Advertisement

ಬೃಹತ್‌ ಲಸಿಕೆ ಆಂದೋಲನ

12:55 AM Jan 05, 2021 | Team Udayavani |

ಹೊಸದಿಲ್ಲಿ: ಜಗತ್ತಿನಲ್ಲಿಯೇ ಬೃಹತ್‌ ಲಸಿಕಾ ಕಾರ್ಯಕ್ರಮ ಶೀಘ್ರದಲ್ಲಿಯೇ ಶುರುವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಮಾಪನ ಶಾಸ್ತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿಯವರು ದೇಶಿಯವಾಗಿಯೇ ಎರಡು ಲಸಿಕೆಗಳನ್ನು ಸಂಶೋಧಿಸಿರುವ ವಿಜ್ಞಾನಿಗಳನ್ನು ಅಭಿನಂದಿಸಲೇ ಬೇಕಾಗಿದೆ ಎಂದು ಹೇಳಿದ್ದಾರೆ. ಮೇಡ್‌ ಇನ್‌ ಇಂಡಿಯಾ ಉತ್ಪನ್ನಗಳು ಜಗತ್ತಿನಲ್ಲಿ ಮಾನ್ಯತೆ ಮತ್ತು ಬೇಡಿಕೆಯನ್ನು ಪಡೆದುಕೊಂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ್ಮನಿರ್ಭರ ಭಾರತದ ವ್ಯಾಪ್ತಿಯಲ್ಲಿ ಉತ್ತಮ ಉತ್ಪನ್ನಗಳನ್ನು ಸಿದ್ಧಪಡಿಸುವುದೇ ಆದ್ಯತೆಯಾಗಬೇಕು ಎಂದು ಹೇಳಿದ್ದಾರೆ.

Advertisement

“ನಾವು ಜಗತ್ತಿನಲ್ಲಿ ದೇಶದಲ್ಲಿ ಉತ್ಪಾದಿಸಿದ ಉತ್ಪನ್ನಗಳು ತುಂಬುವಂತೆ ಮಾಡುವುದರ ಜತೆಗೆ ಎಲ್ಲರ ಮನಸ್ಸನ್ನೂ ಗೆದ್ದುಕೊಳ್ಳಬೇಕು. ಈ ಮೂಲಕ ನಮ್ಮ ದೇಶದಲ್ಲಿ ಉತ್ಪಾದಿಸಿದ ವಸ್ತುಗಳು ಜಗತ್ತಿನ ಮೂಲೆ ಮೂಲೆಗೆ ತಲುಪುವಂತಾಗಬೇಕು’ ಎಂದು ಪ್ರತಿಪಾದಿಸಿದರು.

ವಿಜ್ಞಾನ, ತಂತ್ರಜ್ಞಾನ ಮತ್ತು ಕೈಗಾರಿಕೆಗಳ ನಡುವೆ ಸಮಾನ ಆದ್ಯತೆ ಇದ್ದಾಗ ಮಾತ್ರ ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ವೈಜ್ಞಾನಿ ಕವಾಗಿ ನಡೆದ ಸಂಶೋಧನೆ ತಂತ್ರಜ್ಞಾನ ಸೃಷ್ಟಿಗೆ ಕಾರಣವಾಗುತ್ತದೆ. ಇದ ರಿಂದಾಗಿ ಅದು ಕೈಗಾರಿಕೆಗಳಿಗೆ ನೆರವಾಗುತ್ತದೆ. ಹೀಗಾಗಿ ಇದೊಂದು ವೃತ್ತದಂತೆ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

