Advertisement

ವೀರಯೋಧನ ಮಕ್ಕಳಿಬ್ಬರೂ ದೇಶಸೇವೆಯಲ್ಲಿ…

11:22 AM Jul 23, 2022 | Team Udayavani |

ಭಾರತ ಇರುವವರೆಗೆ ಕಾರ್ಗಿಲ್‌ ಯುದ್ಧದ ವಿಜಯವೂ (ಜು. 26 ವಿಜಯ ದಿನ), ವಿಜಯದಲ್ಲಿ ವೀರಾವೇಷದಲ್ಲಿ ಹೋರಾಡಿ ಜಯ ದೊರಕಿಸಿಕೊಟ್ಟ ಸೈನಿಕರೂ ಅಜರಾಮರ.

Advertisement

ದೇಶಕ್ಕೆ ಗೆಲುವು ತಂದುಕೊಟ್ಟರೂ ಅಸುನೀಗಿದ ಉಡುಪಿಯ ಕುವರನೂ ಅಜರಾಮರರಲ್ಲಿ ಒಬ್ಬ. ಇವರೇ ಉಡುಪಿ ಕುಂಜಿಬೆಟ್ಟು ಮೂಲದ ವಾಸುದೇವ ಭಂಡಾರ್‌ಕರ್‌ ಪುತ್ರ ಅಜಿತ್‌ ವಿ. ಭಂಡಾರ್‌ಕರ್‌.

ಲೆಫ್ಟಿನೆಂಟ್‌ ಕರ್ನಲ್‌ ಸ್ಥಾನದವರೆಗೆ ಏರಿದ್ದ ಅಜಿತ್‌ ಶಾಲಾವಧಿಯಲ್ಲೇ ಸೇನೆಗೆ ಸೇರಬೇಕೆಂಬ ಇರಾದೆಯಿಂದ ವಿಜಯಪುರದ ಸೈನಿಕ ಶಾಲೆಯಲ್ಲಿ ತರಬೇತಿ ಪಡೆದವರು. ಶಿವಾಜಿಗೆ ಜೀಜಾಬಾಯಿ ಪ್ರೇರಣೆಯಾದಂತೆ, ಅಜಿತರ ಅಪೇಕ್ಷೆಯನ್ನು ಹಿಂದಕ್ಕೆ ತಳ್ಳದೆ ಪ್ರೋತ್ಸಾಹ ನೀಡಿದವರು ತಾಯಿ ಶಕುಂತಳಾ. ಇವರ ಹಿರಿಯ ಮಗ ಅರುಣ್‌ ಅವರೂ ಸೇನೆಗೆ ಸೇರಿ ಕರ್ನಲ್‌ ಹುದ್ದೆಯಲ್ಲಿ ನಿವೃತ್ತರಾದವರು.

