ಸಿರುಗುಪ್ಪ: ತಾಲೂಕಿನ ಸಿರಿಗೇರಿ, ಇಟಿಗಿಹಾಳ್, ಸಿದ್ದರಾಮಪುರ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಉಪ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದು ಇಲ್ಲಿವರೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
2020ರ ಡಿಸೆಂಬರ್ 22ರಂದು ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಮೂರು ಗ್ರಾಮಗಳ ಗ್ರಾಮಸ್ಥರು ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಆದರೆ ಗ್ರಾಮಸ್ಥರ ಬೇಡಿಕೆಗಳು ಈಡೇರಿಲ್ಲ. ಆದರೂ ಚುನಾವಣಾ ಆಯೋಗವು ಮಾ. 29ರಂದು ಸಿರಿಗೇರಿಯ 31 ಸ್ಥಾನ, ಸಿದ್ದರಾಮಪುರ ಗ್ರಾಮದ 1 ಸ್ಥಾನ, ಇಟಿಗಿಹಾಳು ಗ್ರಾಮದ 2 ಸ್ಥಾನಗಳಿಗೆ ಉಪ ಚುನಾವಣೆ ನಡೆಸುವಂತೆ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಹೊರಡಿಸಿ ಮೂರು ದಿನವಾದರೂ ಯಾವುದೇ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ.
ಇಟಿಗಿಹಾಳು ಗ್ರಾಮಸ್ಥರು ತಮ್ಮ ಗ್ರಾಮದಲ್ಲಿರುವ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು, ಸಿರಿಗೇರಿ, ಸಿದ್ದರಾಮಪುರ ಗ್ರಾಮಸ್ಥರು ತಮ್ಮ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಒತ್ತಾಯಿಸಿ ಗ್ರಾಪಂನ ಉಪ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ತಾಲೂಕಿನ ಬಿ.ಎಂ. ಸೂಗೂರು ಗ್ರಾಪಂನ ವ್ಯಾಪ್ತಿಗೆ ಬರುವ ಇಟಗಿಹಾಳ್ ಗ್ರಾಮದಲ್ಲಿ ಎರಡು ಸದಸ್ಯ ಸ್ಥಾನಗಳಿದ್ದು, ಎರಡೂ ಸ್ಥಾನಗಳಿಗೆ ಗ್ರಾಮಸ್ಥರು ನಾಮಪತ್ರ ಸಲ್ಲಿಸಿಲ್ಲ. ಸಿರಿಗೇರಿ ಗ್ರಾಮ ಪಂಚಾಯತಿಯಲ್ಲಿ 31 ಸದಸ್ಯರಿದ್ದು ಯಾವ ಸದಸ್ಯ ಸ್ಥಾನಕ್ಕೂ ನಾಮಪತ್ರ ಸಲ್ಲಿಸಿಲ್ಲ. ಅಲ್ಲದೆ ಸಿದ್ದರಾಮಪುರದ ಒಂದು ಸ್ಥಾನ ಸೇರಿ ಒಟ್ಟು 34 ಸ್ಥಾನಗಳಿಗೆ ಮಾ. 29ರಂದು ಉಪಚುನಾವಣೆ ನಡೆಯಲಿದ್ದು, ಇಲ್ಲಿಯವರೆಗೆ ಈ ಮೂರು ಗ್ರಾಮಗಳ ಗ್ರಾಮಸ್ಥರು ಮಾತ್ರ ತಮ್ಮ ಬೇಡಿಕೆಗಳು ಈಡೇರದಿರುವುದರಿಂದಾಗಿ ನಾಮಪತ್ರ ಸಲ್ಲಿಕೆಯ ಕಾರ್ಯ ಆರಂಭವಾಗಿ ಮೂರು ದಿನಗಳಾದರೂ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಇಟಗಿಹಾಳು ಗ್ರಾಮಸ್ಥರು ಕಳೆದ ಹತ್ತು ತಿಂಗಳಿನಿಂದ ತಮ್ಮ ಗ್ರಾಮದಲ್ಲಿರುವ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರೂ ಮದ್ಯದಂಗಡಿ ತೆರವಿಗೆ ಮುಂದಾಗದೇ ಇರುವುದರಿಂದಾಗಿ ಗ್ರಾಮಸ್ಥರು ಸೇರಿ ಒಮ್ಮತದಿಂದ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದು, ಇಲ್ಲಿಯೂ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ತಾಲೂಕಿನ ಸಿರಿಗೇರಿ ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದಜೆಗೇರಲು ಎಲ್ಲ ಅರ್ಹತೆ ಇದ್ದರೂ ಸುಮಾರು ಎಂಟು ವರ್ಷದ ಹಿಂದೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕಳೆದ ಮೂರು ತಿಂಗಳ ಹಿಂದೆ ಗ್ರಾಮಸ್ಥರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಮಾಡಿ ತಮ್ಮ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಒತ್ತಾಯಿಸಿದ್ದರು.
ಇಲ್ಲಿಯವರೆಗೆ ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಇದರಿಂದಾಗಿ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಭೆ ನಡೆಸಿದ್ದಾರೆ.
ಆರ್.ಬಸವರೆಡ್ಡಿ ಕರೂರು