾಸನ ಮತ್ತು ಹಳಿಯಾಳದ ಕಬ್ಬಿನ ಕಾರ್ಖಾನೆಗಳಿಗೆ ಮಾರಾಟ ಮಾಡುವ ಕುರಿತು ಚಿಂತನೆ ನಡೆಸಿದೆ. ಆದರೆ ಇದು ವೆಚ್ಚದಾಯಕವಾಗಿರುವುದರಿಂದ ಇದಕ್ಕೆ ರೈತರು ಹಿಂದೇಟು ಹಾಕುತ್ತಿದ್ದಾರೆ.
Advertisement
ಸರಕಾರದಿಂದ ಕಬ್ಬು ಸಾಗಾಟಕ್ಕೆ ಸಹಾಯಧನ ಸಿಕ್ಕಿದ್ದಲ್ಲಿ ಅನುಕೂಲಕರ ಎನ್ನುವುದು ರೈತರ ಅಂಬೋಣ. ಅಲ್ಲದೆ ಒಂದು ಟನ್ ಕಬ್ಬಿಗೆ ಕನಿಷ್ಠ 3 ಸಾವಿರ ರೂ. ಆದರೂ ಸಿಗಬೇಕು. ದೂರದ ಸಕ್ಕರೆ ಕಾರ್ಖಾನೆಗಳಿಗೆ ಕಳುಹಿಸುವ ಸಂದರ್ಭ ಟನ್‌ಗೆ 2,500 ರೂ. ಸಿಗುತ್ತದೆ. ಈ ಮೊತ್ತ ಕಟಾವು ಮತ್ತು ಸಾಗಾಟ ವೆಚ್ಚದಲ್ಲಿ ಕಳೆದು ಹೋಗುತ್ತದೆ.
ಅಂತೋನಿ ವರದಿಜಿಲ್ಲಾ ಮಟ್ಟದ ಜಂಟಿ ಕೃಷಿ ನಿರ್ದೇಶಕ ಆಂತೋನಿ ಇಮ್ಯಾನುವೆಲ್ ನೇತೃತ್ವದ ತಜ್ಞರ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಯ ಪುನಃಶ್ಚೇತನಗೊಳಿಸುವ ಮೂಲಕ ರೈತರ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಲ್ಲದೆ, ಖಾಲಿ ಬಿದ್ದಿರುವ ಸಾವಿರಾರು ಎಕರೆ ಕೃಷಿ ಭೂಮಿ ಮರುಬಳಸಲು ಅವಕಾಶವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಾರಾಹಿ ನೀರು ವ್ಯರ್ಥ
ಜಿಲ್ಲೆಯಲ್ಲಿ ಕಬ್ಬಿನ ಬೆಳೆಗೆ ಅನುಕೂಲ ವಾಗಲಿ ಎಂದು 1985ರಲ್ಲಿ ಸಕ್ಕರೆ ಕಾರ್ಖಾನೆ ಮತ್ತು ವಾರಾಹಿ ಯೋಜನೆಗೆ ಏಕಕಾಲದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ ಸಕ್ಕರೆ ಕಾರ್ಖಾನೆ ಪೂರ್ಣಗೊಂಡು ಉದ್ಘಾಟನೆಗೊಂಡರೂ ವಾರಾಹಿ ಯೋಜನೆ ನಿಧಾನಗತಿಯಲ್ಲಿ ಸಾಗಿ ಗದ್ದೆಗಳಿಗೆ ನೀರು ಹರಿದು ಬರುವಾಗ ಸುಮಾರು 30 ವರ್ಷಗಳೇ ಕಳೆದಿತ್ತು. ಆಗ ಸಕ್ಕರೆ ಕಾರ್ಖಾನೆ ಬಾಗಿಲು ಮುಚ್ಚಿ 15 ವರ್ಷವಾಗಿತ್ತು. ಇದೀಗ ವಾರಾಹಿ ನೀರು ಸುಮಾರು 6,300 ಹೆಕ್ಟೇರ್ ಪ್ರದೇಶಕ್ಕೆ ಹರಿಯುತ್ತಿದ್ದರೂ ಕಬ್ಬು ಬೆಳೆಯಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲಿ ಗಾಣ ಪ್ರಾರಂಭ
ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಖಾನೆ ನಿರ್ದೇಶಕರೇ ಖಾಸಗಿಯಾಗಿ ಹುಣ್ಸೆಮಕ್ಕಿಯಲ್ಲಿ ಆಧುನಿಕ ತಂತ್ರಜ್ಞಾನದ ಬೆಲ್ಲದ ಗಾಣ ಪ್ರಾರಂಭಿಸುತ್ತಿದ್ದಾರೆ. ಇದು ದಿನಕ್ಕೆ 20 ಟನ್ ಅರೆಯುವ ಸಾಮರ್ಥ್ಯ ಹೊಂದಿದೆ. ಜ.14ರಂದು ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.
