Advertisement

ಚಿತ್ತಾಪುರದ ಯುವಕ ಧಾರವಾಡದಲ್ಲಿ ನಿಗೂಢ ಕಣ್ಮರೆ: 40 ದಿನ ಕಳೆದರೂ ಸುಳಿವಿಲ್ಲ

07:36 PM Sep 12, 2022 | Team Udayavani |

ವಾಡಿ (ಚಿತ್ತಾಪುರ): ಪೊಲೀಸ್ ಹುದ್ದೆಗೇರುವ ಕನಸು ಕಟ್ಟಿಕೊಂಡು ಧಾರವಾಡ ನಗರದ ಕೋಚಿಂಗ್ ಸೆಂಟರ್ ಸೇರಿಕೊಂಡಿದ್ದ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಯುವಕನೋರ್ವ ನಿಗೂಢ ನಾಪತ್ತೆಯಾಗಿದ್ದು, ಕಳೆದ 40 ದಿನಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರೂ ಆತನ ಸುಳಿವು ಪತ್ತೆಯಾಗಿಲ್ಲ.

Advertisement

ಕಾಗಿಣಾ ನದಿ ತೀರದ ಇಂಗಳಗಿ ಗ್ರಾಮದ ನಿವಾಸಿ ಸಾಬಣ್ಣ ಭಜಂತ್ರಿ (25) ಪೊಲೀಸ್ ಹುದ್ದೆಯ ಪರೀಕ್ಷೆ ಬರೆಯಲು ನಾಲ್ಕು ತಿಂಗಳ ಹಿಂದೆ ಧಾರವಾಡ ನಗರದ ಗುರುದೇವ ಕೋಚಿಂಗ್ ಕೇಂದ್ರ ಸೇರಿಕೊಂಡಿದ್ದ ಎನ್ನಲಾಗಿದ್ದು, ಸಹಪಾಠಿ ಗೆಳೆಯರೊಂದಿಗೆ ಕೂಡಿಕೊಂಡು ಬಾಡಿಗೆ ಕೋಣೆ ಪಡೆದಿದ್ದರು.  ಜುಲೈ 29 ರಂದು ರಾತ್ರಿ 10:30 ರ ಸುಮಾರಿಗೆ ಧಾರವಾಡ ನಗರದಲ್ಲಿ ಗೆಳೆಯರೊಂದಿಗೆ ಸುತ್ತಿದ್ದಾಗ ಮೂತ್ರ ವಿಸರ್ಜನೆಗೆಂದು ಹೋದ ಸಾಬಣ್ಣ ನಿಗೂಢವಾಗಿ ಕಣ್ಮರೆಯಾಗಿದ್ದಾನೆ.

ಮಗ ಕಾಣೆಯಾಗಿರುವ ಕುರಿತು ಧಾರವಾಡ ನಗರ ಪೊಲೀಸರಿಗೆ ವಿದ್ಯಾರ್ಥಿ ಸಾಬಣ್ಣನ ತಂದೆ ಮರಿಯಪ್ಪ ಭಜಂತ್ರಿ ಅವರು ನೀಡಿದ ದೂರಿನ ಮೇರೆಗೆ ಧಾರವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಯುವಕನ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.

ಇದನ್ನೂ ಓದಿ:  ಮತ್ತೆ ಸೌತ್‌ ನತ್ತ ʼಅಧೀರʼ: ಹೊಸ ಸಿನಿಮಾಕ್ಕಾಗಿ 10 ಕೋಟಿ ರೂ. ಪಡೆಯಲಿದ್ದಾರೆ ಸಂಜಯ್‌ ದತ್

ಮಗ ಕಾಣೆಯಾಗಿ ನಲವತ್ತು ದಿನಗಳು ಕಳೆದರೂ ಆತ ಸುಳಿವು ಸಿಗುತ್ತಿಲ್ಲ ಎಂದು ಪೋಷಕರು ಗೋಳಾಡುತ್ತಿದ್ದಾರೆ. ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ ಜಾಲ ಬಗೆದಷ್ಟು ಬಯಲಾಗುತ್ತಿರುವ ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯ ಕನಸು ಕಟ್ಟಿಕೊಂಡು ಪರೀಕ್ಷಾ ತರಬೇತಿ ಪಡೆಯಲು ದೂರದ ನಗರಕ್ಕೆ ಹೋದ ಇಂಗಳಗಿ ಯುವಕನ ಕಣ್ಮರೆ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

Advertisement

“ಬಡತನದಲ್ಲಿ ಬೆಳೆದ ಗ್ರಾಮೀಣ ವಿದ್ಯಾರ್ಥಿಯೊಬ್ಬ ಪೊಲೀಸ್ ತರಬೇತಿ ಪರೀಕ್ಷೆ ಎದುರಿಸಲು ಅಧ್ಯಯನಕ್ಕೆ ಮುಂದಾಗಿ ಹೀಗೆ ನಾಪತ್ತೆಯಾಗಿರುವುದು ಆಶ್ಚರ್ಯ ಮತ್ತು ಆತಂಕ ಮೂಡಿಸಿದೆ. ಕೂಲಿಕಾರ ಕುಟುಂಬದ ಸಾಬಣ್ಣನ ನೌಕರಿ ಕನಸು ಈಡೇರುವ ಮೊದಲೇ ಅವರ ಬದುಕಿನ ಮೇಲೆ ಕಾರ್ಮೋಡ ಕವಿದಿದೆ. ಈ ಕುರಿತು ಧಾರವಾಡ ಪೊಲೀಸರೊಂದಿಗೆ ಮಾತನಾಡಿದ್ದೇನೆ. ಯುವನನ್ನು ಆದಷ್ಟು ಬೇಗ ಪತ್ತೆ ಹಚ್ಚಲು ಮನವಿ ಮಾಡಿದ್ದೇನೆ. ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ತನಿಖೆ ಮತ್ತಷ್ಟು ಚುರುಕಾಗಬೇಕು. ಕಾಣೆಯಾದ ಯುವಕ ಪೋಷಕರ ಮಡಿಲು ಸೇರಬೇಕು.” -ಜಗದೀಶ ಜಾಧವ. ಅಧ್ಯಕ್ಷರು, ಕೊರವ ಸಮಾಜ ವಾಡಿ.

Advertisement

Udayavani is now on Telegram. Click here to join our channel and stay updated with the latest news.

Next