ಕೀವ್ : ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕೀವ್ ನಲ್ಲಿ ಎರಡನೇ ಬಾರಿಗೆ
ಅಚ್ಚರಿಯ ಭೇಟಿಯಾಗಿದ್ದಾರೆ ಎಂದು ಉಕ್ರೇನ್ ಪ್ರೆಸಿಡೆನ್ಸಿ ತಿಳಿಸಿದೆ.
ಪ್ರಧಾನ ಮಂತ್ರಿ ಕಚೇರಿಯ ಪ್ರಕಾರ, ಜಾನ್ಸನ್ ಉಕ್ರೇನಿಯನ್ ಪಡೆಗಳಿಗೆ ಪ್ರಮುಖ ತರಬೇತಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.
ರಷ್ಯನ್ನರ ವಿರುದ್ಧ ಉಕ್ರೇನ್ ಗೆಲ್ಲಬಹುದು ಮತ್ತು ಗೆಲ್ಲುತ್ತದೆ ಎಂದು ನಮಗೆ ತಿಳಿದಿರುವ ಸತ್ಯವನ್ನು ತೋರಿಸುವುದು ನಮಗೆ ಅತ್ಯಗತ್ಯ ಎಂದು ಬೋರಿಸ್ ಜಾನ್ಸನ್ ಹೇಳಿರುವುದಾಗಿ ಅಂತಾರಾಷ್ಟ್ರೀಯ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಮತ್ತು ಇಟಲಿಪ್ರಧಾನಿ ಮಾರಿಯೋ ಡ್ರಾಗಿ ಅವರು ಗುರುವಾರ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಯೂರೋಪ್ ಒಕ್ಕೂಟಕ್ಕೆ ಸೇರಲು ಉಕ್ರೇನ್‌ನ ಉಮೇದುವಾರಿಕೆಯನ್ನು ಬೆಂಬಲಿಸುವುದಾಗಿ ಹೇಳಿದ ನಂತರ ಜಾನ್ಸನ್ ಅವರ ಮಹತ್ವದ ಭೇಟಿ ನಡೆಯುತ್ತಿದೆ.
ಯೂರೋಪಿಯನ್ ಯೂನಿಯನ್ ಗೆ ಉಕ್ರೇನ್ ಅನ್ನು ಸೇರ್ಪಡೆ ಮಾಡಿಕೊಳ್ಳದಂತೆ ದಾಳಿ ನಿರತ ರಷ್ಯಾ ತೀವ್ರ ವಿರೋಧ ತೋರುತ್ತಲೇ ಬಂದಿದೆ. ಈ ಭೇಟಿಯ ಬಳಿಕ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.