Advertisement

ಬಿಪಿಎಲ್‌ ಕಾರ್ಡ್‌ದಾರ ಸರಕಾರಿ ನೌಕರರಿಗೆ ದಂಡ

01:03 AM Feb 01, 2022 | Team Udayavani |

ಕುಂದಾಪುರ: ಸರಕಾರಿ ನೌಕರಿ ಯಲ್ಲಿದ್ದೂ ಬಡತನ ರೇಖೆಗಿಂತ ಕೆಳಗಿನವರ ಸವಲತ್ತು ಪಡೆಯುತ್ತಿದ್ದವರಿಗೆ ಭಾರೀ ದಂಡ ಬೀಳುತ್ತಿದೆ. ಸರಕಾರಿ, ಅರೆ ಸರಕಾರಿ ನೌಕರರು ಬಿಪಿಎಲ್‌, ಅಂತ್ಯೋದಯ, ಆದ್ಯತೆ ಪಡಿತರ ಚೀಟಿ ಹೊಂದಿದ್ದರೆ ಪರಿಣಾಮವನ್ನು ಈಗ ಅನುಭವಿಸುತ್ತಿದ್ದಾರೆ.

Advertisement

ಬಿಪಿಎಲ್‌ ಕಾರ್ಡ್‌ ಹೊಂದಿದವರು ಸರಕಾರಿ, ಅರೆ ಸರಕಾರಿ ಹುದ್ದೆಗೆ ನೇಮಕ ಆದಲ್ಲಿ ಕಾರ್ಡನ್ನು ಎಪಿಎಲ್‌ಗೆ ಪರಿವರ್ತಿಸಿಕೊಳ್ಳಬೇಕು. ಹಾಗೆ ಮಾಡದೆ ವಂಚಿಸಿದವರ ಮಾಹಿತಿಯನ್ನು ಕಲೆಹಾಕ ಲಾ ಗಿದ್ದು, ಅವರ ಪಡಿತರ ಚೀಟಿಗಳನ್ನು ಅನರ್ಹಗೊಳಿಸು ವಂತೆ ಆದೇಶಿಸಲಾಗಿದೆ.

ರಾಜ್ಯದಲ್ಲಿ 19,105 ಮಂದಿ
ರಾಜ್ಯದಲ್ಲಿ 2,354 ಸರಕಾರಿ ನೌಕರರು ಅಂತ್ಯೋದಯ, 16,751 ನೌಕರರು ಅನ್ನ/ಆದ್ಯತೆ ಪಡಿತರ ಚೀಟಿ ಹೊಂದಿದ್ದಾರೆ. ದ.ಕ.ದಲ್ಲಿ 27 ಅಂತ್ಯೋದಯ (ಬಂಟ್ವಾಳ 3, ಬೆಳ್ತಂಗಡಿ 1, ಮಂಗಳೂರು 18, ಪುತ್ತೂರು 4, ಸುಳ್ಯ 1), 94 ಆದ್ಯತೆ ಕಾರ್ಡ್‌(ಬಂಟ್ವಾಳ 21, ಬೆಳ್ತಂಗಡಿ 9, ಮಂಗಳೂರು 42, ಪುತ್ತೂರು 18, ಸುಳ್ಯ 4), ಉಡುಪಿಯಲ್ಲಿ 39 ಅಂತ್ಯೋದಯ (ಬ್ರಹ್ಮಾವರ 10, ಬೈಂದೂರು 8, ಹೆಬ್ರಿ 4, ಕಾಪು 3, ಕಾರ್ಕಳ 4, ಕುಂದಾಪುರ 6, ಉಡುಪಿ 4), 137 ಆದ್ಯತೆ ಕಾರ್ಡ್‌ (ಬ್ರಹ್ಮಾವರ 32, ಬೈಂದೂರು 28, ಹೆಬ್ರಿ 5, ಕಾಪು 9, ಕಾರ್ಕಳ 12, ಕುಂದಾಪುರ 30, ಉಡುಪಿ 21), ಕೊಡಗಿನಲ್ಲಿ 18 ಅಂತ್ಯೋದಯ (ಮಡಿಕೇರಿ 0,ಸೋಮವಾರಪೇಟೆ 3, ವೀರಾಜಪೇಟೆ 15), 125 ಆದ್ಯತೆ ಕಾರ್ಡ್‌ (ಮಡಿಕೇರಿ 21, ಸೋಮವಾರಪೇಟೆ 72, ವೀರಾಜಪೇಟೆ 32) ಸರಕಾರಿ ನೌಕರರ ಬಳಿಯಿದೆ. ಬೆಳಗಾವಿಯಲ್ಲಿ ಅತೀ ಹೆಚ್ಚು,1,316, ಬೆಂಗಳೂರು ಪೂರ್ವದಲ್ಲಿ ಅತೀ ಕಡಿಮೆ ಸರಕಾರಿ ನೌಕರರು 62 ಬಿಪಿಎಲ್‌ ಪಡಿತರ ಕಾರ್ಡ್‌ ಗಳನ್ನು ಹೊಂದಿದ್ದಾರೆ.

