ಬಳ್ಳಾರಿ: ಯುಪಿಎ ಅವಧಿಯಲ್ಲಿನ ಪ್ರಧಾನಿ ಮನಮೋಹನ್ ಸಿಂಗ್, ಇಂದಿನ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ತಮ್ಮದೇ ಆದ ನೆಲೆಯಲ್ಲಿ ಉತ್ತಮ ನಾಯಕರೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಗ್ಗುಬಾಟಿ ಪುರಂದರೇಶ್ವರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ನಾನು ಕೇಂದ್ರ ಸಚಿವೆಯಾಗಿದ್ದೆ. ಅವರ ಕಾರ್ಯವೈಖರಿ ಉತ್ತಮವಾಗಿದ್ದು, ಹಾಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿ ಸಹ ಮತ್ತೊಂದು ರೀತಿಯಲ್ಲಿ ಉತ್ತಮವಾಗಿದೆ. ಹಾಗಾಗಿ ತಮ್ಮದೇ ನೆಲೆಯಲ್ಲಿ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇಬ್ಬರೂ ಉತ್ತಮ ನಾಯಕರು ಎಂದರು.
ಕಾಂಗ್ರೆಸ್‌ನಿಂದ ಹೊರಬಂದ ಮೇಲೆ ಬಿಜೆಪಿಯಲ್ಲಿ ಅಧಿಕಾರ ಇಲ್ಲ ಎಂಬ ನೋವಿಲ್ಲ. ಸದ್ಯ ಪಕ್ಷದಲ್ಲಿ ಮುಖಂಡರಾಗಿ ಕೆಲಸ ಮಾಡುತ್ತಿರುವುದು ತೃಪ್ತಿ ತಂದಿದೆ. ಜನರ ಸೇವೆ ಮಾಡಲು ಅಧಿಕಾರ ಬೇಕು ಎಂದೇನಿಲ್ಲ. ಬಿಜೆಪಿ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಲಿದೆ. ಕಾರ್ಯಕರ್ತರಾದ ಬಳಿಕವೇ ಅಧಿ ಕಾರ ಸಿಗಲಿದೆ. ಅಲ್ಲದೇ, ಸದ್ಯ ನಾನು ಯಾವ ಪಕ್ಷ ಸೇರುವ ಚಿಂತನೆಯಿಲ್ಲ. ನಾನು ಕೊನೆಯವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಸಾಮಾಜಿಕ ನ್ಯಾಯ ಎನ್ನುತ್ತಿರುವ ಕಾಂಗ್ರೆಸ್ ಈ ಹಿಂದೆ ಡಾ| ಜಿ.ಪರಮೇಶ್ವರ ಅವರನ್ನು ಸಿಎಂ ಮಾಡಲಿಲ್ಲ. ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಧರ್ಮದ ಹೆಸರಲ್ಲಿ ಲಿಂಗಾಯತರನ್ನು ಒಡೆದಿದೆ ಎಂದರು.