-ಜಯಶೀಲ ಶೆಟ್ಟಿ, ಅಧ್ಯಕ್ಷರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕಬ್ಬು ಲಾಭದಾಯಕ ಬೆಳೆ
ಭತ್ತಕ್ಕಿಂತ ಕಬ್ಬು ಲಾಭದಾಯಕ ಬೆಳೆ. ಕಡಿಮೆ ಶ್ರಮದಿಂದ ಸಾಧ್ಯ. ಈಗ ಹಲವು ಕಡೆಗಳಲ್ಲಿ ನೀರಿನ ಅನುಕೂಲವೂ ಇದೆ. ಕಾರ್ಖಾನೆ ಪುನಶ್ಚೇತನ ಖಾತ್ರಿಯಾಗದೆ ರೈತರು ಬೆಳೆಯಲು ಧೈರ್ಯ ಮಾಡುತ್ತಿಲ್ಲ. ಆದ್ದರಿಂದ ಸರಕಾರ ಕಾರ್ಖಾನೆ ಅಭಿವೃದ್ದಿಗೆ ತತ್‌ಕ್ಷಣ ಕ್ರಮಕೈಗೊಳ್ಳಬೇಕು.
-ಪುಣೂಚುರು ರಾಮಚಂದ್ರ ಭಟ್, ಕೃಷಿಕ ಅತಂತ್ರರಾಗಿದ್ದೇವೆ
ಆಡಳಿತ ಮಂಡಳಿಯ ಆಶ್ವಾಸನೆ ನಂಬಿ ಸುಮಾರು 3 ಲಕ್ಷ ರೂ. ಖರ್ಚು ಮಾಡಿ 8 ಎಕ್ರೆ ಜಾಗದಲ್ಲಿ ಕಬ್ಬು ಬೆಳೆದಿದ್ದೇನೆ. ಕನಿಷ್ಠ 200 ಟನ್ ಕಬ್ಬು ಬೆಳೆದು ನಿಂತಿದೆ. ಕಾರ್ಖಾನೆ ಮರುಜೀವ ಆಗಿಲ್ಲ. ಬೆಲ್ಲದ ಗಾಣವೂ ಪ್ರಾರಂಭವಾಗಿಲ್ಲ. ಅತಂತ್ರ ಪರಿಸ್ಥಿತಿಯಲ್ಲಿದ್ದೇವೆ. ಗಾಣದ ಭರವಸೆ ಇದ್ದರೂ ಕಟಾವು, ಸಾಗಾಣಿಕೆ, ಹಣ ಪಾವತಿ ಸೇರಿದಂತೆ ಹಲವು ಸಮಸ್ಯೆ ಇದೆ. ಬೆಳೆದ ಕಬ್ಬಿಗೆ ದಿಕ್ಕಿಲ್ಲದೆ ಬೆಂಕಿ ಹಾಕುವ ಪರಿಸ್ಥಿತಿ ಇವೆ. ಸರಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ತಕ್ಷಣ ಸ್ಪಂದಿಸಬೇಕಿದೆ.
-ರಿತೇಶ್ ಶೆಟ್ಟಿ ಸೂಡ, ಪ್ರಗತಿಪರ ಕೃಷಿಕ -ಪ್ರವೀಣ್ ಮುದ್ದೂರು