6 ಕೋಟಿ ಲಸಿಕೆ ಆರ್ಡರ್‌: ಪ್ರತಿ ಡೋಸ್‌ಗೆ 200 ರೂ.ಗಳಂತೆ 6 ಕೋಟಿ ಲಸಿಕೆಗಳನ್ನು ಕೇಂದ್ರ ಸರಕಾರ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದಿಂದ ಖರೀದಿಸಲಿದೆ. ದೇಶದಲ್ಲಿ ಲಸಿಕೆ ನೀಡುವ ಮೊದಲ ಹಂತ ಆಗಸ್ಟ್‌ಗೆ ಮುಕ್ತಾಯವಾಗುವ ಸಾಧ್ಯತೆ ಇದೆ ಎಂದು ಸರಕಾರ ತಿಳಿಸಿದೆ. ಆರೋಗ್ಯ ಕಾರ್ಯಕರ್ತರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ನೀಡುವಷ್ಟು ಲಸಿಕೆ ದೇಶದಲ್ಲಿ ಇದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್‌ ಹೇಳಿದ್ದಾರೆ.

38 ಕೇಸು: ದೇಶದಲ್ಲಿ ಇದುವರೆಗೆ 38 ಯು.ಕೆ.ರೂಪಾಂತರದ ಕೊರೊನಾ ಸೋಂಕು ಪ್ರಕರಣ ದೃಢಪಟ್ಟಿದೆ. ಹೀಗೆಂದು ಕೇಂದ್ರ ಹೇಳಿದೆ. ಬೆಂಗಳೂರಿನ ಇನ್‌ಸ್ಟೆಮ್‌ (InSTEM), ನಿಮ್ಹಾನ್ಸ್‌ ಸೇರಿದಂತೆ ಹತ್ತು ಪ್ರಯೋಗಶಾಲೆಗಳಲ್ಲಿ ಸೋಂಕಿನ ವಂಶವಾಹಿಗಳ ಪ್ರಯೋಗ ನಡೆಸಲಾಗುತ್ತಿದೆ. ಇದುವರೆಗೆ ಯು.ಕೆ.ಯಿಂದ ದೇಶಕ್ಕೆ ಆಗಮಿಸಿದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿದೆ.

Advertisement

ವಾರದ ಸಮಯ ಕೊಡಿ: ಭಾರತ್‌ ಬಯೋಟೆಕ್‌
“ನಮ್ಮ ಲಸಿಕೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಲು ಒಂದು ವಾರದ ಸಮಯ ಕೊಡಿ. ನಮ್ಮದು ಜಾಗತಿಕ ಸಂಸ್ಥೆಯೇ ಆಗಿದೆ. ಹೀಗಾಗಿ, ನಮಗೆ ಅನುಭವ ಸಾಲದು ಎಂಬ ಧೋರಣೆ ಬೇಡ’

– ಹೀಗೆಂದು ಹೇಳಿದ್ದು ಕೊವ್ಯಾಕ್ಸಿನ್‌ ಲಸಿಕೆ ತಯಾರಿಸಿದ ಹೈದರಾಬಾದ್‌ನಲ್ಲಿರುವ ಭಾರತ್‌ ಬಯೋಟೆಕ್‌ನ ಅಧ್ಯಕ್ಷ ಕೃಷ್ಣ ಎಲ್ಲಾ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಂಪೆನಿ ಶೇ.200ರಷ್ಟು ಪ್ರಾಮಾಣಿಕವಾಗಿ ಪ್ರಯೋಗ ನಡೆಸಿದೆ. ನಾವು ಇದುವರೆಗೆ 16 ಲಸಿಕೆಗಳನ್ನು ಯಶಸ್ವಿಯಾಗಿ ಸಂಶೋಧನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಲಸಿಕೆಯ ಬಗ್ಗೆ ಎದ್ದಿರುವ ಟೀಕೆ, ಸಂಶಯಗಳಿಗೆ ಅವರು ವಸ್ತುಶಃ ಕಿಡಿಕಿಡಿಯಾಗಿದ್ದರು. ಯು.ಕೆ.ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಂಪೆನಿ ಪ್ರಯೋಗ ನಡೆಸುತ್ತಿದೆ. ಝೀಕಾ ವೈರಸ್‌ ಅನ್ನು ಮೊದಲು ಪತ್ತೆ ಹಚ್ಚಿದ್ದೇ ಭಾರತ್‌ ಬಯೋಟೆಕ್‌. ಜತೆಗೆ ಅದಕ್ಕಾಗಿ ಲಸಿಕೆಯನ್ನು ಸಂಶೋಧಿಸಿ, ಹಕ್ಕುಸ್ವಾಮ್ಯತೆಯನ್ನು ಪಡೆದುಕೊಂಡಿದ್ದೇವೆ. 123 ರಾಷ್ಟ್ರಗಳ ಸರಕಾರಗಳ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದೇವೆ. ಲಸಿಕೆ ಎಷ್ಟು ಪ್ರಮಾಣದಲ್ಲಿ ಪರಿಣಾಮ ಬೀರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ಒಂದು ವಾರದ ಸಮಯ ಕೊಡಿ’ ಎಂದು ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ವಾರ್ಷಿಕವಾಗಿ 70 ಕೋಟಿ ಲಸಿಕೆ ಉತ್ಪಾದಿಸುವ ನಾಲ್ಕು ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹೇಳಿದರು.

