Advertisement

ಕಡಿಯಾಳಿ ದೇಗುಲ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ: ಬ್ರಹ್ಮಕಲಶೋತ್ಸವದಿಂದ ಸುಭಿಕ್ಷೆ: ಪ್ರಮೋದ್‌

01:24 AM Jun 05, 2022 | Team Udayavani |

ಉಡುಪಿ: ದೇಗುಲಗಳು ಬ್ರಹ್ಮಕಲಶೋತ್ಸವದ ಮೂಲಕ ಪುನರುತ್ಥಾನವಾದಾಗ ಸಮಾಜ ಸುಭಿಕ್ಷವಾ ಗಲಿದೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದಲ್ಲಿ ಜೂ. 10ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶನಿವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಲ್ಕು ದುರ್ಗಾಲಯ, ನಾಲ್ಕು ನಾಗಾಲಯಗಳು ಸೇರಿದಂತೆ ಅಷ್ಟ ಮಠಗಳಿಂದ ಕೂಡಿ ರಜತಪೀಠ ಪುರ ಎನಿಸಿದ ಉಡುಪಿ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಕಡಿಯಾಳಿ ದೇಗುಲವೂ ನಾಲ್ಕು ದುರ್ಗಾಲಯಗಳಲ್ಲಿ ಒಂದಾಗಿದೆ.

ರಾಜರ ಆಡಳಿತದ ಕಾಲದಲ್ಲಿ ದೇವಸ್ಥಾನಗಳ ನಿರ್ಮಾಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ದೇವಸ್ಥಾನಗಳ ಮೂಲಕ ಸಾವಿರಾರು ಮಂದಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಬ್ರಹ್ಮಕಲಶೋತ್ಸವದ ಸಂದರ್ಭ ಅನೇಕರಿಗೆ ಉದ್ಯೋಗವೂ ಆಗುತ್ತಿದೆ ಎಂದರು.

ಧರ್ಮಾಚರಣೆಯಿಂದ ಸಿದ್ಧಿ
ವಿದ್ವಾನ್‌ ಶ್ರೀಶ ಭಟ್‌ ಮುದರಂಗಡಿ ಧಾರ್ಮಿಕ ಉಪನ್ಯಾಸ ನೀಡಿ, ಯಾವುದರ ಆಚರಣೆಯಿಂದ ನಮ್ಮ ಬದುಕು ಸುಲಭವಾಗುತ್ತದೆಯೋ ಅದು ಧರ್ಮವಾಗುತ್ತದೆ. ಅತೀಂದ್ರಿಯ ಪ್ರಪಂಚವನ್ನು ದೈವಿಕ ಶಕ್ತಿಗಳು ನಡೆಸುತ್ತಿವೆ. ಆದ್ದರಿಂದ ಧರ್ಮಸಂಕಲ್ಪಕ್ಕೆ ಒಳಪಟ್ಟು ಬದಕನ್ನು ಸಾಗಿಸಬೇಕು. ಪ್ರಪಂಚವು ನಂಬಿಕೆಯ ಮೇಲೆ ನಿಂತಿದೆ. ಕರ್ತವ್ಯವನ್ನು ದೇವರ ಆರಾಧನೆ ಎಂದು ನಿರಂತರ ಮಾಡುತ್ತಾ ಸಾಗಿದಾಗ ಸಿದ್ಧಿ ಲಭಿಸುತ್ತದೆ ಎಂದು ವಿಶ್ಲೇಷಿಸಿದರು.

Advertisement

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಕೊಡವೂರು ಶ್ರೀ ಶಂಕರನಾರಾಯಣ ದೇಗುಲದ ಅಧ್ಯಕ್ಷ ಸಾಧು ಸಾಲ್ಯಾನ್‌, ಮಾಂಡವಿ ಬಿಲ್ಡರ್ನ ಜೆರ್ರಿ ವಿನ್ಸೆಂಟ್‌ ಡಯಾಸ್‌, ಸಾಯಿರಾಧಾ ಡೆವಲಪರ್ನ ಎಂಡಿ ಮನೋಹರ ಎಸ್‌. ಶೆಟ್ಟಿ, ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಭಾರತಿ ಪ್ರಶಾಂತ್‌, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಕಟ್ಟೆ ರವಿರಾಜ್‌ ವಿ. ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್‌ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ವ್ಯವಸ್ಥಾಪನ ಸಮಿತಿ ಸದಸ್ಯ ರಮೇಶ್‌ ಶೇರಿಗಾರ್‌ ಉಪಸ್ಥಿತರಿದ್ದರು.

ಧಾರ್ಮಿಕ ಪರಿಷತ್‌ ಸದಸ್ಯ ಮೋಹನ ಉಪಾಧ್ಯ ಸ್ವಾಗತಿಸಿದರು. ನ್ಯಾಯವಾದಿ ರಾಜಶೇಖರ ಪಿ. ಶ್ಯಾಮ ರಾವ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next