Advertisement

ಬ್ರಹ್ಮಾವರ ಪುರಸಭೆ, ಕುಂದಾಪುರ ನಗರಸಭೆ ಪ್ರಸ್ತಾವನೆ ನನೆಗುದಿಗೆ

10:17 PM Dec 18, 2020 | mahesh |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವುದು, ಬ್ರಹ್ಮಾವರವನ್ನು ಪುರಸಭೆಯಾಗಿಸುವುದು, ಹೆಬ್ರಿಯನ್ನು ಪಟ್ಟಣ ಪಂಚಾಯತ್‌ ಆಗಿ ಪರಿವರ್ತಿಸುವ ಪ್ರಸ್ತಾವನೆ ಗಳಿರುವಂತೆ ಗ್ರಾ.ಪಂ. ಚುನಾವಣೆ ನಡೆಯುತ್ತಿದೆ.

Advertisement

ತಾಲೂಕು ಕೇಂದ್ರ ಸ್ಥಾನವನ್ನು ನಗರ ಸ್ಥಳೀಯ ಸಂಸ್ಥೆಯಾಗಿಸಬೇಕೆಂಬ ಮಾನದಂಡವಿದ್ದ ಹಿನ್ನೆಲೆ ಯಲ್ಲಿ ಬ್ರಹ್ಮಾವರ, ಹೆಬ್ರಿ ನಗರ ಪ್ರದೇಶವಾಗಿ ಘೋಷಣೆಯಾಗುವ ಸಾಧ್ಯತೆಗಳಿದ್ದವು. ಆದರೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಘೋಷಣೆಯಾಗಬೇಕಾದರೆ ಅಲ್ಲಿನ ಜನಸಂಖ್ಯೆ ಸಾಂದ್ರತೆ, ತೆರಿಗೆ ಪಾವತಿಗೆ ಅನುಗುಣವಾಗಿರಬೇಕು. ಇವು ತಾಳೆಯಾಗದ ಕಾರಣ ಕೆಲವು ಪ್ರಸ್ತಾವನೆಗಳು ಅಲ್ಲಿಯೇ ನಿಂತು ಹೋಗಿವೆ.

ಪುರಸಭೆಗೆ ಆದ್ಯತೆ
ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಾದ ಜನಗಣತಿ ಈ ವರ್ಷ ನಡೆದಿಲ್ಲ. ಮುಂದಿನ ವರ್ಷ ಜನಗಣತಿ ನಡೆದರೆ ಆಗ ಜನಸಂಖ್ಯೆಯ ಸಾಂದ್ರತೆ ಹೆಚ್ಚಿಗೆ ಆಗುವ ಸಾಧ್ಯತೆಗಳಿವೆ. ಆಗ ಪುರಸಭೆಯ ಮಾನದಂಡ ಸಿಗಬಹುದು ಎಂಬ ಆಶಯ ಶಾಸಕ ಕೆ.ರಘುಪತಿ ಭಟ್‌ ಅವರಿಗೆ ಇದೆ. ಇಲ್ಲವಾದರೆ ಮತ್ತಷ್ಟು ಗ್ರಾ.ಪಂ.ಗಳನ್ನು ಸೇರಿಸಿಕೊಂಡು ಪುರಸಭೆ ಮಾಡಬಹುದು. ಮಾಡುವುದಾದರೆ ಪುರಸಭೆ, ಪ.ಪಂ. ಬೇಡ ಎನ್ನುತ್ತಾರೆ ರಘುಪತಿ ಭಟ್‌.