ಪಾಸಿಟಿವ್‌ ಪ್ರಮಾಣ ಶೇ.5.89ಕ್ಕೆ ಇಳಿಕೆ
ದೇಶದಲ್ಲಿ ಕೊರೊನಾ ಸೋಂಕಿನ ಪಾಸಿಟಿವ್‌ ಪ್ರಮಾಣ ಶೇ.5.89ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ರವಿವಾರದಿಂದ ಸೋಮವಾರದ ಅವಧಿಯಲ್ಲಿ 16,504 ಹೊಸ ಕೇಸುಗಳು ದೃಢಪಟ್ಟಿವೆ. ಈ ಮೂಲಕ ಸತತ ಮೂರನೇ ದಿನವೂ 20 ಸಾವಿರಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸೋಂಕುಗಳು ದೃಢಪಟ್ಟಿವೆ. ಡಿ.29ರಂದು ದಿನವಹಿ ಸೋಂಕಿನ ಪ್ರಕರಣ 16,432 ಎಂದು ದಾಖಲಾಗಿತ್ತು. ಇದೇ ವೇಳೆ, 24 ಗಂಟೆಗಳ ಅವಧಿಯಲ್ಲಿ 214 ಆಗಿದೆ. ಸಕ್ರಿಯ ಸೋಂಕಿನ ಪ್ರಕರಣ 2,43,953 ಆಗುವ ಮೂಲಕ, ಸತತ 14ನೇ ದಿನ 3 ಲಕ್ಷಕ್ಕಿಂತ ಕಡಿಮೆಯಷ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಇದೆ.

ಯು.ಕೆ.ಯಲ್ಲಿ ಫೈಜರ್‌ ಲಸಿಕೆ ನೀಡಿಕೆ
ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಫೈಜರ್‌ ಬಯಾನ್‌ಟೆಕ್‌ನ ಕೊರೊನಾ ಲಸಿಕೆಯನ್ನು ದೇಶವಾಸಿಗಳಿಗೆ ನೀಡಲು ಶುರು ಮಾಡಲಾಗಿದೆ. ಬ್ರಿಯಾನ್‌ ಪಿಂಕರ್‌ (82) ಎಂಬ ವ್ಯಕ್ತಿಗೆ ಮೊದಲ ಡೋಸ್‌ ಅನ್ನು ನೀಡಲಾಗಿದೆ. ಇದರಿಂದಾಗಿ ಜಗತ್ತಿನಲ್ಲಿಯೇ ಮೊದಲ ಬಾರಿಗೆ ಫೈಜರ್‌ ಲಸಿಕೆ ನೀಡಿದ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿದೆ. ಆಸ್ಪತ್ರೆಯೊಂದರಲ್ಲಿ ಲಸಿಕೆ ನೀಡುವ ಪ್ರಕ್ರಿಯೆಯನ್ನು ಬ್ರಿಟನ್‌ ಪ್ರಧಾನಿ ಬೋರೀಸ್‌ ಜಾನ್ಸನ್‌ ಖುದ್ದಾಗಿ ಇದ್ದು, ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next