ಕೊರಟಗೆರೆ: ತಾಯಿಯ ಮಾತನ್ನು ಕೇಳದೇ ವೀರನಾಗಮ್ಮ ದೇವಾಲಯದ ಕಲ್ಯಾಣಿಯಲ್ಲಿ ಈಜಾಡಲು ತೆರಳಿದ ಲಕ್ಕೇನಹಳ್ಳಿ ಗ್ರಾಮದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆ ಗ್ರಾಮದ ಶ್ರೀವೀರನಾಗಮ್ಮ ದೇವಾಲಯದ ಕಲ್ಯಾಣಿಯಲ್ಲಿ ದುರ್ಘಟನೆ ನಡೆದಿದೆ. ಗಂಗಾಪೂಜೆ ಮುಗಿಸಿಕೊಂಡು ದೇವಾಲಯಕ್ಕೆ ಹಿಂದಿರುಗುವಾಗ ದುರ್ಘಟನೆ ಜರುಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ವೀರನಾಗಪ್ಪನ ಮಗನಾದ ತರುಣ್(14) ಮೃತಪಟ್ಟ ದುರ್ದೈವಿ. ತನ್ನ ತಾಯಿಯ ಜೊತೆಯಲ್ಲಿ ವೀರನಾಗಮ್ಮ ದೇವಿಯ ದರ್ಶನಕ್ಕೆ ಬಂದ ವೇಳೆ ಘಟನೆ ನಡೆದಿದೆ.
ಕಲ್ಯಾಣಿಯಲ್ಲಿ ಮುಳುಗಿದ್ದ ಬಾಲಕನ ಮೃತ ದೇಹವನ್ನು ಅಗ್ನಿಶಾಮಕ ದಳದ ತಂಡ ಹೊರಗಡೆ ತೆಗೆದಿದ್ದಾರೆ. ಸ್ಥಳಕ್ಕೆ ಕೊರಟಗೆರೆ ತಹಶೀಲ್ದಾರ್ ನಾಹೀದಾ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.