ನಗರ ಘೋಷಣೆಯಾದರೆ ಪರಿಣಾಮ?
ಈಗ ಗ್ರಾ.ಪಂ. ಚುನಾವಣೆ ನಡೆದು ಇಲ್ಲಿ ಗ್ರಾ.ಪಂ. ಆಡಳಿತ ಮಂಡಳಿ ಆಯ್ಕೆಯಾಗಲಿದೆ. ಸರಕಾರ ಯಾವ ಸಂದರ್ಭದಲ್ಲಿಯೂ ಪುರಸಭೆ, ನಗರಸಭೆ, ಪ.ಪಂ. ಘೋಷಣೆ ಮಾಡಬಹುದು. ಆಗ ಈಗಿರುವ ಗ್ರಾ.ಪಂ.ಗಳ ಅಸ್ತಿತ್ವವೇನು ಎಂಬ ಪ್ರಶ್ನೆ ಬರುತ್ತದೆ. ಸರಕಾರದ ನಿಯಮಾವಳಿ ಪ್ರಕಾರ ಹಾಲಿ ಇರುವ ಗ್ರಾ.ಪಂ. ಸದಸ್ಯರನ್ನು ನಗರ ಸಂಸ್ಥೆ ಸದಸ್ಯರಾಗಿ ಪರಿಗಣಿಸಬಹುದು ಎಂದು ಇದೆ. ಆದರೆ ನಗರ ಸಂಸ್ಥೆಗಳ ವಾರ್ಡುಗಳಿಗಿಂತ ಗ್ರಾ.ಪಂ.ಗಳ ವಾರ್ಡುಗಳ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಇದು ಅಸಾಧ್ಯವಾಗಲಿದೆ. ಅಂತಹ ಸಂದರ್ಭ ನಗರ ಪ್ರದೇಶವಾಗಿ ಘೋಷಣೆಯಾಗಿ ಆರು ತಿಂಗಳವರೆಗೆ ಗ್ರಾ.ಪಂ. ಸದಸ್ಯರನ್ನು ನಗರ ಸಂಸ್ಥೆ ಸದಸ್ಯರಾಗಿ ಪರಿಗಣಿಸಿ ಮತ್ತೆ ಚುನಾವಣೆ ನಡೆದು ನಗರ ಸಂಸ್ಥೆ ಅಸ್ತಿತ್ವಕ್ಕೆ ಬರಬೇಕಾಗುತ್ತದೆ. ಇದೇ ಮಾನದಂಡದಂತೆ ಕುಂದಾಪುರ ನಗರಸಭೆಯಾದರೆ ಹೊರವಲಯದ ಗ್ರಾಮಾಂತರ ಪ್ರದೇಶವನ್ನು ಸೇರಿಸಿಕೊಂಡು ಮತ್ತೆ ಚುನಾವಣೆ ನಡೆಯಬೇಕು. ಬ್ರಹ್ಮಾವರದಲ್ಲಿಯೂ ಆಸುಪಾಸಿನ ಐದು ಗ್ರಾ.ಪಂ.ಗಳನ್ನು ಸೇರಿಸಿಕೊಂಡು ಪುರಸಭೆಯಾಗಿ ಮಾರ್ಪಡಿಸಿ ಚುನಾವಣೆ ನಡೆಸಬೇಕು.