1981ರ ಡಿಸೆಂಬರ್‌ನಲ್ಲಿ ಮದ್ರಾಸ್‌-ಮೈಸೂರು ರೆಜಿಮೆಂಟ್‌ಗೆ ಸೇರ್ಪಡೆಯಾದ ಅಜಿತ್‌ 1999ರ ವರೆಗೆ ದೇಶದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. ಕಾರ್ಗಿಲ್‌ ಕಾರ್ಯಾಚರಣೆಯಲ್ಲಿ ಅಜಿತ್‌ ಅಸುನೀಗುವಾಗ ಮಕ್ಕಳಾದ ನಿರ್ಭಯನಿಗೆ 7 ವರ್ಷ, ಅಕ್ಷಯನಿಗೆ 5 ವರ್ಷ. ತಂದೆಯ ಕಳೇಬರ ಗೌರವಪೂರ್ಣವಾಗಿ ಬರುವಾಗ ಏನೊಂದೂ ಅರಿಯದ ಮುಗ್ಧ ಮಕ್ಕಳು ಮುಂದೆ ತಂದೆಯ ಕ್ಷೇತ್ರವನ್ನೇ ಆಯ್ಕೆಮಾಡಿಕೊಂಡರು. ನಿರ್ಭಯರಿಗಂತೂ ತಂದೆಯ ರೆಜಿಮೆಂಟ್‌ನಲ್ಲಿಯೇ (ಮದ್ರಾಸ್‌ ಮೈಸೂರು ರೆಜಿಮೆಂಟ್‌) ಕೆಲಸ ಸಿಕ್ಕಿದ್ದು ಆಕಸ್ಮಿಕ. ಸೇನೆಯಲ್ಲಿ ಸಹಾನುಭೂತಿ, ರಿಯಾಯಿತಿಗಳಿಲ್ಲ. ಎಲ್ಲ ಅರ್ಹತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಯಾವ ರೆಜಿಮೆಂಟ್‌ ಬೇಕು ಎಂದು ಅಧಿಕಾರಿಗಳು ಕೇಳುತ್ತಾರೆ. ಈ ಬೇಡಿಕೆಯನ್ನು ಮನ್ನಿಸಬೇಕೆಂದಿಲ್ಲ. ನಿರ್ಭಯ ತಂದೆಯ ರೆಜಿಮೆಂಟ್‌ ಕೇಳಿದರು. ಅವಕಾಶಗಳಿದ್ದ ಕಾರಣ ಅದೇ ರೆಜಿಮೆಂಟ್‌ ಸಿಕ್ಕಿತು. ಅಜಿತ್‌ ಭಂಡಾರ್‌ಕರ್‌ ಅವರ ಪತ್ನಿ ಶಕುಂತಳಾ ಅವರಲ್ಲಿ, “ನಿಮ್ಮ ಮಗನನ್ನು ಏಕೆ ಸೇನೆಗೆ ಸೇರಿಸಿದಿರಿ?’ ಎಂದು ಕೆಲವರು ಪ್ರಶ್ನಿಸುವುದುಂಟು. “ನಾನು ಕಳುಹಿಸಿದ್ದಲ್ಲ, ಅವರೇ ತಂದೆಯ ವೃತ್ತಿಯನ್ನು ಆಯ್ದುಕೊಂಡರು’ಎಂದು ಹೇಳುತ್ತಾರೆ. ಅಕ್ಷಯ ನೌಕಾ ಪಡೆಯಲ್ಲಿ (ಮುಂಬಯಿ) ಲೆಫ್ಟಿನೆಂಟ್‌ ಕರ್ನಲ್‌, ನಿರ್ಭಯ ಈಗ ದಿಲ್ಲಿಯಲ್ಲಿ ಮೇಜರ್‌.

ಪತ್ನಿ ಶಕುಂತಳಾ (ಅತ್ತೆಯ ಹೆಸರೂ ಇದಾದ ಕಾರಣ ನಮ್ರತಾ ಎಂದು ಹೆಸರಿಟ್ಟಿದ್ದರು) ಅವರ ತಂದೆ ಮಂಜೇಶ್ವರ ಮೋಹನ ಕಾಮತ್‌ ಮೂಲತಃ ಮಂಗಳೂರಿನವರು. ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದು, ಚೆನ್ನೈಯಲ್ಲಿ ನೆಲೆ ಕಂಡವರು. 30 ವರ್ಷ ಕಾಲ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಅನುಭವ ಹೊಂದಿದ ಶಕುಂತಳಾ ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿದ್ದು ಮೆಟಮೊರ್‌ಫೊಸ್‌ ಫೌಂಡೇಶನ್‌ ಮೂಲಕ ರಾಷ್ಟ್ರೀಯತೆ, ದೇಶಭಕ್ತಿ, ರಕ್ಷಣ ಪಡೆಗಳ ಕುರಿತಾದ ಮಾಹಿತಿ ಒದಗಿಸುವ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಸಮಾಜವನ್ನು ರೂಪಿಸುವ ಗುರಿಯನ್ನು ಪ್ರತಿಷ್ಠಾನವು ಹೊಂದಿದೆ. ಸೇನೆಯ ಜತೆ ರಾಷ್ಟ್ರೀಯತೆ, ದೇಶಭಕ್ತಿ ಬಗೆಗೆ ಜಾಗೃತಿ ಮೂಡಿಸುವುದು ಇದರ ಮೊದಲ ಗುರಿ. ದೇಶಭಕ್ತಿ ಎನ್ನುವುದು ಆಗಸ್ಟ್‌ 15, ಜನವರಿ 26ಕ್ಕೆ ಮಾತ್ರವಲ್ಲ; ನಿತ್ಯ ಜೀವನದಲ್ಲಿ ವಿದ್ಯುತ್‌ ಪೋಲು ಮಾಡದೆ ಇರುವುದು, ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡುವುದೂ ಸೇರಿದಂತೆ ಸಣ್ಣಪುಟ್ಟ ಕೆಲಸಗಳಲ್ಲಿಯೂ ದೇಶಸೇವೆ ಮಾಡಬಹುದು ಎಂಬ ಸಂದೇಶ ನೀಡುತ್ತಿದ್ದಾರೆ.

