Advertisement

ಬ್ರಹ್ಮಾವರ: ಚರಂಡಿ ನಿರ್ವಹಣೆಯಿಲ್ಲದೆ ಕೃತಕ ನೆರೆ ಭೀತಿ

09:36 PM Jun 12, 2019 | Team Udayavani |

ಬ್ರಹ್ಮಾವರ: ಇಲ್ಲಿನ ನಗರ ಹಾಗೂ ಗ್ರಾಮಾಂತರದ ಹಲವು ಕಡೆಗಳಲ್ಲಿ ಚರಂಡಿ ನಿರ್ವಹಣೆ ಇಲ್ಲದೆ ಪ್ರತಿ ವರ್ಷ ಕೃತಕ ನೆರೆ ಪರಿಸ್ಥಿತಿ ತಲೆದೋರುತ್ತಿದೆ.
ಮುಖ್ಯವಾಗಿ ಬ್ರಹ್ಮಾವರ ಪೇಟೆಯ ಮಹೇಶ್‌ ಎಲೆಕ್ಟ್ರಾನಿಕ್ಸ್‌ ಎದುರು ಸರ್ವಿಸ್‌ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿದೆ. ಆಶ್ರಯ ಹೊಟೇಲ್‌, ಮಧುವನ ಕಾಂಪ್ಲೆಕ್ಸ್‌ ಎದುರು ಚರಂಡಿ ಸಂಪೂರ್ಣ ಮುಚ್ಚಿ ಹೋಗಿದ್ದು, ರಾ.ಹೆ. ಗುತ್ತಿಗೆದಾರರು ತತ್‌ಕ್ಷಣ ಕ್ರಮಕೈಗೊಳ್ಳಬೇಕಿದೆ.

Advertisement

ಆಕಾಶವಾಣಿಯಿಂದ ಬಾರಕೂರು ರಸ್ತೆಯ ದುರ್ಗಾ ಸಭಾಗೃಹ ತನಕ ಚರಂಡಿ ಕಣ್ಮರೆಯಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಕೆಸರಿನಿಂದ ಪಾದಚಾರಿಗಳು ಹೈರಾಣಾಗುತ್ತಿದ್ದಾರೆ. ಬ್ರಹ್ಮಾವರದಲ್ಲಿ ಕುಂಜಾಲು ಜಂಕ್ಷನ್‌ನಿಂದ ನಂದಿಗುಡ್ಡೆ ಕ್ರಾಸ್‌ತನಕ ಚರಂಡಿ ದುರಸ್ತಿ ಅನಿವಾರ್ಯ.

ಕೃತಕ ಜಲಪಾತ
ಲಿಟ್ಲರಾಕ್‌ ಶಾಲೆ ಸಮೀಪ ರೈಲ್ವೇ ಮೇಲ್ಸೇತುವೆ ಬಳಿ ದೊಡ್ಡ ಮಳೆಗೆ ಕೃತಕ ಜಲಪಾತ ಸೃಷ್ಟಿಯಾಗುತ್ತದೆ. ನೂರಾರು ಎಕ್ರೆಯಲ್ಲಿ ಬಿದ್ದ ನೀರು ಇಲ್ಲಿಯೇ ಹರಿದು ಹೋಗುವುದರಿಂದ ಶಾಶ್ವತ ಕಾಮಗಾರಿಯ ಅಗತ್ಯವಿದೆ.

ನೂತನ ರಸ್ತೆ
ಮಟಪಾಡಿ ನೀಲಾವರ ನೂತನ ರಸ್ತೆಯ ಹಲವು ಕಡೆಗಳಲ್ಲಿ ಚರಂಡಿ ಇಲ್ಲದೆ ನೀರು ರಸ್ತೆ ಮೇಲೆಯೇ ಹರಿದು ಹೋಗುವ ಪರಿಸ್ಥಿತಿ ಇದೆ.
ಬ್ರಹ್ಮಾವರದ ದೂಪದಕಟ್ಟೆಯಿಂದ ಹಾರಾಡಿ ರಸ್ತೆಯ ಆದರ್ಶನಗರ ಬಳಿ ಕಳೆದ ವರ್ಷ ನೀರು ತುಂಬಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಸಾಲಿಕೇರಿ, ಉಪ್ಪಿನಕೋಟೆ, ಕುಮ್ರಗೋಡು ಪೇಟೆಗಳಲ್ಲಿ ಚರಂಡಿ ನಿರ್ವಹಣೆ
ಅಗತ್ಯವಿದೆ.