ಬ್ರಹ್ಮಾವರ ಪ.ಪಂ.ಗೆ ನಿರಾಸಕ್ತಿ
ತಾಲೂಕು ಕೇಂದ್ರವಾದ ಬ್ರಹ್ಮಾವರ ಆಸುಪಾಸಿನ ಚಾಂತಾರು, ಹೇರೂರು, ವಾರಂಬಳ್ಳಿ, ಹಾರಾಡಿ, ಹಂದಾಡಿ ಗ್ರಾ.ಪಂ.ಗಳನ್ನು ಸೇರಿಸಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಪ್ರಸ್ತಾವನೆಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶವು ಸರಕಾರಕ್ಕೆ ಕಳುಹಿಸಿತ್ತು. ಆದರೆ ಪುರಸಭೆಯಾಗಬೇಕಾದರೆ ಜನಸಂಖ್ಯೆ ಸಾಂದ್ರತೆ ಸಾಕಾಗುತ್ತಿರಲಿಲ್ಲ. ಸದ್ಯ ಪ್ರಸ್ತಾವನೆಯ ಪ್ರಕಾರ 31,200 ಜನಸಂಖ್ಯೆ ಇದೆ. ಪ್ರತಿ ಚ.ಕಿ.ಮೀ. ವ್ಯಾಪ್ತಿಯಲ್ಲಿ ಜನಸಾಂದ್ರತೆ 1,500 ಇರಬೇಕೆಂಬ ಮಾನದಂಡವಿದೆ. ಈಗ ಇರುವುದು 748. ಹೀಗಾಗಿ ಪಟ್ಟಣ ಪಂಚಾಯತ್‌ ಆಗಿ ಘೋಷಿಸುವ ಸಾಧ್ಯತೆಗಳಿದ್ದರೂ ಈಗ ಗ್ರಾ.ಪಂ. ಚುನಾವಣೆ ನಡೆಯುತ್ತಿದೆ. ಪಟ್ಟಣ ಪಂಚಾಯತ್‌ಗೆ ಹೆಚ್ಚಿನ ಅನುದಾನ ದೊರಕದೆ ಇರುವುದು, ಸಿಬಂದಿ ಮಂಜೂರಾತಿ ಕಡಿಮೆ, ನಗರದ ಎಲ್ಲ ಮಾನದಂಡ ಗಳೂ ಜನರಿಗೆ ಹೊರೆಯಾಗುವುದು ಈ ಕಾರಣದಿಂದ ಶಾಸಕರು ಬ್ರಹ್ಮಾವರವನ್ನು ಪ. ಪಂ. ಆಗಿ ಪರಿವರ್ತಿಸಲು ಆಸಕ್ತಿ ತೋರಲಿಲ್ಲ.

Advertisement

ಹೆಬ್ರಿ: ಜನಸಂಖ್ಯೆ ಸಾಂದ್ರತೆ ಕಡಿಮೆ
ಹೆಬ್ರಿ ತಾಲೂಕು ಕೇಂದ್ರವಾದ ಬಳಿಕ ನಗರ ಸಂಸ್ಥೆ ಪ್ರಸ್ತಾವನೆಗೆ ಜೀವ ಬಂತು. ಕೇವಲ ಹೆಬ್ರಿ ಗ್ರಾ.ಪಂ.ನ್ನು ಪ.ಪಂ. ಆಗಿ ಘೋಷಿಸಲು ಪ್ರಸ್ತಾವನೆ ಸಲ್ಲಿಸಿದಾಗ ಜನಸಂಖ್ಯೆ ಸಾಲದೆ ತಿರಸ್ಕೃತವಾಯಿತು. ಬಳಿಕ ಹೆಬ್ರಿ ಜತೆ ಚಾರ ಗ್ರಾ.ಪಂ.ನ್ನು ಸೇರಿಸಿ ಪ್ರಸ್ತಾವನೆ ಸಲ್ಲಿಸಿದಾಗ ಒಟ್ಟು ಜನಸಂಖ್ಯೆ 11,071 ಆಯಿತು. ಆದರೂ ಚ.ಕಿ.ಮೀ. ಜನಸಾಂದ್ರತೆ 283 ಮಾತ್ರ ಇದೆ. ಜನಸಾಂದ್ರತೆ ಪ್ರಕಾರ ಹೆಬ್ರಿ ನಗರ ಸಂಸ್ಥೆಯಾಗಿ ಮೇಲ್ದರ್ಜೆಗೇರಲು ಅರ್ಹ ಆಗುವುದಿಲ್ಲ. ಪ.ಪಂ. ಆಗಬೇಕಾದರೆ ಜನಸಾಂದ್ರತೆ 400 ಇರಬೇಕೆಂದಿದೆ. ತಾಲೂಕು ಕೇಂದ್ರವನ್ನು ನಗರ ಸಂಸ್ಥೆಯಾಗಿಸಬೇಕೆಂಬ ಸರಕಾರದ ನಿಯಮಾವಳಿ ಪ್ರಕಾರ ಪ.ಪಂ. ಆಗಿ ಸರಕಾರ ಘೋಷಿಸಬಹುದಾಗಿದ್ದರೂ ಘೋಷಿಸದೆ ಗ್ರಾ.ಪಂ. ಚುನಾವಣೆ ಘೋಷಿಸಲಾಗಿದೆ. ಒಟ್ಟಾರೆ ಅನುದಾನವೇ ಮೊದಲಾದ ಸೌಲಭ್ಯದಲ್ಲಿ ಪ.ಪಂ. ಶ್ರೇಣಿ ಹಿಂದುಳಿದಿರುವುದರಿಂದ ಜನಪ್ರತಿನಿಧಿಗಳಿಗೆ ಆಸಕ್ತಿ ತೋರುವುದಿಲ್ಲ.