Advertisement

ಅಜಿತ್‌ ಹೆಸರಿನಲ್ಲಿ ಬಹುಮುಖ ಪ್ರತಿಭೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ರಕ್ಷಣ ಇಲಾಖೆ ನಿರ್ವಹಣೆ ಕುರಿತು ನಿವೃತ್ತ ಹಿರಿಯ ಸೇನಾಧಿಕಾರಿಗಳ ಸಹಕಾರದಿಂದ ಪಠ್ಯಪುಸ್ತಕವನ್ನು ರೂಪಿಸಿದ್ದು, ಈ ಕುರಿತು ಕೋರ್ಸ್‌ ಆರಂಭಿಸುವ ಚಿಂತನೆ ಇದೆ. ಅಜಿತ್‌ ಅವರು ಎಲ್ಲೆಲ್ಲಿ ಸೇವೆ ಸಲ್ಲಿಸಿದ್ದಾರೋ ಅಲ್ಲಿಗೆ ತೆರಳಿ ಅಲ್ಲಿನ ಸ್ಥಿತಿಗತಿಯನ್ನು ಸೆರೆಹಿಡಿದ 50 ನಿಮಿಷಗಳ ದಾಖಲೀಕರಣವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ಶಾಲೆಗಳಲ್ಲಿ ಪ್ರಚುರಪಡಿಸಲಾಗುತ್ತಿದೆ. ಜು. 23ರ ಬೆಳಗ್ಗೆ 10ಕ್ಕೆ ಮಂಗಳೂರು ಶಕ್ತಿನಗರದ ಶಕ್ತಿ ಇಂಟರ್‌ನೇಶನಲ್‌ ಸ್ಕೂಲ್‌ನಲ್ಲಿ, ಜು. 25ರಿಂದ 31ರ ವರೆಗೆ ಕಾರ್ಗಿಲ್‌ ವಿಜಯ ದಿವಸದ ಅಂಗವಾಗಿ ಬೆಂಗಳೂರಿನಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆಯಿಂದ ಜು. 24ರಂದು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ ನಡೆಯುವ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ಪ್ರೇರಣ ಕಾರ್ಯಾಗಾರದಲ್ಲಿ ಅಜಿತ್‌ ಸ್ಮರಣಾರ್ಥ ಶಕುಂತಳಾ ಅವರನ್ನು ಸಮ್ಮಾನಿಸಲಾಗುತ್ತಿದೆ. ಇಂತಹವರಿಂದಲೇ ದೇಶಕ್ಕೆ ಅಕ್ಷಯವೂ, ಎಲ್ಲರಿಗೆ ನಿರ್ಭಯವೂ ಆಗಬೇಕು.

ಸಮರ್ಪಿತ ಜೀವನಕ್ಕಾಗಿ ರಾಷ್ಟ್ರದ ಹೆಮ್ಮೆ
“ನಾವು ನಿಮಗಾಗಿ ಹೆಮ್ಮೆ ಪಡುತ್ತೇವೆ’ಎಂದು ಎಷ್ಟು ಜನರಿಗೆ ರಾಷ್ಟ್ರ (ಪತಿ) ಹೇಳಬಹುದು? ಅಜಿತ್‌ ಭಂಡಾರ್‌ಕರ್‌ ಅವರ ಸೇವೆಯನ್ನು ಪರಿಗಣಿಸಿ 2001ರ ಅಕ್ಟೋಬರ್‌ 12ರಂದು ಅಂದಿನ ರಾಷ್ಟ್ರಪತಿ ಕೆ.ಆರ್‌. ನಾರಾಯಣ್‌ ಶೌರ್ಯಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡುವಾಗ ಪತ್ನಿ ಶಕುಂತಳಾ ಅವರನ್ನು ಉದ್ದೇಶಿಸಿ “ವಿ ಆರ್‌ ಪ್ರೌಡ್‌ ಆಫ್ ಯು’ ಎಂದು ಉದ್ಗರಿಸಿದರು. ರಾಷ್ಟ್ರಕ್ಕೇ ಆಗಲೀ, ಸಮಾಜಕ್ಕೇ ಆಗಲಿ ಸಮರ್ಪಿತ ಜೀವಗಳಿಗೆ ಮಾತ್ರ ನಾಲ್ಕು ಶ್ಲಾಘನೆಯ ಮಾತು ಸಿಗುತ್ತದೆ, ಇಲ್ಲವಾದರೆ “ಗರ್ಭದಲ್ಲಿ ತಾಯಿಗೆ, ಅನಂತರ ಭೂತಾಯಿಗೆ ಭಾರವಷ್ಟೆ’!

