Advertisement

ರೈತರಿಗೆ ಬೇಕಾಬಿಟ್ಟಿ ಬೆಳೆ ಪರಿಹಾರ ವಿತರಣೆ: ಬಿ.ಆರ್.ಪಾಟೀಲ್ ಆಕ್ರೋಶ

03:03 PM Nov 03, 2022 | Team Udayavani |

ಕಲಬುರಗಿ: ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವನ್ನು ರೈತರಿಗೆ ಬೇಕಾಬಿಟ್ಟಿಯಾಗಿ ಸರಕಾರ ನೀಡಿದ್ದು, ಇದು ನೀತಿಗೆಟ್ಟ ಬಿಜೆಪಿ ಸರ್ಕಾರ ಭಿಕ್ಷೆನೀಡಿದಂತೆ ಮಾಡಿವೆ ಎಂದು ಆಳಂದ ಮಾಜಿ ಶಾಸಕ ಹಾಗೂ ಮಾಜಿ ಸಭಾಪತಿ ಬಿ.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆ ಪರಿಹಾರ ನೀಡಿರುವುದು ಅವೈಜ್ಞಾನಿಕವಾಗಿದೆ. ಯಾವ ರೀತಿಯಾಗಿ ಸಮೀಕ್ಷೆ ಮಾಡಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ ಆಶ್ಚರ್ಯವೆಂದರೆ, ರಾಜ್ಯದ ಬಹುತೇಕ ರೈತರಿಗೆ 2ರಿಂದ 8 ಸಾವಿರ ವರೆಗೆ ಬೆಳೆ ಪರಿಹಾರವನ್ನು ನೀಡಲಾಗಿದೆ. ಇದಕ್ಕೆ ಯಾವ ಮಾನದಂಡ ಅನುಸರಿಸಲಾಗಿದೆ ಎನ್ನುವುದು ಖುದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದ ರೈತರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಆದ್ದರಿಂದ ಕೂಡಲೇ ಮೊತ್ತೊಮ್ಮೆ ವೈಜ್ಞಾನಿಕವಾಗಿ ಬೆಳೆ ಸಮೀಕ್ಷೆ ಮಾಡಿ ರಾಜ್ಯದ ಅರ್ಹ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಪಡಿಸಿದರು.

ರಾಜ್ಯ ಸರ್ಕಾರ ಒಟ್ಟು ಶೇಕಡ ಮೂವತ್ತು ರಷ್ಟು ಬೆಳೆಹಾನಿಯಾಗಿದೆ ಎಂದು ಅಂದಾಜಿಸಿದೆ. ಈ ಅಂದಾಜಿಗೆ ಅನುಸರಿಸಿದ ಮಾನದಂಡ ಏನು ಎನ್ನುವುದು ಮೊದಲು ಬಹಿರಂಗ ಪಡಿಸಬೇಕು. ಕೆಲವು ರೈತರಿಗೆ 2ಹೆಕ್ಟೇರ್ ಹಾನಿಯಾಗಿದೆ ಎಂದು ಅಂದಾಜಿಸಿ ಜಿಪಿಎಸ್ ಮಾಡಿಸಿ, ಪರಿಹಾರ ಮಾತ್ರ 1ಹೆಕ್ಟೇರ್ ಗಷ್ಟೆ ಹಾಕಿದ್ದಾರೆ. ಅಚ್ಚರಿಯೆಂದರೆ ಹೆಕ್ಟೇರಿಗೆ 8 ಸಾವಿರದಷ್ಟು ಪರಿಹಾರ ಹಾಕುವುದಾಗಿ ಹೇಳಿದ್ದರು. ಜಿಪಿಎಸ್ ಮುಖೇನ ಒಂದು ಹೆಕ್ಟೇರ್ ಹಾನಿ ಆಗಿದೆ ಎಂದು ಅಂದಾಜಿಸಿದ್ದರೂ, ಅಂತಹ ರೈತರಿಗೆ ಕೇವಲ 2 ಸಾವಿರ ರೂ ಪರಿಹಾರ ಹಾಕಲಾಗಿದೆ. ಇದು ಬಿಜೆಪಿ ಸರ್ಕಾರ ರೈತರಿಗೆ ನೀಡುತ್ತಿರುವ ಭಿಕ್ಷೆಯೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಳೆ ವಿಮೆ ರಾದ್ಧಾಂತ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಯೊಳಗೆ ರೈತರಿಂದ ಬೆಳೆವಿಮೆ ಕಟ್ಟಿಸಿಕೊಳ್ಳುವುದು ಕಾರ್ಪೊರೇಟ್ ಕಂಪನಿಗಳಿಗೆ ಲಾಭವಾಗಿದೆಯೇ ಹೊರತು, ನಮ್ಮ ರೈತರಿಗಂತೂ ಯಾವುದೇ ಕಾರಣಕ್ಕೂ ಲಾಭವಾಗಿಲ್ಲ ಎಂದು ದೂರಿದ ಅವರು, ಇನ್ಶೂರೆನ್ಸ್ ಕಂಪೆನಿಗಳಿಂದ ಹಗಲು ದರೋಡೆ ನಡೆಯುತ್ತಿದ್ದು ಇದಕ್ಕೆ ಸರ್ಕಾರ ಬೆಂಗಾವಲಾಗಿ ನಿಂತಿದೆ ಎಂದು ಆರೋಪ ಮಾಡಿದರು.

