Advertisement
ವಿಧಾನಸಭೆಯಲ್ಲಿ ಕಲಾಪ ಆರಂಭಕ್ಕೆ ಮುನ್ನ ಸ್ಪೀಕರ್ ಕೊಠಡಿಗೆ ತೆರಳಿದ್ದ ಬಿಜೆಪಿ ಸದಸ್ಯರು, ಡೈರಿ ಪ್ರಕರಣದ ಕುರಿತು ನಿಲುವಳಿ ಸೂಚನೆ ಪ್ರಸ್ತಾವ ಮಂಡಿಸಲು ಕೋರಿಕೆ ಸಲ್ಲಿಸಿದ್ದರು. ಆದರೆ, ಇದಕ್ಕೆ ನಿರಾಕರಿಸಿದ್ದ ಸ್ಪೀಕರ್, ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಲಿಖೀತವಾಗಿ ತಿಳಿಸಿದ್ದರು. ಅನಂತರ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಷಯ ಪ್ರಸ್ತಾವಿಸಲು ಮುಂದಾದಾಗ, ಪ್ರಶ್ನೋತ್ತರ ಅವಧಿಯ ಅನಂತರ ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದರು.
Related Articles
Advertisement
ಈ ಮಧ್ಯೆ ಸ್ಪೀಕರ್ ಕೊಠಡಿಯಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರ ಸಭೆ ನಡೆಯಿತಾದರೂ ಸಂಧಾನ ಏರ್ಪಡಲಿಲ್ಲ. ಹೀಗಾಗಿ ಭೋಜನಾನಂತರ ಕಲಾಪ ಆರಂಭವಾದಾಗಲೂ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು.
ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡೈರಿ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ನೀಡಬಾರದು ಎಂದು ಹೇಳಿದರಲ್ಲದೆ, ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿರುವ ಸಹರಾ ಡೈರಿ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಮತ್ತೆ ಮಾತಿನ ಚಕಮಕಿ ಆರಂಭವಾಯಿತು.
ಸ್ಪೀಕರ್ ಚರ್ಚೆಗೆ ಅವಕಾಶ ನೀಡಿ ಬಳಿಕ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಅನುಮತಿ ವಾಪಸ್ ಪಡೆದಿದ್ದರಿಂದ ಸದಸ್ಯರ ಹಕ್ಕುಚ್ಯುತಿಯಾಗಿದೆ ಎಂದಾಗ ಸಿಟ್ಟುಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನ ಮರ್ಯಾದೆ ಇದೆಯೇನ್ರಿ ನಿಮಗೆ. ಲೆಹರ್ ಸಿಂಗ್ ಡೈರಿಯಲ್ಲಿ ಬಿಜೆಪಿ ಮುಖಂಡರಿಗೆ ಹಣ ನೀಡಿರುವ ಬಗ್ಗೆ ಪ್ರಸ್ತಾವವಿದ್ದು, ಆ ಬಗ್ಗೆಯೂ ಚರ್ಚಿಸಿ ಎಂದು ಹೇಳಿದರು. ಎರಡು ಡೈರಿಗಳ ಬಗ್ಗೆ ಚರ್ಚೆಯಾಗಲಿ ಮತ್ತು ಸಿಬಿಐ ತನಿಖೆಯೂ ಆಗಲಿ ಎಂದು ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು.
ಧರಣಿನಿರತರನ್ನು ಸಮಾಧಾನಪಡಿಸಲು ಸಭಾಧ್ಯ ಕ್ಷರ ಪೀಠದಲ್ಲಿದ್ದ ಉಪಾಧ್ಯಕ್ಷ ಎನ್.ಎಚ್. ಶಿವಶಂಕರ ರೆಡ್ಡಿ ಸಾಕಷ್ಟು ಪ್ರಯತ್ನ ಮಾಡಿದರಾದರೂ ಪ್ರಯೋಜನ ವಾಗದೇ ಇದ್ದುದರಿಂದ ಕಲಾಪವನ್ನು ಮುಂದೂಡಿದರು.