ದಂಡ
ಅರ್ಹವಲ್ಲದ ಕಾರ್ಡ್‌ ಹೊಂದಿರುವ ಸರಕಾರಿನೌಕರರಿಗೆ ದಂಡ ವಿಧಿಸಲಾಗುತ್ತಿದೆ. ಕುಂದಾಪುರದಲ್ಲಿ ಒಬ್ಬರಿಗೆ ಗರಿಷ್ಠ 56 ಸಾವಿರ ರೂ., ಒಬ್ಬರಿಗೆ 35 ಸಾವಿರ ರೂ., ಒಬ್ಬರಿಗೆ 28 ಸಾವಿರ ರೂ., ಒಬ್ಬರಿಗೆ 27 ಸಾವಿರ ರೂ. ದಂಡ ಹಾಕಲಾಗಿದೆ. ದಂಡದ ಮಾಹಿತಿ ಸರಕಾರಕ್ಕೆ ನೀಡಿದ ಕೂಡಲೇ ವೇತನ ದಿಂದ ಮಾಸಿಕ ಕಂತುಗಳಲ್ಲಿ ಕಡಿತವಾಗಲಿದೆ.

ಅಂತ್ಯೋದಯ ರದ್ದು
ಈಗ ಅಂತ್ಯೋದಯ ಪಡಿತರ ಚೀಟಿ ರದ್ದಾಗಿದ್ದು, ಪಿಎಚ್‌ಎಚ್‌ (ಪ್ರಯಾರಿಟಿ ಹೌಸ್‌ ಹೋಲ್ಡ್‌) ಆದ್ಯತೆ ಪಡಿತರ ಚೀಟಿ ಎಂದು ನೀಡಲಾಗುತ್ತಿದೆ. 1.2 ಲಕ್ಷ ರೂ. ವಾರ್ಷಿಕ ಆದಾಯ ಮಿತಿ. ಅಕ್ಕಿ ಬೇಕು ಎಂದು ನೋಂದಣಿ ಮಾಡಿದವರಿಗೆ ಒಬ್ಬ ವ್ಯಕ್ತಿಗೆ 5 ಕೆ.ಜಿ.ಯಂತೆ ಇಬ್ಬರಿಗೆ ಒಟ್ಟು 10 ಕೆ.ಜಿ.ಯಂತೆ ಗರಿಷ್ಠ ಪ್ರಮಾಣದಲ್ಲಿ ಕೆ.ಜಿ.ಗೆ 15 ರೂ.ಗಳಂತೆ ಎಪಿಎಲ್‌ನವರಿಗೆ ಕೂಡ ಪಡಿತರ ಅಕ್ಕಿ ಪಡೆಯುವ ಅವಕಾಶ ಇದೆ.

Advertisement

ಯಾರಿಗಿಲ್ಲ ?
ಎಲ್ಲ ಖಾಯಂ ನೌಕರರು, ಸರಕಾರ ಅಥವಾ ಸರಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರಕಾರಿ ಪ್ರಾಯೋಜಿತ, ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿಗಳ ನೌಕರರು ಅಂತ್ಯೋದಯ ಅನ್ನ ಮತ್ತು ಆದ್ಯತೆ ಪಡಿತರ ಚೀಟಿ ಹೊಂದಲು ಅರ್ಹರಲ್ಲ.

ಸರಕಾರದ ಪಟ್ಟಿ ಪ್ರಕಾರ ಬಿಪಿಎಲ್‌ ಕಾರ್ಡ್‌ ಹೊಂದಿರುವ ನೌಕರರಿಗೆ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರು ಕೂಡ ಅರ್ಹತೆ, ಮಾನದಂಡ ಮೀರಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಮರಳಿಸಬೇಕು. ಇಲ್ಲದಿದ್ದರೆ ಭಾರೀ ಪ್ರಮಾಣದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಅಂಥವರ ಪತ್ತೆ ಕಾರ್ಯ ನಡೆಯುತ್ತಿದೆ.
– ಮಧುಸೂದನ, ಜಂಟಿ ನಿರ್ದೇಶಕರು ಆಹಾರ, ನಾಗರಿಕ ಪೂರೈಕೆ ಇಲಾಖೆ ದ.ಕ.
– ಸುರೇಶ್‌, ಆಹಾರ ನಿರೀಕ್ಷಕರು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next