ಮದುವೆಯಲ್ಲಿ ಗಾಂಧಿಟೋಪಿ,ಯುದ್ಧಭೂಮಿಯಲ್ಲಿ ವೀರಾಗ್ರಣಿ
ಜಮ್ಮು ಕಾಶ್ಮೀರದೊಳಗೆ ಪಾಕಿಸ್ಥಾನದ ಉಗ್ರಗಾಮಿಗಳ ಅಟ್ಟಹಾಸವನ್ನು ಮಣಿಸುವ ಕಾರ್ಯಾಚರಣೆ ಕಾರ್ಗಿಲ್‌ ಯುದ್ಧ. ಅವರನ್ನು ಸದೆ ಬಡಿಯಲು ವಿಶೇಷ ತರಬೇತಿ ಹೊಂದಿದ ರಾಷ್ಟ್ರೀಯ ರೈಫ‌ಲ್ಸ್‌ (ಆರ್‌ಆರ್‌)ಗೆ ಸ್ವಯಂ ಇಚ್ಛೆಯಿಂದ ಹೋಗುವವರು ಕಡಿಮೆ. ಹಾಗಿದ್ದರೆ ದೇಶದ ಗಡಿ ಕಾಯುವವರು ಯಾರು ಎಂದು ಪ್ರಶ್ನಿಸಿ ಸ್ವಯಂ ಆಸಕ್ತಿಯಿಂದ ಈ ಹೊಣೆಗಾರಿಕೆಯನ್ನು ಅಜಿತ್‌ ಸ್ವೀಕರಿಸಿದರು. ಮದುವೆಯಲ್ಲಿ ವಿಶೇಷ ಪೇಟವನ್ನು ಒಲ್ಲೆ ಎಂದು ಗಾಂಧೀಟೋಪಿ ಧರಿಸಿದ್ದ ಅಜಿತ್‌ ಯುದ್ಧಭೂಮಿಯಲ್ಲಿ ವೀರಾಗ್ರಣಿ. ಪೂಂಛ… ಫೈಜಲಾಬಾದ್‌ನಲ್ಲಿ ಐವರು ಕಟ್ಟಾ ಉಗ್ರಗಾಮಿಗಳು ಅವಿತಿದ್ದಾಗ 25 ಆರ್‌ಆರ್‌ ತುಕಡಿಯ ಸೆಕಂಡ್‌ ಇನ್‌ ಕಮಾಂಡ್‌ ಆಗಿ ಕಾರ್ಯಾಚರಣೆ ಯಲ್ಲಿ ತಾನೇ ಮುಂದಾಗಿ ನಿಂತರು. ಒಬ್ಬನನ್ನು ಉರುಳಿಸಿದ ಬಳಿಕ ಅವಿತಿದ್ದ ಇನ್ನೊಬ್ಬ ಉಗ್ರಗಾಮಿ ಒಂದೇ ಸಮನೆ ಗುಂಡಿನ ಮಳೆಗೆರೆದ. ಗಾಯಗೊಂಡರೂಮುನ್ನುಗ್ಗಿದ ಅಜಿತ್‌ ಮತ್ತಿಬ್ಬರನ್ನು ಹೊಡೆದುರುಳಿಸಿದರು. ಗಂಭೀರ ಗಾಯಗೊಂಡ ಅಜಿತ್‌ 1999ರ ಅಕ್ಟೋಬರ್‌ 30ರಂದು (ಶನಿವಾರ) ಮರಣವನ್ನಪ್ಪಿದರು, ಇವರ ಕಾರ್ಯ ಇತರ ಸೈನಿಕರನ್ನು ಉಳಿಸಿತು.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next