ವಿಧಾನಪರಿಷತ್ ಮೇಲ್ಮನೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಯವರು ಪ್ರಶ್ನೋತ್ತರ ಕೈಗೆತ್ತಿಕೊಳ್ಳಲು ಮುಂದಾಗುತ್ತಿದ್ದಂತೆ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರು ಡೈರಿ ಪ್ರಕರಣದ ಕುರಿತು ನಿಲುವಳಿ ಸೂಚನೆ ಪ್ರಸ್ತಾವ ಮಂಡಿಸಿದರು. ಆದರೆ, ಸಭಾಪತಿಗಳು ಅವಕಾಶ ನಿರಾಕರಿಸಿದ್ದರಿಂದ ಬಿಜೆಪಿ ಸದಸ್ಯರು ಅಸಮಾಧಾನಗೊಂಡು ಚರ್ಚೆಗೆ ಅವಕಾಶ ನೀಡುವಂತೆ ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಆಡಳಿತ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಗದ್ದಲ ನಿರ್ಮಾಣವಾಯಿತು.
ಗದ್ದಲದ ಮಧ್ಯೆಯೇ ಮಾತು ಮುಂದುವರಿಸಿದ ಈಶ್ವರಪ್ಪ, ಡೈರಿ ಪ್ರಕರಣದ ಕುರಿತು ಸಿಬಿಐ ತನಿಖೆಯಾದರೆ ಅನೇಕ ಸಚಿವರು, ಶಾಸಕರು ಜೈಲಿಗೆ ಹೋಗಲಿದ್ದಾರೆ ಎಂದಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರದಲ್ಲಿದ್ದಾಗಲೇ ಮಾಡಬಾರದ ಕೆಲಸ ಮಾಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದವರು ನೀವು. ನಮ್ಮ ಬಗ್ಗೆ ಮಾತನಾಡಲು ನಿಮಗೇನು ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದ್ದರಿಂದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಅನಂತರ ಸಭಾಪತಿಗಳು ಪ್ರಶ್ನೋತ್ತರ ಆರಂಭಿಸಿದಾಗ ಬಿಜೆಪಿ ಸದಸ್ಯರು ಕಲಾಪದಲ್ಲಿ ಸೇರಿಕೊಂಡರು. ಬಿಜೆಪಿ ಸದಸ್ಯರು ಮಂಡಿಸಿದ್ದ ನಿಲುವಳಿ ಸೂಚನೆ ಪ್ರಸ್ತಾಪವನ್ನು ಸಭಾಪತಿ ಡಿ.ಎಚ್. ಶಂಕರಮೂರ್ತಿ ತಿರಸ್ಕರಿಸಿದ್ದರಿಂದ ಸದಸ್ಯರು ಸಭಾತ್ಯಾಗ ಮಾಡಿದರು.
ಧರಣಿ ಅಂತ್ಯಗೊಳಿಸಿ ಕಲಾಪ ನಡೆಯಲು ಅವಕಾಶ ಡೈರಿ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಧರಣಿ ಆರಂಭಿಸಿರುವ ಬಿಜೆಪಿ ಸದಸ್ಯರು ಶುಕ್ರವಾರ ಧರಣಿ ಹಿಂಪಡೆದು ಕಲಾಪ ಮುಂದುವರಿಸಲು ಅವಕಾಶ ನೀಡುವ ಸಾಧ್ಯತೆ ಇದೆ. ಚರ್ಚೆಗೆ ಅವಕಾಶ ನೀಡುವವರೆಗೆ ಧರಣಿ ವಾಪಸ್ ಪಡೆಯುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದೇವೆ. ಆದರೆ, ಬಜೆಟ್ ಲೇಖಾನುದಾನದ ಮೇಲಿನ ಚರ್ಚೆ ಜತೆಗೆ ಬರಗಾಲ ಮತ್ತಿತರ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಿರುವುದರಿಂದ ಶುಕ್ರವಾರ ಬೆಳಗ್ಗೆ ಧರಣಿ ಹಿಂಪಡೆಯಲಿದ್ದಾರೆ ಎಂದು ಹೇಳಲಾಗಿದೆ.