ಕುಂದಾಪುರ: ಅಂಗೀಕಾರ ಸಾಧ್ಯತೆ
ಕುಂದಾಪುರ ಪುರಸಭೆಯನ್ನು ನಗರಸಭೆಯಾಗಿ ಮಾರ್ಪಡಿಸಲು ಪುರಸಭೆಯ ಹೊರ ಗ್ರಾಮಾಂತರ ವಲಯವಾದ ಕೋಟೇಶ್ವರ, ಬೀಜಾಡಿ, ಹಂಗಳೂರು, ಕೋಣಿ, ಬಸ್ರೂರು, ಆನಗಳ್ಳಿ, ಗೋಪಾಡಿ ಈ ಏಳು ಗ್ರಾ.ಪಂ.ಗಳನ್ನು ಸೇರಿ ಸುವ ಪ್ರಸ್ತಾವವಿತ್ತು. ಈಗ ಈ ಗ್ರಾಮಾಂತರ ಪ್ರದೇಶಕ್ಕೂ ಚುನಾವಣೆ ಘೋಷಣೆಯಾಗಿದೆ. ಹೊಸ ಪ್ರಸ್ತಾವನೆ ಯಲ್ಲಿ 68,260 ಜನಸಂಖ್ಯೆ ಇದೆ. ಆದರೆ ಪ್ರತಿ ಚ.ಕಿ.ಮೀ. ಜನಸಾಂದ್ರತೆ 1,400 ಮಾತ್ರ ಇರುವುದರಿಂದ ಸ್ವಲ್ಪ ಅಡ್ಡಿಯಾಗುತ್ತದೆ. ಆದರೂ ಹಳೆಯ ತಾ| ಕೇಂದ್ರವಾದ ಕಾರಣ ಸಚಿವ ಸಂಪುಟದಲ್ಲಿ ನಗರಸಭೆಯಾಗಿ ಮಾರ್ಪಡಿಸಿ ಅಂಗೀಕರಿ ಸುವ ಸಾಧ್ಯತೆ ಇದೆ. ಮುಂದಿನ ಜನಗಣತಿ ನಡೆದಾಗ ನಗರಸಭೆಯಾಗಿ ಘೋಷಿಸಲು ಬೇಕಾದ 1,500 ಜನಸಾಂದ್ರತೆ ಕಷ್ಟವಾಗದು ಎಂಬ ಆಶಯವಿದೆ.

ನಗರವಾದರೆ ಸದಸ್ಯರ ಅವಧಿ ಮೊಟಕು?
2021ರಲ್ಲಿ ಜನಗಣತಿ ನಡೆಯಲಿದ್ದು 2022ರಲ್ಲಿ ಕುಂದಾಪುರ ನಗರಸಭೆ, ಬ್ರಹ್ಮಾವರ ಪುರಸಭೆ, ಹೆಬ್ರಿ ಪ.ಪಂ. ಘೋಷಣೆಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಆಗ ಈಗ ಆಯ್ಕೆಯಾದ ಗ್ರಾ.ಪಂ. ಸದಸ್ಯರ ಅವಧಿ ಐದು ವರ್ಷ ಮುನ್ನವೇ ಮೊಟಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next