Advertisement

ಕಲಬುರಗಿ ಜಿಲ್ಲೆಯೊಂದರಲ್ಲೇ 2,14,749 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿದ್ದರು. ಇವರಲ್ಲಿ 1.15.985 ರೈತರು ಬೆಳೆ ಹಾನಿಯಾಗಿದೆ ಎಂದು ದೂರು ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಒಂದೇ 1ಪೈಸೆ ವಿಮೆ ಮಂಜೂರಾಗಿಲ್ಲ. ಆದರೂ ವಿಮಾ ಕಂಪೆನಿಗಳು ಶೇಕಡಾ ತೊಂಬತ್ತೊಂಬತ್ತರಷ್ಟು ಸರ್ವೆ ಕೂಡ ಮಾಡಿದ್ದಾರೆ ಎಂದು ತಿಳಿದಿದೆ. ಆದ್ದರಿಂದ ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಿ ರೈತರಿಗೆ ಪರಿಹಾರ ಕೊಡಿಸುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು. ಇಲ್ಲದೆ ಹೋದರೆ ಈ ವಿಷಯದಲ್ಲಿ ಕಾಂಗ್ರೆಸ್ ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಳೆ ಸಾಲಮನ್ನಾ ಮಾಡಿ: ರಾಜ್ಯ ಸರ್ಕಾರ ಕೂಡಲೇ ರೈತರ ಸಹಾಯಕ್ಕೆ ಧಾವಿಸಬೇಕು ಎಂದು ಆಗ್ರಹಿಸಿರುವ ಬಿ.ಆರ್.ಪಾಟೀಲ್ ಅವರು, ರಾಜ್ಯದ ಎಲ್ಲ ಬ್ಯಾಂಕುಗಳಿಂದ ಪಡೆದಿರುವಂತಹ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲದೆ ಹೋದರೆ, ಕಾಂಗ್ರೆಸ್ ರೈತರೊಂದಿಗೆ ಸೇರಿಕೊಂಡು ಉಗ್ರವಾದ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.

ದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಸಾಲವನ್ನು ಮನ್ನಾ ಮಾಡುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ ಕರ್ನಾಟಕ ರಾಜ್ಯದಲ್ಲಿನ ರೈತರ ಹಿತವನ್ನು ಕಾಪಾಡಲು ಮುಂದೆ ಬರಬೇಕು. ಇಲ್ಲದೆ ಇಲ್ಲದೆ ಹೋದರೆ, ಖುದ್ದು ಕೇಂದ್ರ ಸರ್ಕಾರ ಈ ರೈತರ ಆತ್ಮಹತ್ಯೆಗೆ ಕಾರಣ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಬ್ಬಿನ ಬೆಂಬಲ ಬೆಲೆಯದು ದುರಂತ ಕಥೆ: ಸಮರ್ಪಕವಾಗಿ ಪರಿಹಾರ ನೀಡದ ರಾಜ್ಯ ಸರ್ಕಾರ ರೈತರನ್ನು ತುಂಬಾ ಹೈರಾಣ ಮಾಡುತ್ತಿದೆ. ಒಂದೆಡೆ ಮುಂಗಾರು ಬೆಳೆಹಾನಿ ಪರಿಹಾರ ನೀಡದ ಸರ್ಕಾರ ಇನ್ನೊಂದೆಡೆ ಕಬ್ಬಿಗೂ ಕೂಡ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಲು ಕೂಟ ದುಸುಮುಸು ಮಾಡುತ್ತಿದೆ. ಇದರಿಂದಾಗಿ ಕಬ್ಬು ಬೆಳೆಗಾರರು ಕೂಡ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಕೂಡಲೇ ಎಫ್ ಆರ್ ಪಿ ಬೆಂಬಲ ಬೆಲೆಯನ್ನು ಈ ವರ್ಷದ ವಾರ್ಷಿಕ ಇಳುವರಿ ಆಧಾರದಲ್ಲಿ ಘೋಷಣೆ ಮಾಡಬೇಕು ಮತ್ತು ಹಿಂದಿನ ಸಿದ್ದರಾಮಯ್ಯ ಸರ್ಕಾರ ನೀಡಿದಂತೆ ಪ್ರೋತ್ಸಾಹ ಧನವೂ ನೀಡಬೇಕು ಇಲ್ಲದೆ ಪ್ರತಿಭಟನೆ ಅನಿವಾರ್ಯ ಎಂದರು.

ಈ ವೇಳೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ್ ಗುತ್ತೇದಾರ್, ಯುವ ಕಾಂಗ್ರೆಸ್ ನ ಈರಣ್ಣ ಝಳಕಿ, ರೇಣುಕಾ ಮೈತ್ರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next