ಗ್ರಾಮಾಂತರ ಸ್ಥಿತಿ
ಮುಖ್ಯವಾಗಿ ಕುಂಜಾಲು, ಪೇತ್ರಿ, ಕರ್ಜೆ, ಸಂತೆಕಟ್ಟೆ, ಕೆಂಜೂರು, ಮುದ್ದೂರು, ಕಾಡೂರು, ಕೂರಾಡಿ, ಮೈರ್ಕೊಮೆ, ಹೇರಾಡಿ ಪೇಟೆಗಳಲ್ಲಿ ಚರಂಡಿ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Advertisement

ಕೊಕ್ಕರ್ಣೆ ಮೇಲ್‌ಪೇಟೆಯ ಮುಖ್ಯ ರಸ್ತೆಯಲ್ಲಿ ಕಳೆದ ವರ್ಷಗಳಲ್ಲಿ ನೀರು ತುಂಬಿ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಬಾರಿ ಚರಂಡಿ ಕಾಮಗಾರಿ ನಡೆಸಲಾಗಿದೆ. ಆದರೆ ಕೆಳಪೇಟೆ, ಕಾಲೇಜು ವಠಾರದಲ್ಲಿ ಚರಂಡಿ ದುರಸ್ತಿ ಅವಶ್ಯವಿದೆ.

ಬಾರಕೂರು ಪೇಟೆಯಲ್ಲಿ ರಸ್ತೆ ಮೇಲೆಯೇ ನೀರು ಹರಿದು ಹೋಗುತ್ತದೆ. ಮಂದಾರ್ತಿ ಕ್ರಾಸ್‌ನಿಂದ ಕಾಲೇಜು ತನಕ ಸುಸಜ್ಜಿತ ಚರಂಡಿ ಆವಶ್ಯಕ.

ಹೂಳು ತುಂಬಿದ ತೋಡು
ಮಟಪಾಡಿ, ನೀಲಾವರ, ಚಾಂತಾರು, ಹಂದಾಡಿ ಬೈಲಿನ ಮುಖ್ಯ ತೋಡುಗಳು ಹೂಳಿನಿಂದ ತುಂಬಿವೆ. ಗ್ರಾಮಾಂತರ ಭಾಗದ ಕೃಷಿ ಭೂಮಿಯ ತೋಡುಗಳನ್ನು ದುರಸ್ತಿಗೊಳಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ.

ಇಲಾಖೆಗೆ ಮನವಿ
ಜಿಲ್ಲಾ ಮುಖ್ಯರಸ್ತೆ ಹಾದುಹೋಗುವ ಪೇಟೆಯಲ್ಲಿ ಚರಂಡಿ ನಿರ್ಮಿಸುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸುತ್ತೇವೆ. ಕುಂಜಾಲು ಪೇಟೆಯಲ್ಲಿ ನಿರ್ಮಾಣಗೊಂಡ ಚರಂಡಿ ಕನಿಷ್ಠ ಆರೂರು ಕ್ರಾಸ್‌ ತನಕ ವಿಸ್ತರಿಸುವ ಅಗತ್ಯವಿದೆ.
– ಪ್ರಶಾಂತ್‌, ಪಿಡಿಒ ನೀಲಾವರ

ಮರು ಪ್ರಯತ್ನ
ಮಹೇಶ್‌ ಎಲೆಕ್ಟ್ರಾನಿಕ್ಸ್‌ ಸಮೀಪ ಸರ್ವಿಸ್‌ ರಸ್ತೆಯಲ್ಲಿ ನೀರು ತುಂಬುವ ಬಗ್ಗೆ ಈಗಾಗಲೇ ಎರಡು ಬಾರಿ ರಾ.ಹೆ. ಎಂಜಿನಿಯರ್‌ ಅವರನ್ನು ಕರೆಯಿಸಿ ಗಮನಕ್ಕೆ ತರಲಾಗಿತ್ತು. ತಾಂತ್ರಿಕ ಸಮಸ್ಯೆಯಿಂದಾಗಿ ಬಗೆಹರಿದಿಲ್ಲ. ಈಗ ಮತ್ತೂಮ್ಮೆ ಅವರನ್ನು ಕರೆಯಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ.
– ನವೀನ್‌ಚಂದ್ರ ನಾಯಕ್‌, ಅಧ್ಯಕ್ಷರು, ವಾರಂಬಳ್ಳಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next