ಬಂಟ್ವಾಳ: ಸದಾ ಒಂದಿಲ್ಲೊಂದು ಸಮಸ್ಯೆಗಳಿಂದಲೇ ಸುದ್ದಿಯಾಗುತ್ತಿರುವ ಬಿ.ಸಿ.ರೋಡ್ ಸಮೀಪದ ರಾ.ಹೆ. 75ರ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ವಾಹನ ಸರದಿ ಸಾಲನ್ನು ತಪ್ಪಿಸುವ ಉದ್ದೇಶದಿಂದ ಮೂರನೇ ಬೂತ್ ನಿರ್ಮಿಸಲಾಗಿದ್ದು, ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಕಾರ್ಯಾರಂಭಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮನಸ್ಸು ಮಾಡಿಲ್ಲ.
ಹೆದ್ದಾರಿಯ ಎರಡೂ ಬದಿ ಶುಲ್ಕ ಸಂಗ್ರಹದ ತಲಾ ಎರಡೆರಡು ಬೂತ್‌ಗಳಿದ್ದು, ವಾಹನಗಳ ಒತ್ತಡ ಹೆಚ್ಚಿರುವ ಸಂದರ್ಭ ವಾಹನಗಳು ಸಾಲು ನಿಲ್ಲಬೇಕಾದ ಸ್ಥಿತಿ ಇವೆ. ಅದನ್ನು ತಪ್ಪಿಸಲೆಂದೇ ಮೂರನೇ ಬೂತ್ ನಿರ್ಮಿಸಲಾಗಿತ್ತು.
ನವಯುಗ ಸಂಸ್ಥೆಯ ತಲಪಾಡಿ, ಹೆಜಮಾಡಿ ಟೋಲ್‌ಗಳಲ್ಲಿ ತಲಾ ಎರಡೂ ಕಡೆಯೂ ನಾಲ್ಕೈದು ಟೋಲ್ ಬೂತ್‌ಗಳಿವೆ. ಆದರೆ ಬ್ರಹ್ಮರಕೊಟ್ಲಿನಲ್ಲಿ ಕೇವಲ ಎರಡು ಬೂತ್‌ಗಳು ಕಾರ್ಯಾಚರಿಸುತ್ತಿವೆ.ವರ್ಷ ಕಳೆದಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಬೆಳಗ್ಗೆ-ಸಂಜೆ ಹೊತ್ತು ವಾಹನಗಳು ಟೋಲ್ ಪಾವತಿಗೆ ಕಾದು ನಿಲ್ಲುವ ಅನಿವಾರ್ಯ ಇದೆ.
ಮೂರ್‍ನಾಲ್ಕು ವರ್ಷ ಹಿಂದೆಯೇ ಕಾಮಗಾರಿ!
ಮೂರನೇ ಟೋಲ್ ಬೂತ್ ಕಾಮಗಾರಿಯನ್ನು ಮೂರ್‍ನಾಲ್ಕು ವರ್ಷ ಹಿಂದೆಯೇ ಆರಂಭಿಸಿದ್ದರೂ ಪ್ರಾರಂಭದಲ್ಲಿ ತುಂಬೆ ಅಣೆಕಟ್ಟಿನತ್ತ ಅಳವಡಿಸಿರುವ ವಿದ್ಯುತ್ ಕಂಬಗಳು ಹೆದ್ದಾರಿಗೆ ತಾಗಿಕೊಂಡೇ ಇದ್ದ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿತ್ತು. ಕಂಬಗಳ ಸ್ಥಳಾಂತರದ ಬಳಿಕವೂ ಕಾಮಗಾರಿ ವೇಗ ಪಡೆದುಕೊಂಡಿರಲಿಲ್ಲ. ಆಮೆಗತಿಯಲ್ಲಿ ಸಾಗಿ ಕಳೆದ ವರ್ಷ ಪೂರ್ಣಗೊಂಡಿತ್ತು. ಆದರೆ ಕಾರ್ಯಾರಂಭ ಮಾತ್ರ ಮುಹೂರ್ತ ಕೂಡಿಬಂದಿಲ್ಲ. ವಾಹನ ಸವಾರರು ಕಾದುನಿಂತು ಟೋಲ್ ಪಾವತಿಸಿ ಸಾಗುತ್ತಿದ್ದಾರೆ. ಫಾಸ್ಟಾಗ್ ಇದ್ದರೂ ಕಾಯುವಿಕೆ ಅನಿವಾರ್ಯವಾಗಿದೆ.
Related Articles
ಮರಳು ಲಾರಿಗಳ ಕಾಟ!
ಪ್ರಸ್ತುತ ದಿನಗಳಲ್ಲಿ ಮರಳು ಲಾರಿಗಳ ಸಂಚಾರ ಹೆಚ್ಚಾಗಿದ್ದು, ರಾತ್ರಿಯಲ್ಲಿ ಹೆಚ್ಚು ಓಡಾಡುತ್ತಿವೆ. ಬಹುತೇಕ ಲಾರಿಗಳು ಟೋಲ್ ತಪ್ಪಿಸಿಕೊಂಡು ಸರ್ವೀಸ್ ರಸ್ತೆಯಲ್ಲೇ ಸಾಗುತ್ತಿವೆ ಎಂಬ ಆರೋಪವೂ ಇದೆ.
ಕೆಲವು ದಿನಗಳ ಹಿಂದೆ ಟೋಲ್‌ನವರು ಮರಳು ಲಾರಿಗಳನ್ನು ನಿಲ್ಲಿಸಿ ಫಾಸ್ಟಾಗ್ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದು, ಸುಮಾರು 15 ಲಾರಿಯವರನ್ನು ಬಿಟ್ಟರೆ ಉಳಿದವರು ಟೋಲ್ ತಪ್ಪಿಸುವ ಮಾರ್ಗವನ್ನೇ ಹಿಡಿದಿದ್ದಾರೆ.
ಬ್ರಹ್ಮರಕೂಟ್ಲು ಟೋಲ್ ಫ್ಲಾಜಾದ ಮೂರನೇ ಬೂತ್ ಯಾವಾಗ ತೆರೆಯಲಿದೆ ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಆ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ.
– ಎಚ್.ಆರ್. ಲಿಂಗೇಗೌಡ ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ, ಮಂಗಳೂರು