ನಾಗ್ಪುರ: ಹೊತ್ತಿನ ಊಟಕ್ಕೆ ಒದ್ದಾಟ, ಸರಿಯಾದ ಕೆಲಸವಿಲ್ಲ, ವಿಪರೀತ ಬಡತನ, ಜೊತೆಗೆ ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯದಲ್ಲಿ ಜನನ… ಇಂತಹ ಪರಿಸ್ಥಿತಿಯಿದ್ದರೆ ಸಾಮಾನ್ಯವಾಗಿ ಜನ ಏನು ಮಾಡುತ್ತಾರೆ? ಜೀವವುಳಿಸಿಕೊಳ್ಳಲು ಮೊದಲ ಆದ್ಯತೆ ನೀಡುತ್ತಾರೆ.
ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಕುಖೇಡ ತೆಹ್ಸಿಲ್‌ನ ಚಿರ್ಚಾಡಿ ಎಂಬ ಹಳ್ಳಿಯ ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದ ಹಾಲಾಮಿ ಎಂಬ ವ್ಯಕ್ತಿ, ಈಗ ಅಮೆರಿಕದಲ್ಲಿ ವಿಜ್ಞಾನಿಯಾಗಿದ್ದಾರೆ. ಲಕ್ಷಾಂತರ ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಚಿರ್ಚಾಡಿಯಲ್ಲಿ ವಿಪರೀತ ಬಡತನ, ಊರಿನಲ್ಲಿ ವಾಸಿಸುವ ಎಲ್ಲರ ಪರಿಸ್ಥಿತಿಯೂ ಒಂದೇ. ಮುಂದೆ ತಂದೆ ಕಾಸನೂರಿಗೆ ಹೋದರು. ಅಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವ ಕೊಟ್ಟರು.
ಆಶ್ರಮಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಓದಿದ ಹಾಲಾಮಿ ಮುಂದೆ ನಾಗಪುರದ ಐಎಸ್ಸಿಯಲ್ಲಿ ರಾಸಾಯನಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. ಮುಂದೆ ಪ್ರೊಫೆಸರ್ ಹುದ್ದೆ ಪಡೆದರೂ ಸಂಶೋಧನೆ ನಿಲ್ಲಿಸಲಿಲ್ಲ. ಅಮೆರಿಕದ ಮಿಚಿಗನ್ ತಾಂತ್ರಿಕ ವಿವಿಯಿಂದ ಡಿಎನ್‌ಎ, ಆರ್‌ಎನ್‌ಎ ವಿಷಯದಲ್ಲಿ ಪಿಎಚ್‌ಡಿ ಮುಗಿಸಿದರು. ಈಗ ಮೇರಿಲ್ಯಾಂಡ್‌ನ ಸಿರ್ನಾಮಿಕ್ಸ್.ಇಂಕ್ ಕಂಪನಿಯಲ್ಲಿ ಆರ್‌ಎನ್‌ಎ ಸಂಶೋಧನಾ ವಿಜ್ಞಾನಿಯಾಗಿದ್ದಾರೆ!